ಮೆರವಣಿಗೆಯಲ್ಲಿ ಸಾಂಸ್ಕೃತಿಕ ಸೊಬಗು

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಶುಕ್ರವಾರ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹಾಗೂ ಅವರ ಪತ್ನಿ ಸತ್ಯಭಾಮ, ಕಸಾಪ ಅಧ್ಯಕ್ಷ ಮನು ಬಳಿಗಾರ ಅವರನ್ನು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ದಾರಿಯುದ್ದಕ್ಕೂ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಳದಿ- ಕೆಂಪು ಬಾವುಟ ಪ್ರದರ್ಶಿಸುತ್ತಾ ಹೆಜ್ಜೆ ಹಾಕಿದರು.

ಕನ್ನಡಪರ ಸಂಘಟನೆಯವರು ಸಾವಿರ ಮೀಟರ್ ಉದ್ದದ ಕೆಂಪು- ಹಳದಿ ಕನ್ನಡ ಧ್ವಜ ಹಿಡಿದು ಗಮನ ಸೆಳೆದರು. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘ- ಸಂಸ್ಥೆಗಳು ಪದಾಧಿಕಾರಿಗಳು ಒಂದೇ ಬಣ್ಣದ ಸೀರೆಯುಟ್ಟು, ತಲೆ ಮೇಲೆ ಕುಂಭ ಹೊತ್ತು ಸಾಗಿ ಮೆರವಣಿಗೆಗೆ ಶೋಭೆ ತಂದರು.

ಧಾರವಾಡದ ಕೆಲಗೇರಿಯ ದುರ್ಗಾದೇವಿ ಜಗ್ಗಲಗಿ ಮೇಳ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂತ ಶಿಶುನಾಳ ಶರೀಫರು, ಭಕ್ತ ಕನಕದಾಸರ ವೇಷಧಾರಿಗಳು, ವರಕವಿ ಬೇಂದ್ರೆ ಅವರ ಸ್ತಬ್ಥಚಿತ್ರ, ವಿವಿಧ ಕಲಾ ಮೇಳಗಳು, ಕನ್ನಡ ಧ್ವಜದ ಬಣ್ಣದ ಕೊಡೆಗಳು, ವಾಹನದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಮೆರವಣಿಗೆಯ ಮೆರಗು ಹೆಚ್ಚಿಸಿದವು.

ಕೆಸಿಡಿ ಆವರಣದಿಂದ ಆರಂಭವಾದ ಮೆರವಣಿಗೆ ಜ್ಯುಬಿಲಿ ವೃತ್ತ, ಹಳೇ ಬಸ್ ನಿಲ್ದಾಣ ವೃತ್ತ, ವಿವೇಕಾನಂದ ವೃತ್ತ, ಅಂಜುಮನ್ ವೃತ್ತ, ಕಾಪೋರೇಶನ್ ವೃತ್ತ, ಹಳೇ ಎಸ್ಪಿ ಕೇಚರಿ, ರಾಣಿ ಚನ್ನಮ್ಮಳ ಉದ್ಯಾನ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಕೃಷಿ ವಿವಿ ಆವರಣ ತಲುಪಿತು.