ಮೈತ್ರಿಕೂಟಕ್ಕೇ ವಿಜಯ

ರಾಮನಗರ : ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲ್ಲಲ್ಲಿದ್ದು, ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಯ ದಿಕ್ಕನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ಪತ್ನಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಪರಸ್ಪರ ಚರ್ಚೆ ಮಾಡಿ, ಒಮ್ಮತದ ತೀರ್ವನದ ಮೇಲೆಯೇ ಮೈತ್ರಿ ಸರ್ಕಾರ ರಚನೆ ಆಗಿದೆ. ಉಪಚುನಾವಣೆಲ್ಲೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್​ನ ಎಲ್ಲ ನಾಯಕರೂ ಬರಲಿದ್ದಾರೆ. ಪರಸ್ಪರ ಒಟ್ಟಾಗಿ ಐದೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.

ಆತಂಕ ಬಿಡಿ: ಎರಡು ದಶಕಗಳಿಂದ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇತ್ತು. ಇಂತಹ ಸಂದರ್ಭದಲ್ಲಿ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತಂಕ ಇರುವುದು ಸಹಜ. ಆದರೆ, ಈ ಮೈತ್ರಿ ರಾಮನಗರಕ್ಕೆ ಸೀಮಿತ ಅಲ್ಲ. ರಾಷ್ಟ್ರಮಟ್ಟದಲ್ಲಿಯೂ ಕರ್ನಾಟಕದಿಂದ ಹೊಸ ರಾಜಕೀಯ ಬದಲಾವಣೆ ಪ್ರಯೋಗಗಳಿಗೆ ಕಾರಣವಾಗಲಿದೆ. ಹಿಂದಿನ ಕಹಿ ಘಟನೆಗಳನ್ನು ಮರೆತು ಎರಡೂ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ದೂರದೃಷ್ಟಿಯ ರಾಜಕಾರಣ ಮಾಡೋಣ. ನಾನು ಈ ಹಿಂದೆಯೂ ಯಾವ ಪಕ್ಷದ ಕಾರ್ಯಕರ್ತರ ಮೇಲೆ ದ್ವೇಷದ ರಾಜಕಾರಣ ಮಾಡಿಲ್ಲ. ಹೀಗಾಗಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಬಳಿಕ ಮಿನಿ ವಿಧಾನಸೌಧದ ಮುಂಭಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಎರಡು ದಶಕಗಳಿಂದ ಈ ಕ್ಷೇತ್ರದ ಜನತೆ ನಮ್ಮ ಕುಟುಂಬವನ್ನು ಆಶೀರ್ವದಿಸುತ್ತ ಬಂದಿದ್ದೀರಿ. ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಇಲ್ಲಿಗೆ ರಾಜೀನಾಮೆ ನೀಡುವ ಪ್ರಸಂಗ ಬಂದೊದಗಿತು. ಆದರೆ ನನ್ನ ಕೊನೇ ಉಸಿರಿರುವವರೆಗೂ ರಾಮನಗರವನ್ನು ಮರೆಯುವುದಿಲ್ಲ ಎಂದರು. ಅನಿತಾ ಅಭ್ಯರ್ಥಿಯಾದರೂ ನಿಜವಾಗಿ ನೀವೇ ಅಭ್ಯರ್ಥಿಗಳು. ನೀವೇ ಪಕ್ಷದ ಮುಖಂಡರಂತೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿನ ಮುಸಲ್ಮಾನರು ಕಳೆದ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ಜೆಡಿಎಸ್​ಗೆ ಹೆಚ್ಚಿನ ಬೆಂಬಲ ನೀಡಿಲ್ಲ. ಈ ಬಾರಿ ವದಂತಿಗೆ ಕಿವಿಗೊಡಬಾರದು. ನನಗೆ ಒಕ್ಕಲಿಗರು ಮತ್ತು ನೀವೂ ಎಲ್ಲರೂ ಒಂದೇ ಎಂದರು.

ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಶಿವಮೊಗ್ಗದಲ್ಲಿಯೇ 8-10 ದಿನ ಪ್ರಚಾರ ಕೈಗೊಳ್ಳಲಿದ್ದೇನೆ ಎಂದರು.

ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಫಾರೂಕ್ ಅಹಮದ್, ಶಾಸಕರಾದ ಎ.ಮಂಜುನಾಥ್, ಗೋಪಾಲಯ್ಯ, ಮುಖಂಡರಾದ ಕಬ್ಬಡಿ ಬಾಬು, ಮರಿಲಿಂಗೇಗೌಡ, ದೂಂತೂರು ವಿಶ್ವನಾಥ್ ಇತರರು ಇದ್ದರು.

ಪ್ರೀತಿಯ ಸಿಟ್ಟು : ತಮ್ಮ ಸ್ಪರ್ಧೆಯ ಬಗ್ಗೆ ಎದ್ದಿದ್ದ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಜನತೆ ನನ್ನನ್ನೂ ಮನೆ ಮಗಳಾಗಿ ಸ್ವೀಕರಿಸಲಿದ್ದಾರೆ. ನಿರಂತರವಾಗಿ ರಾಮನಗರ ಕ್ಷೇತ್ರದ ಜನರ ಜತೆ ಸಂಪರ್ಕದಲ್ಲಿದ್ದೇನೆ. ಈಚೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕ್ಷೇತ್ರದ ಜನತೆಗೆ ಹೆಚ್ಚು ಸಿಗುತ್ತಿಲ್ಲ. ಹೀಗಾಗಿ ಕೆಲವರು ಸಿಟ್ಟು ವ್ಯಕ್ತಪಡಿಸಿದ್ದಾರೆ. ಅದು ಪ್ರೀತಿಯೇ ಹೊರತು ಸಿಟ್ಟಲ್ಲ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಸಿಟ್ಟು ಇದ್ದೇ ಇರುತ್ತದೆ. ಖಂಡಿತ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ.1ರಿಂದ ಬಡ್ಡಿರಹಿತ ಸಾಲ : ಮೀಟರ್ ದಂಧೆಯನ್ನು ನಿಯಂತ್ರಿಸಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ನ. 1ರಿಂದ ಜಾರಿಗೆ ಬರಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆ ಮೂಲಕ ಬೀದಿಬದಿ, ಸಣ್ಣ ವ್ಯಾಪಾರಿಗಳಿಗೆ ದಿನಕ್ಕೆ ಗರಿಷ್ಠ 10 ಸಾವಿರ ರೂ.ವರೆಗೂ ಸಾಲ ನೀಡಲಾಗುತ್ತದೆ ಎಂದರು.

ಮಾತಿಗೆ ಕಟ್ಟುಬಿದ್ದು ನಮ್ಮ ಕುಟುಂಬದವರನ್ನೇ ನಿಲ್ಲಿಸಿದೆ… : ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಎರಡೂ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಬೇಕಾಯಿತು. ಆದರೆ ಎರಡೂ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸುವ ಮೂಲಕ ರಾಜಕೀಯವಾಗಿ ಶಕ್ತಿ ತುಂಬಿದ್ದಾರೆ. ರಾಜೀನಾಮೆ ನೀಡುವ ಸಂದರ್ಭ ಜನರು, ನಿಮ್ಮ ಕುಟುಂಬದವರೇ ನಿಲ್ಲಬೇಕು ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ನಮ್ಮ ಕುಟುಂಬದವರನ್ನೇ ನಿಲ್ಲಿಸಬೇಕಾಯಿತು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ನನಗೆ ಆತಂಕವೇನೂ ಇರಲಿಲ್ಲ ಎಂದು ತಮ್ಮ ಕುಟುಂಬದ ಮೂರನೇ ವ್ಯಕ್ತಿಯ ಸ್ಪರ್ಧೆಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರ ಬೀಳಿಸುವ ಬಿಜೆಪಿಯ ವ್ಯರ್ಥ ಕಸರತ್ತಿಗೆ ಈ ಐದು ಕ್ಷೇತ್ರಗಳ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾರದ ಕಾಂಗ್ರೆಸ್ ನಾಯಕರು : ಮೈತ್ರಿ ಕೂಟದ ಅಭ್ಯರ್ಥಿ ಅನಿತಾ ನಾಮಪತ್ರ ಸಲ್ಲಿಕೆಗೆ ಜಿಲ್ಲೆಯ ಕಾಂಗ್ರೆಸ್​ನ ಯಾವುದೇ ನಾಯಕರು ಕಾಣಿಸಿಕೊಳ್ಳದೆ, ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಗೊಳಿಸಿದರು. ಸಚಿವ ಡಿ.ಕೆ.ಶಿವಕುಮಾರ್, ಸಂಸದ ಸುರೇಶ್, ಬಂಡಾಯ ಬಾವುಟ ಹಾರಿಸಿದ್ದ ಸಿ.ಎಂ.ಲಿಂಗಪ್ಪ, ಇಕ್ಬಾಲ್ ಹುಸೇನ್ ಸೇರಿ ಜಿಲ್ಲೆಯ ಹಿರಿಯ, ಕಿರಿಯ ನಾಯಕರ್ಯಾರೂ ಕಾಣಿಸಿಕೊಳ್ಳಲೇ ಇಲ್ಲ. ಆದರೆ, ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಹಾಜರಿದ್ದರು.