ಮೆಡಿಕಲ್ ಸೀಟ್ ವಂಚಕನ ಸೆರೆ

ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಿಹಾರ ಮೂಲದ ಮುಖೇಶ್ ಕುಮಾರ್(34) ಬಂಧಿತ. ಕಳೆದ 8 ವರ್ಷಗಳ ಹಿಂದೆ ಹೆಣ್ಣೂರು ಸಮೀಪ ‘ಫ್ಯೂಚರ್ ಎಜ್ಯುಕೇಷನ್’ ಕನ್ಸಲ್ಟೆನ್ಸಿ ಕಚೇರಿ ತೆರೆದಿದ್ದ. ತನಗೆ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರ ಪರಿಚಯವಿದ್ದು, ಮೆಡಿಕಲ್ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಗೆ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚನೆ ಮಾಡುತ್ತಿದ್ದ.

ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಶನಿವಾರ ಕಚೇರಿ ಮೇಲೆ ನಡೆಸಿ ಮುಖೇಶ್​ನನ್ನು ಬಂಧಿಸಲಾಗಿದೆ. ದಾಳಿ ವೇಳೆ ಪ್ರಭಾತ್, ಲೋಹಿತ್ ಎಂಬುವರು ತಪ್ಪಿಸಿಕೊಂಡಿದ್ದು, ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.

ಮುಖೇಶ್ ಗ್ಯಾಂಗ್​ನಿಂದ ಹಲವು ವಿದ್ಯಾರ್ಥಿಗಳಿಗೆ ವಂಚನೆ ಆಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *