More

  ಮೆರವಣಿಗೆಗೆ ಸಂಸ್ಕೃತಿ ಇಲಾಖೆ ಮೆರುಗು

  ಉಡುಪಿ: ಶ್ರೀಕೃಷ್ಣ ಸೇವಾ ಬಳಗ, ನಗರಸಭೆ ಹಾಗೂ ಜಿಲ್ಲಾಡಳಿತದಿಂದ ಅದಮಾರು ಪರ್ಯಾಯಕ್ಕೆ ಸಕಲ ಸಿದ್ಧತೆ ನಡೆದಿದೆ. ಜೋಡುಕಟ್ಟೆಯಿಂದ ಪ್ರಾರಂಭವಾಗುವ ಮೆರವಣಿಗೆಯಲ್ಲಿ ಪ್ರಥಮ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಜಾನಪದ ತಂಡಗಳು ಆಗಮಿಸಲಿವೆ. ಪರ್ಯಾಯ ಮೆರವಣಿಗೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದ್ದು, ಮೊದಲಿಗೆ ಬಿರುದಾವಳಿಗಳು, ಜಾನಪದ ತಂಡಗಳು, ವೇದಘೋಷ ತಂಡ, ಲಕ್ಷ್ಮೀ ಶೋಭಾನೆ ತಂಡಗಳ ನಂತರ ಪರ್ಯಾಯ ಪೀಠವೇರುವ ಸ್ವಾಮೀಜಿ ಹಾಗೂ ಉಳಿದ ಸ್ವಾಮೀಜಿಯವರು ಶಿಷ್ಟಾಚಾರದ ಪ್ರಕಾರ ಮೇನೆಯಲ್ಲಿ ಆಗಮಿಸಲಿದ್ದಾರೆ. ಇವರ ಹಿಂದಿನಿಂದ ಟ್ಯಾಬ್ಲೋಗಳು, ಇತರ ಪ್ರದರ್ಶನ ವಾಹನಗಳು ಸಾಗಿ ಬರಲಿವೆ. ಶ್ರೀಗಳ ಮೇನೆ ಹೊರುವ ಜವಾಬ್ದಾರಿಯನ್ನು ಜಿಲ್ಲಾ ಬ್ರಾಹ್ಮಣ ಸಂಘಕ್ಕೆ ವಹಿಸಿಕೊಡಲಾಗಿದೆ ಎಂದು ಸೇವಾ ಬಳಗ ಗೌರವಾಧ್ಯಕ್ಷ ಹಾಗೂ ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಗರಸಭೆಯಿಂದ ಸ್ವಚ್ಛತಾ ಜಾಗೃತಿ, ಕೃಷಿ ಇಲಾಖೆಯಿಂದ ಕೃಷಿ ಸೊಬಗು, ಪ್ರವಾಸೋದ್ಯಮ ಇಲಾಖೆಯಿಂದ ತುಳುನಾಡ ಸೃಷ್ಟಿ, ಜಿಪಂನಿಂದ ವಿಶೇಷ ಭಜನಾ ತಂಡಗಳ ಟ್ಯಾಬ್ಲೋಗಳು, ಪೂರ್ಣಕುಂಭ ತಂಡ, 4 ಗೊಂಬೆತಂಡ, 7 ಚೆಂಡೆಬಳಗ, 1 ಪಂಚವಾದ್ಯ ತಂಡ, 20 ಜನರ ಕೊಂಬುವಾದನ ತಂಡ, ನಾಗಸ್ವರ ತಂಡ, ಸ್ಯಾಕ್ಸೋಫೋನ್ ತಂಡ, ಚೆಂಡೆ ಮತ್ತು ಕೋಲಾಡ ತಂಡ, ತಮಟೆ ಮತ್ತು ನಗಾರಿ ತಂಡ, ಮರಕಾಲು ಕುಣಿತ, ಭಾರತ ಸೇವಾದಳ, ಹರೇರಾಮ ಹರೇಕೃಷ್ಣ ತಂಡ, ಬಣ್ಣದ ಕೊಡೆಗಳ ತಂಡ, ಮಲ್ಲಕಂಬ ತಂಡಗಳು ಈ ಬಾರಿಯ ಮೆರವಣಿಗೆಯಲ್ಲಿ ಮೆರುಗು ಹೆಚ್ಚಿಸಲಿವೆ ಎಂದರು.ನಗರದ ಎಲ್ಲ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ. ಸುಮಾರು 400 ಕಂಬಗಳಲ್ಲಿ 800 ಗೂಡುದೀಪಗಳನ್ನು ಸಾಲು ಸಾಲಾಗಿ ಜೋಡಿಸಲಾಗಿದೆ. ಸ್ವಚ್ಛತೆಗೆ 80 ಜನ ಹೆಚ್ಚುವರಿ ಸಿಬ್ಬಂದಿಯನ್ನು ನಗರಸಭೆಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ನಗರದ ವಿವಿಧೆಡೆ ಇ-ಶೌಚಗೃಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಸೇವಾ ಬಳಗದ ಗೋವಿಂದರಾಜ್, ಪ್ರದೀಪ್ ರಾವ್, ಸುಬ್ರಹ್ಮಣ್ಯ ಮಾರ್ಪಳ್ಳಿ, ಸಂತೋಷ್, ಚೈತನ್ಯ ಎಂ.ಜಿ. ಸುದ್ದಿಗೋಷ್ಠಿಯಲ್ಲಿದ್ದರು.

  ಬಿಗು ಪೊಲೀಸ್ ಭದ್ರತೆ: ಪರ್ಯಾಯ ಮಹೋತ್ಸವಕ್ಕೆ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎಸ್‌ಪಿ 1, ಅಡಿಷನಲ್ ಎಸ್ಪಿ 1, 8-ಡಿವೈಎಸ್ಪಿ, 23 ಪೊಲೀಸ್ ನಿರೀಕ್ಷಕರು, 65 ಪಿಎಸ್‌ಐ, 193 ಎಎಸ್‌ಐ, 289 ಹೆಡ್‌ಕಾನ್‌ಸ್ಟೆಬಲ್ ಹಾಗೂ 530 ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ 1110 ಅಧಿಕಾರಿ, ಸಿಬ್ಬಂದಿ, 300 ಗೃಹರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. 4 ಕೆಎಸ್‌ಆರ್‌ಪಿ, 10 ಡಿಎಆರ್, 5 ವಿಧ್ವಂಸಕ ಕೃತ್ಯ ಪತ್ತೆ ತಂಡವನ್ನು ನಿಯೋಜಿಸಲಾಗಿದೆ. ಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣ ಮಠದ ವಠಾರ ಮತ್ತು ಸರ್ವೀಸ್ ಬಸ್ ನಿಲ್ದಾಣದ ಬಳಿ ಹೊರಠಾಣೆ ತೆರೆಯಲಾಗಿದೆ. ಅಂಬಾಗಿಲು, ಇಂದ್ರಾಳಿ, ಕುಕ್ಕಿಕಟ್ಟೆ, ಬಲಾಯಿಪಾದೆ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ದಿನದ 24 ಗಂಟೆ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಡ್ರೋನ್‌ಗಳ ಹಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ತಿಳಿಸಿದೆ.

  ಸಾಧಕರಿಗೆ ಸನ್ಮಾನ: ಅದಮಾರು ಪರ್ಯಾಯ ದರ್ಬಾರ್‌ನಲ್ಲಿ 21 ಗಣ್ಯರನ್ನು ಸನ್ಮಾನಿಸಲಾಗುತ್ತದೆ. ಹಿರಿಯ ವಿದ್ವಾಂಸ ಲಕ್ಷ್ಮೀನಾರಾಯಣ ಶರ್ಮ ಪಡುಬಿದ್ರಿ, ಶ್ರೀನಿವಾಸ ಅಡಿಗ ಸಾಲಿಗ್ರಾಮ, ಡಾ.ಸತ್ಯನಾರಾಯಣ ಆಚಾರ್ಯ ಅವರನ್ನು ಗೌರವಿಸಲಾಗುತ್ತದೆ. ಪರ್ಯಾಯ ವಿಶೇಷ ಗೌರವ ಪುರಸ್ಕಾರಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಡಾ.ಕೆ.ಶ್ರೀಹರಿ ಬೆಂಗಳೂರು, ಡಾ.ರಂಜನ್ ಆರ್. ಪೈ, ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಮೈಸೂರು ರಾಮಚಂದ್ರ ಆಚಾರ್ಯ, ಯಕ್ಷಗಾನದಲ್ಲಿ ಗೋಪಾಲರಾವ್ ಹಿರಿಯಡ್ಕ, ವೈದ್ಯಕೀಯದಲ್ಲಿ ಡಾ.ಜಿ.ಎಸ್. ಚಂದ್ರಶೇಖರ್ ಭಾಜನರಾಗಿದ್ದಾರೆ. ಶ್ರೀಹರಿಗುರು ಸೇವಾ ಗೌರವವಕ್ಕೆ ಎಸ್.ಕೃಷ್ಣ ಮೂರ್ತಿ ಭಟ್ ಸೂರಾಲು, ರಾಮಪ್ರಸಾದ್ ಭಟ್ ಚೆನ್ನೈ, ಗುಂಡ್ಮಿ ವೆಂಕಟರಮಣ ಸೋಮಯಾಜಿ, ವಿಜಯಕುಮಾರ್ ಬೆಂಗಳೂರು, ರಾಘವೇಂದ್ರ ರಾವ್ ಹೈದರಾಬಾದ್, ರಮಾನಂದ ಆಚಾರ್ಯ ಕಾರ್ಕಳ, ಡಾ.ಯು.ಪಿ. ಉಪಾಧ್ಯಾಯ, ಸರಸ್ವತಿ ವೆಂಕಟರಮಣ ಭಟ್, ದಾಸ ಶೇರಿಗಾರ್, ಕೇಶವರಾಯ ಪ್ರಭು, ರಾಮಚಂದ್ರ ಭಟ್ ಶಾನಾಡಿ ಪಾತ್ರರಾಗಿದ್ದಾರೆ. ಶ್ರೀ ನರಸಿಂಹ ತೀರ್ಥ ಪ್ರಶಸ್ತಿಗೆ ಬಲಿಪ ನಾರಾಯಣ ಭಾಗವತ್ ಆಯ್ಕೆಯಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts