ಮೇಯರ್ ಹುದ್ದೆಗೆ ಬಿಜೆಪಿಯಲ್ಲಿ ಪೈಪೋಟಿ: ಮುಂದಿನ ತಿಂಗಳ ಕೊನೆಯಲ್ಲಿ ಚುನಾವಣೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದ ನಂತರ ಇದೀಗ ಬಿಬಿಎಂಪಿಯಲ್ಲಿ ಮೈತ್ರಿ ಅಡಳಿತ ಅಂತ್ಯವಾಗಿಸಲು ಬಿಜೆಪಿ ಮುಂದಾಗಿದೆ. ಅದಕ್ಕೂ ಮುನ್ನ ಮುಂದಿನ ಮೇಯರ್ ಅಭ್ಯರ್ಥಿ ಯಾರಾಗಬೇಕೆಂಬ ಚರ್ಚೆ ಶುರುವಾಗಿದ್ದು, ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ವರಿಷ್ಠರಿಗೆ ಒತ್ತಡ ಹೇರುವ ಕೆಲಸದಲ್ಲಿ ತೊಡಗಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿದ್ದ ಮೈತ್ರಿ ಆಡಳಿತ ಈ ಬಾರಿ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಶಾಸಕರು ಮತ್ತು ಸಂಸದರ ನೆರವಿನೊಂದಿಗೆ ಬಿಬಿಎಂಪಿ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್-ಜೆಡಿಎಸ್ ಈ ಬಾರಿ ಮೇಯರ್ ಕುರ್ಚಿಯನ್ನು ಬಿಜೆಪಿಗೆ ಬಿಟ್ಟುಕೊಡಬೇಕಿದೆ. ಬೆಂಗಳೂರಿನ 4 ಕಾಂಗ್ರೆಸ್ ಮತ್ತು ಒಬ್ಬರು ಜೆಡಿಎಸ್ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿರುವ ಹಿನ್ನೆಲೆಯಲ್ಲಿ ಅವರು ಮತದಾನದಲ್ಲಿ ಪಾಲ್ಗೊಳ್ಳುವಂತಿಲ್ಲ. ಜತೆಗೆ ಆ ಶಾಸಕರ ಬೆಂಬಲಿಗ ಬಿಬಿಎಂಪಿ ಸದಸ್ಯರು ಮೈತ್ರಿ ಪಕ್ಷಗಳ ವಿರುದ್ಧವಾಗಿ ಮತ ಚಲಾಯಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಮೈತ್ರಿ ಪಕ್ಷದ ಮತದಾರರ ಸಂಖ್ಯೆ ಕಡಿಮೆಯಾದಂತಾಗಿದ್ದು, ಬಿಜೆಪಿ ಮೇಲುಗೈ ಸಾಧಿಸಿದಂತಾಗಿದೆ. ಅದರ ಪರಿಣಾಮ ಈ ಬಾರಿ ಮೇಯರ್ ಮತ್ತು ಉಪಮೇಯರ್ ಹುದ್ದೆ ಬಿಜೆಪಿಗೆ ಸಿಗುವ ಎಲ್ಲ ಸಾಧ್ಯತೆಗಳಿದ್ದು, ಅದಕ್ಕಾಗಿ ಆಕಾಂಕ್ಷಿಗಳು ಈಗಿನಿಂದಲೇ ಲಾಬಿ ಶುರುವಿಟ್ಟುಕೊಂಡಿದ್ದಾರೆ.

ಮುಂದಿನ ತಿಂಗಳು ಚುನಾವಣೆ: ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ಉಪಮೇಯರ್ ಭದ್ರೇಗೌಡ ಅವಧಿ ಸೆ. 28ಕ್ಕೆ ಅಂತ್ಯವಾಗಲಿದೆ. ಅದರಿಂದಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಆಕಾಂಕ್ಷಿಗಳು ತಾವು ಮೇಯರ್ ಅಭ್ಯರ್ಥಿ ಎಂಬುದನ್ನು ಬಿಜೆಪಿ ವರಿಷ್ಠರಲ್ಲಿ ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಬಿಂಬಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ.

ಪಕ್ಷೇತರರು ಅತಂತ್ರ?

ಕಳೆದ ನಾಲ್ಕು ವರ್ಷಗಳಿಂದ ಮೈತ್ರಿ ಆಡಳಿತಕ್ಕೆ ಬೆಂಬಲ ಸೂಚಿಸಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆದಿದ್ದ ಬಿಬಿಎಂಪಿಯ ಪಕ್ಷೇತರ ಸದಸ್ಯರು ಈ ಬಾರಿ ಅತಂತ್ರರಾಗಲಿದ್ದಾರೆ. ಏಕೆಂದರೆ, ಬಿಜೆಪಿಗೆ ಮೇಯರ್ ಹುದ್ದೆಗೇರಲು ಯಾರ ಬೆಂಬಲವೂ ಬೇಡವಾಗಿದೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಿಡಿಯುವ ಆಸಕ್ತಿಯನ್ನೇ ತೋರುತ್ತಿಲ್ಲ. ಹೀಗಾಗಿ ಪಕ್ಷೇತರ ಸದಸ್ಯರನ್ನು ಯಾವ ಪಕ್ಷದವರೂ ಕೇಳದಂತಾಗಿದೆ. ಅದರ ಪರಿಣಾಮ ಪಕ್ಷೇತರ 7 ಸದಸ್ಯರಿಗೆ ಕೊನೆಯ ವರ್ಷ ಯಾವುದೇ ಅಧಿಕಾರ ಸಿಗುವುದು ಅನುಮಾನ.

ಗಾದಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವರು

ಸಂಖ್ಯಾಬಲವಿದ್ದರೂ ಕಳೆದ ನಾಲ್ಕು ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕುಳಿತಿದ್ದ ಬಿಜೆಪಿಯ ಹಿರಿಯ ಸದಸ್ಯರು ಕೊನೆಯ ವರ್ಷದಲ್ಲಿ ಮೇಯರ್ ಆಗುವ ಉತ್ಸಾಹದಲ್ಲಿದ್ದಾರೆ. ಅದರಂತೆ ಹಾಲಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಉಮೇಶ್​ಶೆಟ್ಟಿ, ಎಲ್.ಶ್ರೀನಿವಾಸ್, ಮಂಜುನಾಥರಾಜು ಸೇರಿ ಇನ್ನಿತರರು ಮೇಯರ್ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. ಅವರುಗಳು ಈಗಾಗಲೆ ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಅಭ್ಯರ್ಥಿಯನ್ನಾಗಿ ಮಾಡಿಸುವಂತೆ ತಾವು ಬೆಂಬಲಿಸುವ ನಾಯಕರ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ.

ಬೆಂಬಲಿಗರಿಗೆ ಸ್ಥಾನ ಕೊಡಿಸಲು ಸಚಿವರಿಗೆ ಧರ್ಮಸಂಕಟ

ತಾವು ಸೋತಾಗ, ಚುನಾವಣೆ ಎದುರಿಸಿದಾಗೆಲ್ಲ ಜತೆಗಿದ್ದ ಬಿಬಿಎಂಪಿ ಸದಸ್ಯರಿಗೆ ಮೇಯರ್ ಅಥವಾ ಉಪಮೇಯರ್ ಹುದ್ದೆ ದೊರಕಿಸಿಕೊಡುವುದಕ್ಕೆ ಶಾಸಕರು ಓಡಾಡುವಂತಾಗಿದೆ. ಯಾವುದೇ ಹುದ್ದೆ ಪಡೆಯದೆ ಕೇವಲ ಶಾಸಕರಾಗಿದ್ದವರು ತಮ್ಮ ಅಭ್ಯರ್ಥಿ ಪರವಾಗಿ ಸಲೀಸಾಗಿ ಬ್ಯಾಟಿಂಗ್ ಮಾಡಬಹುದಾಗಿದೆ. ಇದರಿಂದ ಈಗಷ್ಟೇ ಸಚಿವರಾದ ಅಶೋಕ್, ವಿ.ಸೋಮಣ್ಣ, ಡಾ. ಅಶ್ವತ್ಥನಾರಾಯಣ್ ಅವರಿಗೆ ತಮ್ಮ ಬೆಂಬಲಿಗ ಸದಸ್ಯರಿಗೆ ಮೇಯರ್ ಹುದ್ದೆ ಕೊಡಿಸಲು ಲಾಬಿ ಮಾಡಲು ಸಾಧ್ಯವಾಗದಂತಾಗಿದೆ. ಹೀಗಾಗಿ ಬಹುತೇಕ ಆಕಾಂಕ್ಷಿಗಳು ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್, ಸತೀಶ್​ರೆಡ್ಡಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ತಮ್ಮ ಪರವಾಗಿ ವಾದ ಮಂಡಿಸುವಂತೆ ದಂಬಾಲು ಬೀಳುತ್ತಿದ್ದಾರೆ. ಆಸೆ ಬಿಟ್ಟ ಕಾಂಗ್ರೆಸ್

ಮೈತ್ರಿ ಸರ್ಕಾರ ಪತನಕ್ಕೂ ಮುನ್ನ ಮೇಯರ್ ಮತ್ತು ಉಪಮೇಯರ್ ಹುದ್ದೆಗಾಗಿ ಕಾಂಗ್ರೆಸ್​ನಲ್ಲೂ ಕಸರತ್ತು ನಡೆದಿತ್ತು. ಯಾವಾಗ ರಾಜ್ಯದಲ್ಲಿ ಮೈತ್ರಿ ಆಡಳಿತ ಕೊನೆಗೊಂಡಿತೋ ಆ ಕ್ಷಣದಿಂದ ಮೇಯರ್ ಹುದ್ದೆಯ ಆಸೆಯನ್ನೇ ಕೈ ಸದಸ್ಯರು ಕೈಬಿಟ್ಟಿದ್ದಾರೆ. ಯಾವುದೇ ಪ್ರಕ್ರಿಯೆಯನ್ನೂ ನಡೆಸದೆ ಕಾಂಗ್ರೆಸ್ ಸದಸ್ಯರು ಸುಮ್ಮನಾಗಿಬಿಟ್ಟಿದ್ದಾರೆ. ಈ ಬಗ್ಗೆ ಹಿರಿಯ ಕಾಂಗ್ರೆಸ್ ಸದಸ್ಯರನ್ನು ಕೇಳಿದರೆ, ಶಾಸಕರ ಸಂಖ್ಯೆ ಕಡಿಮೆಯಿದ್ದರೂ ಬಿಬಿಎಂಪಿಯ ಬಿಜೆಪಿ ಸದಸ್ಯರನ್ನು ಸೆಳೆದು ಅಧಿಕಾರ ಹಿಡಿಯಬಹುದಿತ್ತು. ಆದರೆ, ನಮ್ಮ ಸರ್ಕಾರವಿಲ್ಲದ ಮೇಲೆ ಆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಯಾವುದೇ ಪೈಪೋಟಿಯನ್ನು ನೀಡುವುದಿಲ್ಲ ಎಂಬ ಉತ್ತರ ನೀಡುತ್ತಾರೆ.

 

Leave a Reply

Your email address will not be published. Required fields are marked *