ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಭದ್ರಾವತಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಪ್ರಸಾರ ವೇಳೆ ಕರೆಂಟ್ ತೆಗೆದರೆ ನೀವು ಇರಲ್ಲ, ನಿಮ್ಮ ಆಫೀಸೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ ಎಂಬ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಸಹಾಯಕ ಕಾರ್ಯಪಾಲ ಎಂಜಿನಿಯರ್ ಸತೀಶ್ ನ್ಯೂಟೌನ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಈ ದೂರಿಗೆ ನ್ಯಾಯಾಲಯದ ಅನುಮತಿ ಪಡೆದ ಪೊಲೀಸ್ ಇಲಾಖೆ ಬೆದರಿಕೆ ಪ್ರಕರಣ ದಾಖಲಿಸಿದೆ. ಅಂಚೆ ಕಾರ್ಡ್​ನಲ್ಲಿ ಇಲ್ಲಿನ ಮೆಸ್ಕಾಂ ಕಚೇರಿಗೆ ಬಂದಿರುವ ಈ ಬೆದರಿಕೆಯಲ್ಲಿ ‘ನೀವು ರಾಜಕೀಯ ಪುಡಾರಿಗಳ, ಎಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಅವರ ಕುಮ್ಮಕ್ಕಿನಿಂದ ಕರೆಂಟ್ ತೆಗೆದ್ರೆ ನಿಮಗೂ, ನಿಮ್ಮ ಆಫೀಸ್​ಗೆ ಸರಿಯಾದ ಬಾಂಬ್ ಫಿಕ್ಸ್ ಮಾಡುತ್ತೇವೆ. ಈ ಮಾಹಿತಿಯನ್ನು ಶಿವಮೊಗ್ಗ ಎಂಆರ್​ಎಸ್ ಕೆಇಬಿ ಆಫೀಸ್​ಗೂ ನೀಡಿ ಎಚ್ಚರಿಸಿದ್ದೇವೆ. ಮಾ.30ರ ಶನಿವಾರ ಸಂಜೆ ಏನಾದ್ರು ಮಿಸ್ಸಾಗಿ ಕರೆಂಟ್ ಹೋದ್ರೆ ನಿಮ್ ಜೀವ ಹೋಗುತ್ತೆ. ಎಚ್ಚರಿಕೆ, ಎಚ್ಚರಿಕೆ. ಇದರಲ್ಲಿ ರಾಜಕೀಯ ಬೇಡ.’ ಇಂತಿ ಪ್ರಜ್ಞಾ ನಾಗರಿಕರು, ಬಿಜೆಪಿ ಶಾಮ ಎಂಬ ಮಾಹಿತಿ ಇದೆ.