ಮೈಗ್ರೇನ್ ನಿವಾರಣೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಮೈಗ್ರೇನ್ ಕೂಡ ಒಂದು. ಒತ್ತಡದಿಂದ ಅರ್ಧ ತಲೆಶೂಲೆ ಕಾಡುತ್ತಿದೆ ಎಂಬುದು ಅರ್ಧಸತ್ಯ. ಅರ್ಧ ತಲೆಶೂಲೆಗೆ ಕಾರಣ ನಮ್ಮ ಹೊಟ್ಟೆ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರಮಾಣಿತವಾಗುತ್ತಿರುವ ವಿಷಯ. ತಲೆಯ ಅರ್ಧಭಾಗಕ್ಕೆ ಮಾತ್ರ ನೋವು ಬಂದಿರುತ್ತದೆ. ಎರಡು ಗಂಟೆಯಿಂದ 72 ತಾಸುಗಳ ತನಕ ಶೂಲೆ ಇರಬಹುದು. ನಂತರ ಕಡಿಮೆಯಾಗುತ್ತದೆ. ಆದರೆ ಅನೇಕರಿಗೆ ಮತ್ತೆ ಮತ್ತೆ ಕಾಡುತ್ತದೆ. ಇದು ತೊಂದರೆಗೆ ಕಾರಣವಾಗುದೆ. ಸಾಮಾನ್ಯವಾಗಿ ತಲೆನೋವು ಎಂಬುದು ನಮ್ಮ ದೇಹದಲ್ಲಿರುವ ಬೇರೆ ಸಮಸ್ಯೆಗಳ ಚಿಹ್ನೆಯೇ ಹೊರತಾಗಿ ಇನ್ನೇನಲ್ಲ. ಕೆಲವರಲ್ಲಿ ಮಾತ್ರ ಅದು ತಲೆಯಲ್ಲಿನ ತೊಂದರೆಯಿಂದಾಗಿ ಬಂದಿರುತ್ತದೆ.

ಕರುಳಿನ ಬ್ಯಾಕ್ಟೀರಿಯಾಗಳ ಅಸಮತೋಲನವು ಮೈಗ್ರೇನ್​ಗೆ ಕಾರಣವಾಗುತ್ತಿದೆ. ನಮ್ಮ ಕರುಳಿನಲ್ಲಿ ಮಿಲಿಯನ್​ಗಟ್ಟಲೆ ಬ್ಯಾಕ್ಟೀರಿಯಾಗಳಿವೆ. ಅವುಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ಕೆಟ್ಟ ಬ್ಯಾಕ್ಟೀರಿಯಾಗಳು ಅಧಿಕವಾದಲ್ಲಿ ಅವು ಒಳ್ಳೆಯ ಬ್ಯಾಕ್ಟೀರಿಯಾಗಳ ನಾಶಕ್ಕೆ ಕಾರಣವಾಗಿಬಿಡುತ್ತವೆ. ಆದರೆ ಒಳ್ಳೆಯ ಬ್ಯಾಕ್ಟೀರಿಯಾಗಳು ಅಧಿಕವಾಗಿದ್ದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹತೋಟಿಯಲ್ಲಿಟ್ಟು ಆರೋಗ್ಯರಕ್ಷಣೆಗೆ ದಾರಿ ಮಾಡುತ್ತವೆ.

ಮೈಗ್ರೇನ್​ಗೂ ಕರುಳಿನಲ್ಲಿನ ಬ್ಯಾಕ್ಟೀರಿಯಾಗಳ ಅಸಮತೋಲನವೇ ಕಾರಣವಾಗಿದ್ದಲ್ಲಿ ಕರುಳನ್ನು ಸರಿಪಡಿಸುವುದರ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ಅಗತ್ಯ ಆಹಾರ ಬದಲಾವಣೆಯಿಂದ ಕರುಳನ್ನು ಸರಿ ಮಾಡಲು ಸಾಧ್ಯ. ಕರುಳಿಗೆ ಪ್ರಿಯವಾದ ಫರ್ವೆಂಟೆಡ್ ಗಂಜಿ, ಸೋರ್ ಕ್ರೋಟ್ ಮಾಡಿ ನಿಯಮಿತವಾಗಿ ಸೇವಿಸಬೇಕು. ಇದರಿಂದ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರೀ-ಪ್ರೋಬಯೋಟಿಕ್ ಆಹಾರವನ್ನು ಸ್ವೀಕರಿಸಬೇಕು. ಹುದುಗಿಸಿದ ಆಹಾರಪದಾರ್ಥಗಳು ಈ ನಿಟ್ಟಿನಲ್ಲಿ ಹೆಚ್ಚು ಸಹಕಾರಿ.

ಮೈಗ್ರೇನ್ ಕಡಿಮೆಯಾಗಲು ವಾರಕ್ಕೆ ಎರಡು ಬಾರಿ ವಮನಧೌತಿ ಮಾಡುವುದು ಪೂರಕ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಉಪ್ಪು ಸೇರಿಸಿದ ಉಗುರುಬೆಚ್ಚಗಿನ ನೀರನ್ನು ಕುಡಿಯಬೇಕು. ಕುಡಿದ ಅಷ್ಟೂ ನೀರು ವಾಪಾಸ್ ಆಗುವವರೆಗೂ ಕುಡಿಯುತ್ತಿರಬೇಕು. ಈ ಕ್ರಿಯೆಗೆ ವಮನಧೌತಿ ಎನ್ನಲಾಗುತ್ತದೆ. ಕುಡಿದ ನೀರು ತಾನಾಗಿಯೇ ವಾಂತಿಯಾಗದಿದ್ದಲ್ಲಿ 7ರಿಂದ 8 ಗ್ಲಾಸ್ ಕುಡಿದ ನಂತರ ತುದಿಗಾಲಿನಲ್ಲಿ ಕುಳಿತು ಎಡಗೈಯನ್ನು ಹೊಟ್ಟೆಯ ಮೇಲಿಟ್ಟು ಬಲಗೈಯನ್ನು ಗಂಟಲೊಳಗೆ ಹಾಕಿ ಕುಡಿದ ನೀರನ್ನು ಹೊರಹಾಕಬೇಕು. ಬೂದುಗುಂಬಳಕಾಯಿ ಹಾಗೂ ಶುಂಠಿ ಹಾಕಿ ಹಸಿದ ಹೊಟ್ಟೆಯಲ್ಲಿ ಬೆಳಗ್ಗಿನ ಉಪಹಾರಕ್ಕೂ ಮೊದಲು ಕುಡಿಯಬೇಕು. ಇದರಿಂದ ಮೈಗ್ರೇನ್ ಕಡಿಮೆಯಾಗಲು ಸಾಧ್ಯ. ಹೆಚ್. ಫೈಲೋರಿ ಎಂಬ ಕೆಟ್ಟ ಬ್ಯಾಕ್ಟೀರಿಯಾಗಳು ಕಡಿಮೆ ಆಗುವುದಕ್ಕೂ ಸಹಕಾರಿ.

ಮೈಗ್ರೇನ್ ಇರುವವರಿಗೆ ಸಾಮಾನ್ಯವಾಗಿ ಹೈಪರ್ ಅಸಿಡಿಟಿ ಸಮಸ್ಯೆ ಇರುತ್ತದೆ. ಮೈಗ್ರೇನ್ ಕಡಿಮೆಯಾಗಲು ಹೈಪರ್ ಅಸಿಡಿಟಿ ಕಡಿಮೆಯಾಗುವುದೂ ಮುಖ್ಯ. ಆದ್ದರಿಂದ ಸಮಸ್ಯೆಯ ಸಂಪೂರ್ಣ ಪರಿಹಾರಕ್ಕೆ ಮೊದಲು ಹೊಟ್ಟೆಯನ್ನು ಶುದ್ಧ ಮಾಡಿಕೊಳ್ಳಬೇಕು. ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಕಡಿಮೆ ಮಾಡಿಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಪ್ರಕೃತಿಚಿಕಿತ್ಸೆಯ ದೇಹಶುದ್ಧಿ ಕ್ರಮಗಳು ಇದಕ್ಕೆ ನೆರವಾಗುತ್ತವೆ.

One Reply to “ಮೈಗ್ರೇನ್ ನಿವಾರಣೆ ಹೇಗೆ?”

Leave a Reply

Your email address will not be published. Required fields are marked *