ಮೇವು ಸಮಸ್ಯೆ ನಿವಾರಣೆಗೆ ಕಸರತ್ತು

ಚಿಕ್ಕಬಳ್ಳಾಪುರ : ಮುಂಬರುವ ದಿನಗಳಲ್ಲಿ ಮೇವಿನ ಸಮಸ್ಯೆ ಉಂಟಾಗದಿರಲು ಈಗಲೇ ಹೆಚ್ಚಿನ ಮೇವು ಉತ್ಪಾದನೆಗೆ ಜಿಲ್ಲಾಡಳಿತ ಕಸರತ್ತು ನಡೆಸುತ್ತಿದೆ.

ಜಿಲ್ಲೆಯ ರಾಸುಗಳ ಜನಗಣತಿ, ಅಗತ್ಯ ಮೇವು ಉತ್ಪಾದನೆ ಮತ್ತು ಖರ್ಚಿನ ಅಂದಾಜು ಮೇಲೆ 23.52 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಯನ್ನು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ರೂಪಿಸಿದೆ.

2012ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ಹಸು, ಎಮ್ಮೆ, ಕುರಿ, ಮೇಕೆ ಸೇರಿ 2,93,479 ಜಾನುವಾರುಗಳಿವೆ. ಪ್ರಸ್ತುತ 1,57,923 ಟನ್ ಒಣ ಮೇವು ಲಭ್ಯವಿದ್ದು, ಸರಾಸರಿ 15 ವಾರಗಳಿಗೆ ಸಾಕಾಗುತ್ತದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ. ಆದರೆ, ವಾಸ್ತವವಾಗಿ ಹಲವೆಡೆ ಮೇವಿನ ಕೊರತೆ ಮತ್ತು ಬೇಡಿಕೆ ಹೆಚ್ಚಳವಿದ್ದು, ನಿರ್ವಹಣೆ ಮತ್ತು ರೋಗದ ಸಮಸ್ಯೆ, ನೀರಿನ ಹಾಹಾಕಾರದಿಂದ ರೈತರು ರಾಸುಗಳನ್ನು ಕಡಿಮೆ ದರಕ್ಕೆ ಮಾರುತ್ತಿದ್ದಾರೆ.

ಮೇವಿಗಾಗಿ ಮೂರು ಮಾರ್ಗ: ಮೇವಿನ ಸಮಸ್ಯೆ ನಿವಾರಣೆಗೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಜಿಲ್ಲಾಡಳಿತಕ್ಕೆ ಮೂರು ಸಲಹೆ ನೀಡಿದೆ. ಮೊದಲನೆಯದು ರಾಜ್ಯದ ವಿವಿಧ ಜಿಲ್ಲೆಗಳಿಂದ ಒಣ ಮೇವು ಖರೀದಿಸುವುದು. ಇದಕ್ಕೆ ಪ್ರತಿ ಟನ್​ಗೆ 9 ಸಾವಿರದಿಂದ 11 ಸಾವಿರ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಎರಡನೇಯದು ಸರ್ಕಾರಿ ಜಮೀನುಗಳಲ್ಲಿ ಇಲಾಖೆಯಿಂದಲೇ ಮೇವು ಬೆಳೆಯುವುದು. 1 ಎಕರೆಯಲ್ಲಿ 10 ಟನ್ ಹಸಿರು ಮೇವು ಬೆಳೆಯಬಹುದು. ಇದರಲ್ಲಿ 3.3 ಟನ್ ಒಣ ಮೇವು ಸಿಗುತ್ತದೆ. ಇದಕ್ಕೆ 23,786 ರೂಪಾಯಿ ಖರ್ಚಾಗುತ್ತದೆ. ಜತೆಗೆ ಸಾಗಣೆ ಹೊರೆ ಬೇರೆ. ಮೂರನೇಯದು ಕೋಚಿಮುಲ್ ಒಡಂಬಡಿಕೆ ಮಾದರಿಯಲ್ಲಿ ಉಚಿತ ಬೀಜದ ಜತೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ರೈತರ ಜಮೀನುಗಳಲ್ಲಿ ಮೇವು ಬೆಳೆಯುವುದು. ಇದರಿಂದ ಸಾಗಣೆ ವೆಚ್ಚ ತಪ್ಪುತ್ತದೆ.

ಕ್ರಿಯಾಯೋಜನೆ : ಜಿಲ್ಲೆಯ 26 ಹೋಬಳಿಗಳಲ್ಲಿ ಪಶು ಆರೋಗ್ಯ ಶಿಬಿರಕ್ಕೆ 8.62 ಕೋಟಿ ರೂ, ಮೇವಿನ 52 ಬ್ಯಾಂಕುಗಳ ಸ್ಥಾಪನೆಗೆ 10.40 ಕೋಟಿ ರೂ, ಔಷಧ ಮತ್ತು ಲವಣ ಮಿಶ್ರಣಗಳ ಖರೀದಿಗೆ 3 ಕೋಟಿ ರೂ., ಮೇವಿನ 60 ಸಾವಿರ ಮಿನಿ ಕಿಟ್​ಗಳ ವಿತರಣೆಗೆ 1.50 ಕೋಟಿ ರೂ ಸೇರಿ 23.52 ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಒಟ್ಟಾರೆ 2500 ಎಕರೆ ಪ್ರದೇಶದಲ್ಲಿ ಮೇವು ಬೆಳೆಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಪರಿಹಾರ ಕಾರ್ಯ: ಈ ಸಾಲಿನಲ್ಲಿ ಜಿಲ್ಲೆಗೆ ಪೂರೈಕೆಯಾದ 74,185 ಮೇವಿನ ಕಿರುಪೊಟ್ಟಣಗಳ ಪೈಕಿ 43,479 ಪೊಟ್ಟಣಗಳನ್ನು ವಿತರಿಸಲಾಗಿದೆ. ಇದರಿಂದ ಸುಮಾರು 71,800 ಮೆಟ್ರಿಕ್ ಟನ್ ಒಣ ಮೇವು ಲಭ್ಯವಾಗಲಿದ್ದು, ಇದು 7 ವಾರಕ್ಕೆ ಸಾಕಾಗುತ್ತದೆ. 30,706 ಮೇವಿನ ಪೊಟ್ಟಣಗಳು ಪಶು ಆಸ್ಪತ್ರೆಗಳಲ್ಲಿ ದಾಸ್ತಾನಿದ್ದು, ಹೆಚ್ಚುವರಿಯಾಗಿ 43 ಮಿನಿ ಕಿಟ್ ಗಳ ಅಗತ್ಯವಿದೆ ಎಂದು ಇಲಾಖೆ ತಿಳಿಸಿದೆ.