ನಟ, ಯಶ್, ಕೆಜಿಎಫ್, ವಿದ್ಯುತ್, ಬೆದರಿಕೆ

ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಸಾರದ ಸಮಯದಲ್ಲಿ ವಿದ್ಯುತ್ ಪೂರೈಕೆ ಕಡಿತ ಮಾಡಿದರೆ ಹುಷಾರ್ ಎಂದು ಬೆದರಿಕೆ ಪತ್ರ ಬಂದಿರುವ ಬಗ್ಗೆ ಶುಕ್ರವಾರ ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇಬ್ಬರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭದ್ರಾವತಿಯಲ್ಲಿ ಮಾರ್ಚ್ 30ರಂದು ವಿದ್ಯುತ್ ಪೂರೈಕೆ ಕಡಿತ ಮಾಡಿದರೆ ಹುಷಾರ್.., ನೀವೂ ಇರಲ್ಲ, ನಿಮ್ಮ ಆಫೀಸೂ ಇರಲ್ಲ, ಸುಟ್ಟು ಭಸ್ಮ ಮಾಡುತ್ತೇವೆಂದು ಅನಾಮಧೇಯ ಪತ್ರವೊಂದು ಗುರುವಾರ ಭದ್ರಾವತಿ ಮೆಸ್ಕಾಂ ಇಂಜಿನಿಯರ್ ಕಚೇರಿಗೆ ತಲುಪಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಮೆಸ್ಕಾಂ ಎಇಇ ಸುರೇಶ್ ನ್ಯೂಟೌನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾ.30ರಂದು ಕೆಜಿಎಫ್ ಚಿತ್ರ ಟಿವಿಯಲ್ಲಿ ಪ್ರಸಾರವಾಗಲಿದ್ದು, ಕರೆಂಟ್ ತೆಗೆದರೆ ನಿಮ್ಮ ಆಫೀಸ್​ಗೆ ಬಾಂಬ್ ಫಿಕ್ಸ್ ಮಾಡ್ತೀವಿ ಎಂದು ಅಂಚೆ ಪತ್ರದಲ್ಲಿ ಬರೆದಿದ್ದು, ಶನಿವಾರ ಸಂಜೆ ಕರೆಂಟ್ ಕಡಿತಗೊಳಿಸದಂತೆ ಎಚ್ಚರಿಕೆ ನೀಡಲಾಗಿದೆ.

ಅನಾಮಧೇಯ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದು, ಮೆಸ್ಕಾಂ ಕಚೇರಿಗೆ ಶುಕ್ರವಾರ ಬೆಳಗ್ಗೆಯೇ ವಿಧ್ವಂಸಕ ಕೃತ್ಯ ನಿಷ್ಕ್ರಿಯ ತಂಡ ಪರಿಶೀಲಿಸಿತು. ಯಾವುದೇ ವಿಧ್ವಂಸಕ ವಸ್ತುಗಳು ಪತ್ತೆಯಾಗಿಲ್ಲ. ಮುಂಜಾಗ್ರತೆಯಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಎಸ್ಪಿ ಡಾ. ಎಚ್.ಟಿ.ಶೇಖರ್ ‘ವಿಜಯವಾಣಿ’ಗೆ ತಿಳಿಸಿದರು.

ಸಾಂಘಿಕ ಶಕ್ತಿಯಿಂದ ಮಹತ್ತರ ಸಾಧನೆ

ಸಾಗರ: ಕೈಗೊಳ್ಳುವ ಕಾಯಕದಲ್ಲಿ ಶ್ರದ್ಧೆ, ಛಲ ಮತ್ತು ನಂಬಿಕೆ ಇರಬೇಕು. ಸಾಂಘಿಕ ಶಕ್ತಿಯಿಂದ ಮಹತ್ತರ ಸಾಧನೆ ಸಾಧ್ಯ. ಅದಕ್ಕೆ ಎಂದಿಗೂ ಸೋಲಿಲ್ಲ ಎಂದು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಭೀಮನಕೋಣೆ, ಕಾನುಗೋಡು ಮತ್ತು ಪುರಪ್ಪೆಮನೆ ವಲಯಗಳ ಆಶ್ರಯದಲ್ಲಿ ಏರ್ಪಡಿಸಿದ್ದ ದಶಸೀಮಾ ವಲಯ ದಶಮಾನ ಕಾರ್ಯಕ್ರಮ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಒಂದು ಉತ್ತಮ ಕೆಲಸ ಮಾಡುವುದು ತಪಸ್ಸಿದ್ದಂತೆ ಎಂದರು.

ನಮ್ಮ ಮನೆ, ಸಂಸ್ಕೃತಿ ಬಿಟ್ಟು ಹೊರಗೆ ಹೋಗುತ್ತಿರುವ ಮನಸ್ಸುಗಳು ತಮ್ಮೂರ ಸಹಜ ಬದುಕಿನ ಮಹತ್ವ ತಿಳಿಯಬೇಕು. ಪಟ್ಟಣದ ಯಾಂತ್ರಿಕ ಜೀವನ ಅಹಿತವಾದರೂ ಸಹಿಸುವ ಪ್ರಯತ್ನಕ್ಕಿಂತ ಸಹಜತೆಗೆ ಒತ್ತು ನೀಡಿ. ಭಗವಂತನ ಸಾಕ್ಷಾತ್ಕಾರವಾಗಬೇಕಾದರೆ ಅಂತರಂಗ ಶುದ್ಧಿ ಇರಬೇಕು. ಕಾಯಾ ವಾಚಾ ಮನಸಾ ದೇವರ ಧ್ಯಾನ ಮಾಡಬೇಕು. ಯಾವುದೆಲ್ಲ ನಮ್ಮದು ಎಂದುಕೊಂಡಿದ್ದೇವೋ ಅದಾವುದೂ ನಮ್ಮದಲ್ಲ. ಧಾರ್ವಿುಕ ನಂಬಿಕೆ ಮತ್ತು ಶ್ರದ್ಧಾಭಕ್ತಿ ನಮ್ಮನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ಹಿರಿಯ ಸಾಧಕರಾದ ನರಸಿಂಹರಾವ್ ಮಾರುತಿಪುರ, ಸತ್ಯನಾರಾಯಣ ಜೋಯ್್ಸ ಬಾಣಿಗ, ಪಿ.ಡಿ.ಶ್ರೀಧರರಾವ್ ಭೀಮನಕೋಣೆ, ಭಾಗಿ ಸತ್ಯನಾರಾಯಣ ಹೆಗ್ಗೋಡು, ಟಿ.ಮಂಜುನಾಥ್ ಕೇಶವಪುರ ಅವರಿಗೆ ಸನ್ಮಾನಿಸಲಾಯಿತು.

ಹವ್ಯಕ ಮಂಡಲದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಮಂಡಲದ ಕಾರ್ಯವೈಖರಿ ಕುರಿತು ಮಾತನಾಡಿದರು. ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಶ್ಯಾಂ ಭಟ್ ಬೇಕಾರ್ಡವು, ಲಕ್ಷ್ಮೀ ನಾರಾಯಣ ದೇವಾಲಯ ಸಮಿತಿ ಅಧ್ಯಕ್ಷ ಐಸಿರಿ ಗುರುಪ್ರಸಾದ್, ಕಲ್ಯಾಣ ಮಂದಿರ ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಧರ, ಸುಬ್ರಹ್ಮಣ್ಯ, ಚಂದ್ರಶೇಖರ್, ನಂದಿತಳೆ ಮಂಜುನಾಥ್, ದಿವಾಕರ್ ಹೊನ್ನೇಸರ ಇದ್ದರು.