Friday, 16th November 2018  

Vijayavani

Breaking News

ಮೆಟ್ಟಿಲು ಇಳಿಯುವವರ ಬಗ್ಗೆ ತಾತ್ಸಾರ ಅಪಚಾರ!

Wednesday, 15.11.2017, 3:02 AM       No Comments

ಪ್ರತೀ ದಿನ ಒಂದೇ ವೇಗದಲ್ಲಿ, ಓಘದಲ್ಲಿ ಆಡಲು ಸಾಧ್ಯವಿಲ್ಲ. ಶತಕದ ಮೇಲೆ ಶತಕ ಬಾರಿಸುವಾಗ ಸೂಪರ್​ಸ್ಟಾರ್ ಎನಿಸಿಕೊಳ್ಳುವ ಆಟಗಾರ, ವಯಸ್ಸಿನ ಭಾರದಿಂದ ಮಂಕಾದ ಸಂದರ್ಭದಲ್ಲಿ ಯೂಸ್​ಲೆಸ್ ಎಂಬ ಟೀಕೆಗೆ ಗುರಿಯಾಗುವುದು ಕ್ರಿಕೆಟ್​ಗೆ, ಸಾಧಕನಿಗೆ, ಸಾಧನೆಗೆ ಮಾಡುವ ಅವಮಾನವೆನಿಸುತ್ತದೆ.

ಗುಣಕ್ಕೆ ಮತ್ಸರ ಪಡದೆ ಹೇಳುವುದಾದರೆ, ಅವರೊಬ್ಬ ಅತ್ಯುತ್ತಮ ಸ್ವಿಂಗ್ ಬೌಲರ್. ಏಕದಿನ ಕ್ರಿಕೆಟ್​ನಲ್ಲಿ ಅಪರೂಪ ಎಂದು ಪರಿಗಣಿತವಾಗುವ 6 ವಿಕೆಟ್ ಗೊಂಚಲು ಕಬಳಿಸಿದ ಸಾಧನೆಯನ್ನು ಎರಡೆರಡು ಬಾರಿ ಮಾಡಿದ ವಿರಳ ಬೌಲರ್. ಆದರೆ, ಇದನ್ನು ಮೀರಿ ಅವರ ಸಾಧನೆ ಬಗ್ಗೆ ಹೇಳಲು ಹೆಚ್ಚೇನೂ ನೆನಪಾಗುವುದಿಲ್ಲ. ಕಪಿಲ್ ದೇವ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಜಹೀರ್ ಖಾನ್​ರಂಥ ದಿಗ್ಗಜರ ಸಾಲಿಗೆ ಅವರನ್ನು ಸೇರಿಸುವುದು ಕಷ್ಟ. ಅವರು ಆಡಿದ ಪಂದ್ಯದಲ್ಲೆಲ್ಲ ವಿಕೆಟ್ ಕಬಳಿಸುತ್ತಿದ್ದರು ಎನ್ನುವುದು ವಿಶೇಷವಾದರೂ, ಗಾಯದ ಸಮಸ್ಯೆಯಿಂದ ವೃತ್ತಿಜೀವನದಲ್ಲಿ ಅತೀ ಹೆಚ್ಚು ವಿಶ್ರಾಂತಿ ಪಡೆದಿದ್ದು ಹಾಗೂ ಅಷ್ಟೂ ಬಾರಿ ಪುನರಾಗಮನಗೈದಿದ್ದು ಅವರ ದೊಡ್ಡ ಸಾಧನೆ.

ಮೊನ್ನೆ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಪಂದ್ಯ ವೇಗಿ ಆಶಿಶ್ ನೆಹ್ರಾ ಪಾಲಿಗೆ ವಿದಾಯ ಪಂದ್ಯವಾಗಿತ್ತು. ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ನೆಹ್ರಾರನ್ನು ಹೆಗಲ ಮೇಲೆ ಹೊತ್ತು ಮೆರೆಸಿದರು. ಅದು ಯಾವುದೇ ಕ್ರಿಕೆಟಿಗನಿಗೆ ಸಿಗಬಹುದಾದ ಅತ್ಯುತ್ತಮ ಬೀಳ್ಕೊಡುಗೆ. ಕ್ರಿಕೆಟ್​ಗಾಗಿ ಬದುಕನ್ನೇ ಸಮರ್ಪಿಸಿಕೊಂಡ ಆಟಗಾರರಿಗೆ ಸಿಗಬಹುದಾದ ಅತ್ಯುತ್ತಮ ಗೌರವ.

ಇತ್ತೀಚಿನ ವರ್ಷಗಳಲ್ಲಿ ಸಚಿನ್ ತೆಂಡುಲ್ಕರ್​ಗೆ ಇದಕ್ಕಿಂತ ಉನ್ನತವಾದ ಬೀಳ್ಕೊಡುಗೆ ಸಿಕ್ಕಿತ್ತು. ಆದರೆ, ದಿಗ್ಗಜ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಜಾವಗಲ್ ಶ್ರೀನಾಥ್ ಸಹಿತ ಕಳೆದ ಎರಡು ದಶಕದಲ್ಲಿ ಹಾಗೂ ಅದಕ್ಕೂ ಮುಂಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್​ನ ಉನ್ನತಿಗೆ ಕಾರಣರಾದ ಬೇರೆ ಯಾರಿಗೂ ಇಂಥ ವಿದಾಯ ಸಿಕ್ಕಿಲ್ಲ. ಇವರಲ್ಲಿ ಹೆಚ್ಚಿನವರಿಗೆ ತಾವು ಕೊನೆಯ ಪಂದ್ಯ ಆಡುತ್ತಿದ್ದೇವೆನ್ನುವುದೇ ತಿಳಿದಿರಲಿಲ್ಲ. ಇವರಿಗೆಲ್ಲ ಹೋಲಿಸಿದರೆ, ಸಾಧನೆಯಲ್ಲಿ ಇವರಿಂದ ಸಾಕಷ್ಟು ದೂರದಲ್ಲಿರುವ ನೆಹ್ರಾ ಲಕ್ಕಿ ಎಂದೇ ಹೇಳಬೇಕು.

ಹಾಗೆ ನೋಡಿದರೆ, ನೆಹ್ರಾ ಪಾಲಿಗೆ ಅದೃಷ್ಟವೆನ್ನುವುದು ವೃತ್ತಿಜೀವನದುದ್ದಕ್ಕೂ ಕೈಹಿಡಿದಿತ್ತು. ಒಂದು ಸರಣಿ ಆಡಿದ ಬಳಿಕ ನಂತರದ ನಾಲ್ಕು ಸರಣಿಗಳನ್ನು ಗಾಯಾಳುವಾಗಿ ತಪ್ಪಿಸಿಕೊಳ್ಳುತ್ತಿದ್ದ ಅವರು, ವಿಶ್ವಕಪ್​ಗಳಿಗೆ ತಂಡ ಆಯ್ಕೆ ವೇಳೆಗೆ ಫಿಟ್ ಆಗಿಬಿಡುತ್ತಿದ್ದರು. ಪೂರ್ಣ ಫಿಟ್ ಆಗಿದ್ದ ದಿನ ಪಕ್ಕಾ ವಿಕೆಟ್ ಕಬಳಿಸುವ ಅವರ ಸಾಮರ್ಥ್ಯವೇ ಅವರನ್ನು ಆಯ್ಕೆ ಮಾಡುವುದಕ್ಕೆ ಅಳತೆಗೋಲಾಗಿ ಬಿಡುತ್ತಿತ್ತು. ಹಾಗಾಗಿ ವರ್ಷ ಪೂರ್ತಿ ಬೆವರು ಸುರಿಸಿ ವಿಶ್ವಕಪ್ ಆಯ್ಕೆಗೆ ಹಂಬಲಿಸುತ್ತಿದ್ದ ಅನೇಕ ಬೌಲರ್​ಗಳನ್ನು ಬೈಪಾಸ್ ಮಾಡಿ ತಾವು ಆಯ್ಕೆಯಾಗುವ ಮೂಲಕ ನೆಹ್ರಾ 2011ರ ವಿಶ್ವಕಪ್ ಗೆದ್ದ ತಂಡದ ಸದಸ್ಯರೆನಿಸಿಕೊಂಡು ಕೋಟಿ ರೂ. ಬಹುಮಾನಕ್ಕೆ ಹಕ್ಕುದಾರರಾಗಿದ್ದರು.

ನೆಹ್ರಾ ಅದೃಷ್ಟದ್ದೊಂದು ಕಥೆಯಾದರೆ, ವಿಶ್ವದ ಅನೇಕ ದಿಗ್ಗಜ ಆಟಗಾರರಿಗೆ ಗೌರವಯುತ ನಿರ್ಗಮನದ ಅವಕಾಶಗಳು ತಪ್ಪಿಹೋದಂಥ ಕಥೆಗಳು ಸಾವಿರ. ಒಂದು ಕೆಟ್ಟ ಆಸ್ಟ್ರೇಲಿಯಾ ಪ್ರವಾಸ ದ್ರಾವಿಡ್, ಲಕ್ಷ್ಮಣ್​ರಂಥ ಆಟಗಾರರಿಗೆ ತಮ್ಮ ಕೊನೆಯ ಪಂದ್ಯ ಯಾವುದೂ ಎನ್ನುವುದೂ ನೆನಪುಳಿಸದಂತೆ ವೃತ್ತಿಜೀವನ ಕೊನೆಗೊಳಿಸಿತು. ಭಾರತೀಯ ಕ್ರಿಕೆಟ್​ಗೆ ಗ್ರೆಗ್ ಚಾಪೆಲ್​ರಂಥ ಕೆಟ್ಟ ಕೋಚ್ ಹಾಗೂ ಮಹೇಂದ್ರ ಸಿಂಗ್ ಧೋನಿಯಂಥ ಶ್ರೇಷ್ಠ ಆಟಗಾರನ ಪ್ರವೇಶಕ್ಕೆ ಕಾರಣರಾಗಿದ್ದ ಸೌರವ್ ಗಂಗೂಲಿಗೂ ಅವರ ದಾದಾಗಿರಿಗೆ ತಕ್ಕ ನಿರ್ಗಮನ ದೊರಕಲಿಲ್ಲ. ‘ರನ್ ಹೊಡೆಯುವುದಕ್ಕಿಂತ, ಒಂದು ರನ್ ತಡೆಯುವುದು ಕೂಡ ಕ್ರಿಕೆಟ್​ನಲ್ಲಿ ಮುಖ್ಯ. ಆಟಗಾರರ ಬ್ಯಾಟಿಂಗ್, ಬೌಲಿಂಗ್​ನಷ್ಟೇ ಅವರ ಫಿಟ್​ನೆಸ್ ಕೂಡ ಮಹತ್ವದ್ದು. ವಿಕೆಟ್​ಗಳ ನಡುವೆ ಎಷ್ಟು ವೇಗವಾಗಿ ಓಡುತ್ತಾರೆ? ಎಷ್ಟು ಚುರುಕಾಗಿ ಫೀಲ್ಡಿಂಗ್ ಮಾಡುತ್ತಾರೆ? ಎಷ್ಟು ನಿಖರವಾಗಿ ಚೆಂಡು ಎಸೆಯುತ್ತಾರೆ ಇತ್ಯಾದಿ ಸಂಗತಿಗಳೇ ಸೋಲು-ಗೆಲುವಿನಲ್ಲಿ ನಿರ್ಣಾಯಕವಾಗುತ್ತವೆ. ಹಾಗಾಗಿ ಆಟಗಾರನ ಪೂರ್ವ ಸಾಧನೆಗಿಂತ ವರ್ತಮಾನದ ಫಿಟ್​ನೆಸ್, ಪ್ರದರ್ಶನವಷ್ಟೇ ಮಾನದಂಡ’ ಎಂದು ಆ ದಿನಗಳಲ್ಲಿ ವೃತ್ತಿಜೀವನದ ಉತ್ತುಂಗದಲ್ಲಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ತಾತ್ವಿಕ ಮಾತುಗಳ ಮೂಲಕ ತಮ್ಮ ನಿರ್ಧಾರಗಳಿಗೆ ಸಮರ್ಥನೆ ಕೊಟ್ಟುಕೊಳ್ಳುತ್ತಿದ್ದರು. ಅವರ ಮಾತಿನಲ್ಲಿ ತಪ್ಪೇನೂ ಇರಲಿಲ್ಲ. ಆದರೆ, ಆ ವಿಚಾರಧಾರೆ ಎಲ್ಲ ಕಾಲದಲ್ಲೂ ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದೇ ವಿಧಿ ವಿಚಿತ್ರ.

ಇದೆಲ್ಲ ಏಕೆ ನೆನಪಾಯಿತೆಂದರೆ, ಹಿಂದೆ ಸೆಹ್ವಾಗ್, ದ್ರಾವಿಡ್, ಲಕ್ಷ್ಮಣ್ ಇದ್ದ ಪರಿಸ್ಥಿತಿಯಲ್ಲಿ ಸದ್ಯ ಧೋನಿಯೇ ಇದ್ದಾರೆ. 35 ವರ್ಷದ ಗಡಿ ದಾಟಿರುವ ಅವರ ದೇಹವೀಗ ಹಿಂದಿನಂತೆ ಪಾದರಸದ ಚುರುಕುತನ ಹೊಂದಿಲ್ಲ. ಸ್ಟಂಪ್​ನ ಹಿಂದೆ ಹಾಗೂ ಮುಂದೆ ಮೊದಲಿನ ಪವಾಡಸದೃಶ ಆಟ ಕೈಹಿಡಿಯುತ್ತಿಲ್ಲ. ಕಣ್ಮುಚ್ಚಿಬಿಡುವ ಅಂತರದಲ್ಲಿ ಮಾಡುತ್ತಿದ್ದ ಸ್ಟಂಪಿಂಗ್​ಗಳು, ಮಾರು ದೂರದಿಂದ ಚೆಂಡೆಸೆದು ದಿಂಡುರುಳಿಸುತ್ತಿದ್ದ ರನೌಟ್​ಗಳು, ಬೇಕೆಂದಾಗ ಛಲಕಟ್ಟಿ ಸಿಡಿಸುತ್ತಿದ್ದ ಸಿಕ್ಸರ್​ಗಳು, ಹೆಲಿಕಾಪ್ಟರ್ ಶಾಟ್​ಗಳು ಸದ್ಯ ಅವರಿಗೆ ಕೈಕೊಡುತ್ತಿವೆ. ಮೊನ್ನೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಓವರ್​ಗೆ 12 ರನ್ ವೇಗದಲ್ಲಿ ರನ್ ಗಳಿಸುವ ಅನಿವಾರ್ಯವಿದ್ದಾಗ ಧೋನಿ ಎಸೆತಕ್ಕೊಂದು ರನ್ ಗಳಿಸಿದ್ದರು. ತಂಡ ದೊಡ್ಡ ಅಂತರದಿಂದ ಸೋತಾಗ ಅವರ ಈ ಎಲ್ಲ ದೈಹಿಕ ಸಮಸ್ಯೆಗಳು ಟೀಕಾಕಾರರಿಗೆ ದೊಡ್ಡದಾಗಿ ಕಂಡವು.

ಒಂದೇ ವ್ಯತ್ಯಾಸವೆಂದರೆ, ಹಿಂದೆ ದ್ರಾವಿಡ್, ಗಂಗೂಲಿ, ಲಕ್ಷ್ಮಣ್​ಗೆ ಸಿಗದ ನಾಯಕನ ಬೆಂಬಲ ಈಗ ಧೋನಿ ಪಾಲಿಗೆ ಲಭ್ಯವಾಗಿದೆ. ಹಿಂದೆ ಹಿರಿಯರ ನಿರ್ಗಮನಕ್ಕೆ ಧೋನಿ ಅನುಸರಿಸಿದ ಸೂತ್ರವನ್ನೇ ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅನುಸರಿಸಿದ್ದರೆ, ಈ ಹೊತ್ತಿಗೆಲ್ಲಾ ಮಹಿ ಮಾಜಿ ಆಗಿರಬೇಕಿತ್ತು. ಆದರೆ, ‘ಒಂದು ಪಂದ್ಯದ ವೈಫಲ್ಯ, ಒಂದು ಸೋಲು, ಒಂದು ತಪ್ಪಿದ ಅವಕಾಶ ಆಟಗಾರನೊಬ್ಬನ ಶ್ರೇಷ್ಠತೆಯನ್ನು ಮರೆಮಾಚುವುದಿಲ್ಲ’ ಎಂದು ಧೋನಿಯನ್ನು ಕೊಹ್ಲಿ ಸಮರ್ಥನೆ ಮಾಡಿಕೊಂಡ ರೀತಿ ನಾಯಕನೊಬ್ಬನಿಗೆ ತಕ್ಕುದಾಗಿತ್ತು.

ಕಾಲ ಯಾರನ್ನೂ ಮರೆಯುವುದಿಲ್ಲ. ಇಂದು ಇವರು, ನಾಳೆ ಮತ್ತೊಬ್ಬರು. ಯಾರು ಸರಿ ಯಾರು ತಪು್ಪ ಎಂದು ವಿಮಶಿಸುವುದು ಕೂಡ ಸರಿಯಾದ ಕ್ರಮ ಎನಿಸುವುದಿಲ್ಲ. ಏಕೆಂದರೆ, ಪ್ರತಿಯೊಂದು ವಿಷಯಕ್ಕೂ ನಾನಾ ದೃಷ್ಟಿಕೋನವಿರುತ್ತದೆ. ಒಂದೇ ಕೆಲಸ ಒಬ್ಬರ ದೃಷ್ಟಿಯಲ್ಲಿ ಸರಿಯಾಗಿದ್ದರೆ, ಇನ್ನೊಬ್ಬರಿಗೆ ತಪ್ಪೆನಿಸುವ ಸಾಧ್ಯತೆ ಸದಾ ಇದ್ದೇ ಇರುತ್ತದೆ ಎಂದು ಹೇಳುವುದು ಇದೇ ಕಾರಣಕ್ಕೆ.

ಹಿಂದೆ ಆಗಿಹೋದ ತಪು್ಪಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಅಂಥ ತಪು್ಪ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಅಧಿಕಾರ ಸ್ಥಾನದಲ್ಲಿರುವವರ ಕರ್ತವ್ಯವಾಗಬೇಕು. ಗ್ರೆಗ್ ಚಾಪೆಲ್ ಕೋಚ್ ಆಗಿದ್ದ ಸಂದರ್ಭದಲ್ಲಿ ಫಿಟ್​ನೆಸ್, ಚುರುಕುತನದ ಕಾರಣ ನೀಡಿ ಸಚಿನ್ ತೆಂಡುಲ್ಕರ್​ರನ್ನೇ ತಂಡದಿಂದ ಕೈಬಿಡಲು ಹೊರಟಿದ್ದರು ಎಂಬ ಮಾತಿದೆ. ಅಂದರೆ, ಇಂಥದ್ದೆಲ್ಲ ಕ್ರೀಡೆಯಲ್ಲಿ ಸರ್ವೆಸಾಮಾನ್ಯ. ಹಿಂದೆ ಯಾರಿಗೋ ಆಗಿದ್ದು, ಇಂದು ಧೋನಿ ವಿಚಾರದಲ್ಲಿ ಪುನರಾವರ್ತನೆ ಆಗುತ್ತಿದೆ. ವಿರಾಟ್ ಕೊಹ್ಲಿ ಕೂಡ ಮುಂದೊಂದು ದಿನ ಇಂಥದ್ದೇ ಪರಿಸ್ಥಿತಿಯಲ್ಲಿರುತ್ತಾರೆ. ಒಂದು ಮಾತೆಂದರೆ, ಒಂದೊಂದು ಸೋಲು-ಗೆಲುವುಗಳನ್ನೂ, ಶತಕ, ಹ್ಯಾಟ್ರಿಕ್​ಗಳನ್ನೂ ಅಭಿಮಾನಿಗಳು ತುಂಬಾ ಭಾವನಾತ್ಮಕವಾಗಿ ಹಚ್ಚಿಕೊಳ್ಳುವಂತೆ ಉದ್ದೀಪಿಸುವ ಸಾಮರ್ಥ್ಯ ಕ್ರಿಕೆಟ್ ಆಟಕ್ಕಿದೆ. ಅಂಥ ಭಾವನಾತ್ಮಕ ಪ್ರಯೋಜನ, ಔದಾರ್ಯ ಕ್ರಿಕೆಟಿಗರ ಪಾಲಿಗೂ ಸಿಗಬೇಕಿದೆ. ಆಟಗಾರರೆಂದರೆ ಯಂತ್ರಗಳಲ್ಲ. ಪ್ರತೀ ದಿನ ಒಂದೇ ವೇಗದಲ್ಲಿ, ಒಂದೇ ಓಘದಲ್ಲಿ ಆಡಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಶತಕದ ಮೇಲೆ ಶತಕ ಬಾರಿಸುವಾಗ ಸೂಪರ್​ಸ್ಟಾರ್ ಎನಿಸಿಕೊಳ್ಳುವ ಆಟಗಾರ, ವಯಸ್ಸಿನ ಭಾರದಿಂದ ಮಂಕಾದ ಸಂದರ್ಭದಲ್ಲಿ ಯೂಸ್​ಲೆಸ್ ಎಂಬ ಟೀಕೆಗೆ ಗುರಿಯಾಗುವುದು ಕ್ರಿಕೆಟ್​ಗೆ, ಸಾಧಕನಿಗೆ, ಸಾಧನೆಗೆ ಮಾಡುವ ಅವಮಾನವೆನಿಸುತ್ತದೆ. ಹಾಗಾಗಿ ಆಟಗಾರರು ಉತ್ತುಂಗ ತಲುಪಿ, ವೃತ್ತಿಮುಸ್ಸಂಜೆಯ ಇಳಿಜಾರಿನಲ್ಲಿರುವಾಗ ಗೌರವಯುತವಾಗಿ ಮೆಟ್ಟಿಲುಗಳನ್ನಿಳಿದು ಹೋಗಲು ಅವಕಾಶ ಮಾಡಿಕೊಡುವುದು ಅವರ ಆಟಕ್ಕೆ, ಸಾಧನೆಗೆ ಸಲ್ಲಿಸುವ ಗೌರವವೆನಿಸಿಕೊಳ್ಳುತ್ತದೆ. ನೆಹ್ರಾಗೆ ಸಿಕ್ಕಂಥ ಬೀಳ್ಕೊಡುಗೆ ಎಲ್ಲ ಸಾಧಕರಿಗೆ ಸಿಗುವಂತೆ ನೋಡಿಕೊಳ್ಳುವುದು ಕೂಡ ಸಂಬಂಧಪಟ್ಟವರ ಹೊಣೆಗಾರಿಕೆ…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top