ಮೆಟ್ರೋ ನಿಗಮಕ್ಕೆ ಲಕ್ಷಾಂತರ ರೂ. ಹರಿವು

ಬೆಂಗಳೂರು: ಸ್ಮಾರ್ಟ್​ಕಾರ್ಡ್​ನಲ್ಲಿ ಕನಿಷ್ಠ 50 ರೂ. ಇರಲೇಬೇಕು ಎಂಬ ಹೊಸ ನಿಯಮದಿಂದ ಒಂದೇ ದಿನದಲ್ಲಿ ಅಂದಾಜು 10-13 ಲಕ್ಷ ರೂ.ವರೆಗೆ ಹೆಚ್ಚುವರಿ ಠೇವಣಿ ಬಿಎಂಆರ್​ಸಿಎಲ್​ಗೆ ಹರಿದುಬಂದಿದೆ.

ಪ್ರಯಾಣಿಕರ ವಿರೋಧದ ನಡುವೆಯೂ ಹೊಸ ನಿಯಮವನ್ನು ನಿಗಮ ಮುಂದುವರಿಸಿದೆ. ಮೆಟ್ರೋ ಸ್ಮಾರ್ಟ್​ಕಾರ್ಡ್ ಖರೀದಿಸಿದ ಪ್ರಯಾಣಿಕರೆಲ್ಲರೂ ನಿತ್ಯದ ಮೆಟ್ರೋ ಪ್ರಯಾಣಿಕರಲ್ಲ. 16 ಲಕ್ಷಕ್ಕೂ ಅಧಿಕ ಜನ ಮೆಟ್ರೋ ಸ್ಮಾರ್ಟ್​ಕಾರ್ಡ್ ಖರೀದಿಸಿದ್ದಾರೆ. ಆದರೆ, ಈ ಪೈಕಿ ನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ 2-2.5 ಲಕ್ಷವಷ್ಟೇ. ಮೆಟ್ರೋ ರೈಲನ್ನು ವಿರಳವಾಗಿ ಬಳಸುವ ಸಾವಿರಾರು ಪ್ರಯಾಣಿಕರೂ ಅಗತ್ಯವಿಲ್ಲದಿದ್ದರೂ ಸ್ಮಾರ್ಟ್​ಕಾರ್ಡ್​ಗೆ 50 ರೂ. ತುಂಬಿಸಬೇಕಾದ ಸ್ಥಿತಿ ನಿರ್ವಣವಾಗಿದೆ.

ಬಿಎಂಆರ್​ಸಿಎಲ್ ಮಾ.27ರಂದು ಮುನ್ಸೂಚನೆ ನೀಡದೆ ಏಕಾಏಕಿ ಹೊಸ ನಿಯಮ ಅನುಷ್ಠಾನಗೊಳಿಸಿತ್ತು. ಸ್ಮಾರ್ಟ್​ಕಾರ್ಡ್​ನಲ್ಲಿ 50 ರೂ. ಇಲ್ಲದಿದ್ದಲ್ಲಿ ಪ್ಲಾಟ್​ಫಾರಂ ಪ್ರವೇಶಿಸಲು ಆಟೋಮ್ಯಾಟಿಕ್ ಫೇರ್ ಕಲೆಕ್ಟರ್ (ಎಎಫ್​ಸಿ) ಗೇಟ್ ತೆರೆಯುತ್ತಿರಲಿಲ್ಲ. ಹೀಗಾಗಿ ಸಾವಿರಾರು ಪ್ರಯಾಣಿಕರು ಅಗತ್ಯವಿಲ್ಲದಿದ್ದರೂ ಸ್ಮಾರ್ಟ್​ಕಾರ್ಡ್​ಗೆ ಕನಿಷ್ಠ 50 ರಿಂದ 100 ರೂ.ವರೆಗೆ ರಿಚಾರ್ಜ್ ಮಾಡಿಸಿಕೊಂಡಿದ್ದಾರೆ.

ಠೇವಣಿ ದಿಢೀರ್ ಏರಿಕೆ: ಮಾ.26ರಂದು ಸ್ಮಾರ್ಟ್​ಕಾರ್ಡ್ ರಿಚಾರ್ಜ್​ನಿಂದ 62.99 ಲಕ್ಷ ರೂ. ಸಂಗ್ರಹವಾಗಿತ್ತು. ಕನಿಷ್ಠ 50 ರೂ. ಕಡ್ಡಾಯ ನಿಯಮ ಜಾರಿ ಬಳಿಕ ಮಾ.27ರಂದು 72.86 ಲಕ್ಷ ರೂ. ಹಾಗೂ ಮಾ.28ರಂದು 76.24 ಲಕ್ಷ ರೂ. ಮೊತ್ತವನ್ನು ಜನ ಸ್ಮಾರ್ಟ್​ಕಾರ್ಡ್​ಗೆ ರಿಚಾರ್ಜ್ ಮಾಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಿತ್ಯ ಸ್ಮಾರ್ಟ್​ಕಾರ್ಡ್ ರಿಚಾರ್ಜ್​ನಿಂದ 40-55 ಲಕ್ಷ ರೂ.ವರೆಗೆ ಸಂಗ್ರಹವಾಗುತ್ತದೆ. ನಿತ್ಯ ಸ್ಮಾಟ್​ಕಾರ್ಡ್ ಬಳಸುವ ಪ್ರಯಾಣಿಕರು ತಿಂಗಳ ಆರಂಭದಲ್ಲಿ ಸಾವಿರಾರು ರೂ. ರಿಚಾರ್ಜ್ ಮಾಡಿಸುವುದರಿಂದ 90 ಲಕ್ಷ ರೂ.ವರೆಗೆ ಸಂಗ್ರಹವಾಗುತ್ತದೆ.

ನಿಗಮಕ್ಕೆ ಲಾಭ: ನಿಗಮಕ್ಕೆ ಸ್ಮಾರ್ಟ್​ಕಾರ್ಡ್ ಬ್ಯಾಂಕ್ ಠೇವಣಿ ಇದ್ದಂತೆ. ನಿತ್ಯ ಮೆಟ್ರೋ ಬಳಸುವ ಪ್ರಯಾಣಿಕರು ತಿಂಗಳಿಗೆ ಕನಿಷ್ಠ 2 ರಿಂದ 3 ಸಾವಿರ ರೂ. ರಿಚಾರ್ಜ್ ಮಾಡಿಸುತ್ತಾರೆ. ವಾರಕ್ಕೆ ಒಂದೆರಡು ದಿನ ಮೆಟ್ರೋ ಬಳಸುವ ಪ್ರಯಾಣಿಕರೂ 200-500 ರೂ.ವರೆಗೆ ರಿಚಾರ್ಜ್ ಮಾಡಿಸಿಕೊಳ್ಳುತ್ತಾರೆ. 2016-17ರಲ್ಲಿ 28.28 ಕೋಟಿ ರೂ., 2017-18ರಲ್ಲಿ 140 ಕೋಟಿ ರೂ. ಹಾಗೂ 2018-19ರಲ್ಲಿ 195 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿತ್ತು. ನಿಗಮಕ್ಕೆ ಲಕ್ಷಾಂತರ ರೂ.ಗಳ ಬಡ್ಡಿ ಠೇವಣಿ ಹಣದಿಂದಲೇ ಬರುತ್ತಿದೆ.

ತಪ್ಪದ ಮೆಟ್ರೋ ಪ್ರಯಾಣಿಕರ ಪರದಾಟ

ನಿಗಮದ ನೂತನ ನಿಯಮದಿಂದ ಪ್ರಯಾಣಿಕರು ಇಂದಿಗೂ ಪರದಾಡುತ್ತಿದ್ದಾರೆ. ದಟ್ಟಣೆ ಅವಧಿಯಲ್ಲಿ ಟೋಕನ್ ಪಡೆದುಕೊಳ್ಳುವ ಸಾಲಿನಲ್ಲೇ ನಿಂತು ಸ್ಮಾರ್ಟ್​ಕಾರ್ಡ್ ರಿಚಾರ್ಜ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಎಫ್​ಸಿ ಗೇಟ್ ಬಳಿ ಇರುವ ಗ್ರಾಹಕ ಸೇವಾಕೇಂದ್ರದಲ್ಲಿ ಸ್ಮಾರ್ಟ್​ಕಾರ್ಡ್ ರಿಚಾರ್ಜ್​ಗೆ ಪ್ರಸ್ತುತ ಅವಕಾಶ ನೀಡಲಾಗುತ್ತಿಲ್ಲ. ಟ್ವಿಟ್ಟರ್​ನಲ್ಲಿ ಸಾವಿರಾರು ಜನರು ಈ ಕುರಿತು ಮನವಿ ಸಲ್ಲಿಸಿದರೂ ನಿಗಮದ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ಲಾಭದ ಚಿಂತೆಯಲ್ಲಿರುವ ನಿಗಮದ ಹಿರಿಯ ಅಧಿಕಾರಿಗಳಿಗೆ ಸಾಮಾನ್ಯ ಪ್ರಯಾಣಿಕರ ಸಮಸ್ಯೆ ಅರ್ಥವಾಗುತ್ತಿಲ್ಲ.

ಶೇ.50ಕ್ಕೂ ಹೆಚ್ಚು ಪ್ರಯಾಣಿಕರು ಸ್ಮಾರ್ಟ್

ನಮ್ಮ ಮೆಟ್ರೋದಲ್ಲಿ ನಿತ್ಯ 3.5 ರಿಂದ 4 ಲಕ್ಷ ಜನರು ಪ್ರಯಾಣಿಸುತ್ತಾರೆ. ನಾಯಂಡಹಳ್ಳಿ- ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಶೇ.65.86 ಪ್ರಯಾಣಿಕರು ಹಾಗೂ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಶೇ.59.84 ಪ್ರಯಾಣಿಕರು ಸ್ಮಾರ್ಟ್​ಕಾರ್ಡ್ ಬಳಕೆದಾರರಾಗಿದ್ದಾರೆ. ಸ್ಮಾರ್ಟ್ ಕಾರ್ಡ್ ಬಳಸುವ ಪ್ರಯಾಣಿಕರಿಗೆ ಪ್ರಯಾಣ ದರದ ಶೇ.15 ರಿಯಾಯಿತಿಯನ್ನು ನೀಡಲಾಗುತ್ತಿದೆ. ಠೇವಣಿ ಲಾಭವನ್ನೇ ರಿಯಾಯಿತಿ ಮೂಲಕ ಬಿಎಂಆರ್​ಸಿಎಲ್ ವರ್ಗಾವಣೆ ಮಾಡುತ್ತಿದೆ.

ಕನ್ನಡ ಜ್ಞಾನ ಭಂಡಾರ

ಬೆಂಗಳೂರು: ಕರ್ನಾಟಕದ ಜ್ಞಾನಪೀಠ ಪುರಸ್ಕೃತರು ಯಾರ್ಯಾರು?, ರಾಜ್ಯದ ಪ್ರಸಿದ್ಧ ಸಾಹಿತಿಗಳು, ವಿಜ್ಞಾನಿಗಳು ಯಾರು?, ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣಗಳಾವುವು?, ವಚನಗಳು, ನುಡಿಗಟ್ಟುಗಳು ಹೀಗೆ ಕನ್ನಡದ ಜ್ಞಾನ ಭಂಡಾರವೇ ನಮ್ಮ ಮೆಟ್ರೋ ರೈಲುಗಳಲ್ಲಿ ದೊರೆಯಲಿದೆ.

ನಮ್ಮ ಮೆಟ್ರೋ ನಿಲ್ದಾಣ ಹಾಗೂ ರೈಲುಗಳಲ್ಲಿ ಹಿಂದಿ ಮಾಯವಾದ ಬೆನ್ನಲ್ಲೇ ಕನ್ನಡ ಅಸ್ಮಿತೆಗೆ ನಿಗಮ ಪ್ರಾಮುಖ್ಯತೆ ನೀಡಿದೆ. ಕರುನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ತಂತ್ರಜ್ಞಾನ ಬೆಳವಣಿಗೆಯ ಮಾಹಿತಿ ಒದಗಿಸುವ ದೃಷ್ಟಿಯಿಂದ ರೈಲಿನ ಒಳಭಾಗದಲ್ಲಿರುವ ಎಲ್​ಇಡಿ ಪರದೆಗಳಲ್ಲಿ ಈ ವಿಷಯಗಳನ್ನು ಬಿತ್ತರಿಸಲಾ ಗುತ್ತಿದೆ. ಈಗಾಗಲೇ ಕೆಲ ರೈಲುಗಳಲ್ಲಿ ಚುಟುಕು ಮಾಹಿತಿ ನೀಡಲಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ‘ವಿಜಯವಾಣಿ’ಗೆ ತಿಳಿಸಿದರು.

ನಿಲ್ದಾಣಗಳ ನಡುವೆ ಮಾಹಿತಿ: ಪ್ರತಿ ಬೋಗಿಯಲ್ಲಿ ಬಾಗಿಲುಗಳ ಪಕ್ಕ 4 ಎಲ್​ಇಡಿ ಪರದೆಗಳಿದ್ದು, ಮುಂದಿನ ನಿಲ್ದಾಣ ಯಾವುದು ಎಂಬುದರ ಬಗ್ಗೆ ಮಾಹಿತಿ ಇವುಗಳಲ್ಲಿ ಬಿತ್ತರಿಸಲಾಗುತ್ತಿದೆ. ಪ್ರತಿ ನಿಲ್ದಾಣದ ನಡುವೆ ಕನಿಷ್ಠ 1-2 ನಿಮಿಷದ ಅಂತರವಿದ್ದು, ಈ ಸಂದರ್ಭದಲ್ಲಿ ವಚನ, ನುಡಿಗಟ್ಟು ಹಾಗೂ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚುಟುಕು ಮಾಹಿತಿ ಒದಗಿಸಲಾಗುತ್ತಿದೆ. ಚಿತ್ರ ಹಾಗೂ ಆಡಿಯೋ ಸಹಿತ ಮಾಹಿತಿ ಇದ್ದು, ಪ್ರಯಾಣಿಕರು ಆಸಕ್ತಿಯಿಂದ ಗ್ರಹಿಸುತ್ತಿದ್ದಾರೆ.

ದೇಶಕ್ಕೆ ಮಾದರಿಯಾಗಲು ವಿಷನ್ ಡಾಕ್ಯುಮೆಂಟ್

ನಮ್ಮ ಮೆಟ್ರೋ ದೇಶದ ಇತರೆ ಮೆಟ್ರೋಗಳಿಗೆ ಮಾದರಿಯಾಗಲು ರೂಪುರೇಷೆ ಸಿದ್ಧಪಡಿಸಿದೆ. ‘ವಿಷನ್ ಡಾಕ್ಯುಮೆಂಟ್’ನಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಮುಖಾಂತರ ಸುರಕ್ಷಿತ ಮೆಟ್ರೋ ಸೇವೆ, ಪ್ಲಾ್ಯಸ್ಟಿಕ್ ಬಳಕೆಗೆ ಕಡಿವಾಣ, ನವೀಕರಿಸಬಹುದಾದ ಇಂಧನ ಬಳಕೆ, ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ, ಮಳೆ ನೀರು ಕೊಯ್ಲು ಅಳವಡಿಕೆ, ಸ್ವಾಧೀನಪಡಿಸಿಕೊಂಡ ಭೂಮಿಯ ಸೂಕ್ತ ಬಳಕೆ ಬಗ್ಗೆ ಮಾಹಿತಿ ಇರಲಿದೆ.

Leave a Reply

Your email address will not be published. Required fields are marked *