More

  ಮೇದಿನಿಯಲ್ಲಿ ತಂಗಿದ ಜಿಲ್ಲಾಡಳಿತ

  ಕಾರವಾರ: ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಮೇದಿನಿ ಎಂಬ ಕುಗ್ರಾಮಕ್ಕೆ ಶನಿವಾರ ಜಿಲ್ಲಾಡಳಿತವೇ ಆಗಮಿಸಿತ್ತು.

  ವಾರ್ತಾ ಇಲಾಖೆಯಿಂದ ಅಲ್ಲಿ ಗ್ರಾಮ ವಾಸ್ತವ್ಯ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ. ರೋಶನ್ ಸೇರಿ ಹಿರಿಯ ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಶನಿವಾರ ರಾತ್ರಿ ಉಳಿದು ಗ್ರಾಮಸ್ಥರ ಸಮಸ್ಯೆ ಆಲಿಸಿದರು.

  ಗ್ರಾಮಸ್ಥರನ್ನು ಮುಖ್ಯ ವಾಹಿನಿಗೆ ತರಲು ಹಲವು ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಕುಮಟಾ ಎಸಿ ಅಜಿತ ಎಂ., ಹೊನ್ನಾವರ ಡಿಎಫ್​ಒ ಗಣಪತಿ, ಡಿಎಚ್​ಒ ಡಾ.ಜಿ.ಎನ್. ಅಶೋಕ ಕುಮಾರ, ತಹಸೀಲ್ದಾರ್ ಮೇಘರಾಜ ನಾಯ್ಕ, ಜಿಪಂ ಸದಸ್ಯ ಜಿ.ಎನ್. ಪೈ, ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ, ಸೊಪ್ಪಿನ ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಪಾರ್ವತಿ, ಹಿರಿಯ ಪತ್ರಕರ್ತ ವಸಂತ ಕುಮಾರ ಕತಗಾಲ ಇದ್ದರು. ಗ್ರಾಮದ ಮೊದಲ ಪದವೀಧರೆ ಮೈತ್ರಿ ಸ್ವಾಗತಿಸಿದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಕಾರ್ಯಕ್ರಮ ನಿರೂಪಿಸಿದರು.

  ತೋರಣ ಹಾಕಿ ಸ್ವಾಗತಿಸಿದ ಗ್ರಾಮಸ್ಥರು: ಜಿಲ್ಲಾಧಿಕಾರಿ ಆಗಮನದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾವಿನ ತೋರಣ ಕಟ್ಟಿ, ಬ್ಯಾನರ್ ಹಾಕಿ, ಡೊಳ್ಳು ಕುಣಿತದೊಂದಿಗೆ ಸ್ವಾಗತಿಸಿದರು. ಈ ವೇಳೆ ಗ್ರಾಮಸ್ಥ ಕೃಷ್ಣ ಗೌಡ ಮಾತನಾಡಿ, ಹುಲಿದೇವರ ಕೊಡ್ಲಿನಿಂದ ಮೇದಿನಿಗೆ ಕಚ್ಚಾ ರಸ್ತೆ ಇದೆ. ಮಳೆಗಾಲ ಬಂದಾಕ್ಷಣ ಎಲ್ಲ ಕೊಚ್ಚಿ ಹೋಗುತ್ತದೆ. ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಕಂಬಳಿ ಜೋಲಿಯಲ್ಲಿ ಹೊತ್ತು 7 ಕಿಮೀಗೆ ತೆರಳಬೇಕು. ಇದರಿಂದ ಪಕ್ಕಾ ರಸ್ತೆ ಮಾಡಿಕೊಡಬೇಕು. ಪ್ರತಿ ವರ್ಷ ಮಳೆಗಾಲದಲ್ಲಿ ಮರ ಬಿದ್ದು, ಕನಿಷ್ಠ 15 ವಿದ್ಯುತ್ ಕಂಬಗಳಿಗೆ ಹಾನಿಯಾಗುತ್ತದೆ. ವರ್ಷದಲ್ಲಿ 6 ತಿಂಗಳ ಮಾತ್ರ ವಿದ್ಯುತ್ ಇರುತ್ತದೆ. ಇದರಿಂದ 4 ಕಿಮೀ ನೆಲದಡಿ ವಿದ್ಯುತ್ ಕೇಬಲ್ ಹಾಕಿ ಕೊಡಬೇಕು. ಗ್ರಾಮಕ್ಕೆ ಪಡಿತರ ಧಾನ್ಯ ತಲುಪಿಸಲಾಗುತ್ತಿದೆ. ಅದರ ದಾಸ್ತಾನಿಗೆ ಕೊಠಡಿ ಕೊಡಬೇಕು. ಆಶ್ರಯ ಮನೆ ಒದಗಿಸಬೇಕು ಎಂದು ವಿನಂತಿಸಿದರು.

  ಏಕೆ ಮೇದಿನಿಯಲ್ಲಿ ವಾಸ್ತವ್ಯ?: ಆರು ತಿಂಗಳ ಹಿಂದೆ ‘ವಿಜಯವಾಣಿ’ ಸೇರಿ ವಿವಿಧ ಮಾಧ್ಯಮಗಳಲ್ಲಿ ಮೇದಿನಿ ಗ್ರಾಮಸ್ಥರ ಸಮಸ್ಯೆಯ ಸಮಗ್ರ ವರದಿ ಪ್ರಕಟವಾಗಿತ್ತು. ಇಲ್ಲಿನ ಗಂಡು ಮಕ್ಕಳಿಗೆ ಹೆಣ್ಣು ಕೊಡುವುದೂ ಕಷ್ಟ ಎಂದು ಸಮಸ್ಯೆ ಗಂಭೀರತೆ ಬಿಂಬಿಸಲಾಗಿತ್ತು.ಅದನ್ನು ನೋಡಿದ ಇನ್ಪೋಸಿಸ್ ಫೌಂಡೇಷನ್​ನ ಸುಧಾ ಮೂರ್ತಿ ತಾವು ಹಣ ನೀಡುವುದಾಗಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದರು. ಸಿಎಂ ಸೂಚನೆಯಂತೆ ಜೂ. 21 ರಂದು ಭೇಟಿ ನೀಡಿ ಪರಿಶೀಲಿಸಿದ್ದರು. ಅದರ ಮುಂದುವರಿದ ಭಾಗವಾಗಿ ಜಿಲ್ಲಾಡಳಿತ ವಾರ್ತಾ ವಾಸ್ತವ್ಯ ಆಯೋಜನೆಯಾಗಿದೆ.

  89 ಗ್ರಾಮಸ್ಥರ ಆರೋಗ್ಯ ತಪಾಸಣೆ: ಶನಿವಾರ ಬೆಳಗ್ಗೆಯಿಂದ ಮೇದಿನಿಯ 89 ಗ್ರಾಮಸ್ಥರ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಳಿಯಾಳದ ಸಿದ್ದು ಬಿರಾದಾರ್ ಅವರಿಂದ ಗೊಂಬೆಯಾಟ, ಸಿದ್ದಿ ಡುಮಾಮಿ ಅವರಿಂದ ನೃತ್ಯ ಪ್ರದರ್ಶನಗೊಂಡಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇಬ್ಬರಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಲಾಯಿತು. ನಾಲ್ವರಿಗೆ ವೃದ್ಧಾಪ್ಯ ವೇತನ ವಿತರಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts