ಮೆಗ್ಗಾನ್ ಆಸ್ಪತ್ರೆಗೆ 87 ವರ್ಷಗಳ ಇತಿಹಾಸ

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೇವಲ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ಜಿಲ್ಲೆಗಳ ಜನರಿಗೂ ಆರೋಗ್ಯ ಸೇವೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇಂತಹ ಆಸ್ಪತ್ರೆ ನಿರ್ವಣಕ್ಕೆ ಮೈಸೂರು ಮಹಾರಾಜರು ಶಂಕುಸ್ಥಾಪನೆ ನೆರವೇರಿಸಿ 87 ವರ್ಷಗಳು ಕಳೆದಿವೆ.

1932 ಜನವರಿ 16ರಂದು ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿವಮೊಗ್ಗದಲ್ಲಿ ಆಸ್ಪತ್ರೆಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಅದಕ್ಕೆ ವಿದೇಶಿಗನೊಬ್ಬನ ಹೆಸರಿಟ್ಟ ಕತೆ ಬಹು ಕುತೂಹಲಕಾರಿಯಾಗಿದೆ. ಸದಾ ಸಂಸ್ಥಾನದ ಜನರ ಹಿತಕಾಯುವಲ್ಲಿ ಮೈಸೂರು ಅರಸರು ಚಿಂತನಶೀಲರಾಗಿದ್ದರು. ಮಲೆನಾಡು ಭಾಗದ ಪ್ರಜೆಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅವರು ಆಸ್ಪತ್ರೆ ಆರಂಭಕ್ಕೆ ಮುಂದಾದರು. ಅದಕ್ಕೆ ಮೆಗ್ಗಾನ್ ಆಸ್ಪತ್ರೆ ಎಂದೇ ನಾಮಕರಣ ಮಾಡಲಾಯಿತು.

ಯಾರೀತ ಮೆಗ್ಗಾನ್: ಮೂಲತಃ ಇಂಗ್ಲೆಂಡ್​ನ ಕರ್ನಲ್ ಮೆಕ್​ಗಾನ್ ಭಾರತಕ್ಕೆ ಬಂದು ಮೈಸೂರು ಸಂಸ್ಥಾನದಲ್ಲಿ ವೈದ್ಯರಾಗಿ ಸೇವೆ ಆರಂಭಿಸಿದವರು. ಅವರು ಮೊದಲು ವೃತ್ತಿ ಜೀವನ ಆರಂಭಿಸಿದ್ದು ಇದೇ ಶಿವಮೊಗ್ಗದಲ್ಲಿ ಎಂದು ದಾಖಲಿಸಿದ್ದಾರೆ ಕೆಪಿಟಿಸಿಎಲ್​ನ ನಿವೃತ್ತ ಇಂಜಿನಿಯರ್ ಗಜಾನನ ಶರ್ಮ.

ಆರೋಗ್ಯದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಕಾಲವದು. ಸಾಂಕ್ರಾಮಿಕ ರೋಗಗಳು, ವಿಪರೀತ ಸುರಿಯುತ್ತಿದ್ದ ಮಳೆ, ಸಂಪರ್ಕ ಸಿಗದ ಹಳ್ಳಿಗಳು, ದಟ್ಟ ಕಾಡಿನ ರಸ್ತೆಗಳು, ಇದೆಲ್ಲದರ ನಡುವೆ ಜನರ ಆರೋಗ್ಯ ಸುಧಾರಣೆ ತೀರಾ ಪ್ರಯಾಸದಾಯಕವಾದ ಸಂದರ್ಭವದು.

ಆದರೆ ಇದಾವುದನ್ನೂ ಲೆಕ್ಕಿಸದೆ ಕರ್ನಲ್ ಮೆಕ್​ಗಾನ್(ಮೆಗ್ಗಾನ್) ಇಲ್ಲಿನ ಜನರ ಸೇವೆಗೆ ನಿಂತರು. ಪದೋನ್ನತಿ ಸಿಕ್ಕರೂ ಶಿವಮೊಗ್ಗದಿಂದ ದೂರಾಗಲಿಲ್ಲ. ತಮ್ಮ ಪತ್ನಿಯೊಂದಿಗೆ ಶಿವಮೊಗ್ಗ ಭಾಗದ ಜನರ ಆರೋಗ್ಯ ಸುಧಾರಣೆಗೆ ಪಣತೊಟ್ಟು ನಿಂತರು. ಸತತ ನಾಲ್ಕು ದಶಕಗಳ ಕಾಲ ಅವರು ಮಾಡಿದ ಸೇವೆಯನ್ನು ಜನರು ಮರೆತರೂ ಮೈಸೂರು ಮಹಾರಾಜರು ಮರೆಯಲಿಲ್ಲ. ಇದೇ ಕಾರಣಕ್ಕೆ ಅಂದಿನ ಮೈಸೂರು ಅರಸರು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಮೆಗ್ಗಾನ್ ಹೆಸರನ್ನು ನಾಮಕರಣ ಮಾಡಿದ್ದರು.

ಆರೋಗ್ಯ ಇಲಾಖೆಗೆ ಕಾಯಕಲ್ಪ: ತಾನೊಬ್ಬ ವಿದೇಶಿ ವೈದ್ಯ ಎಂಬುದನ್ನೂ ಮರೆತು ಪತ್ನಿ ಜತೆಗೂಡಿದ ಮೆಗ್ಗಾನ್, ಮಲೆನಾಡಿನ ರೋಗಿಗಳ ಸೇವೆಗೈದರು. ಅವರಿಗೆ 1885ರಲ್ಲಿ ರಾಜ್ಯದ ಸೀನಿಯರ್ ಸರ್ಜನ್ ಆಗಿ ಪದೋನ್ನತಿ ಸಿಕ್ಕಿತು. ಆಗಲೂ ಅವರು ಶಿವಮೊಗ್ಗೆಯನ್ನು ಮರೆಯಲಿಲ್ಲ. ಮಲೆನಾಡಿಗರ ಸೇವೆಯನ್ನು ನಿಲ್ಲಿಸಲಿಲ್ಲ. ತಮ್ಮ ಕುಟುಂಬವನ್ನು ಮೈಸೂರಿನಲ್ಲೇ ಬಿಟ್ಟು ಅವರು ಹೆಚ್ಚುಕಾಲ ಶಿವಮೊಗ್ಗೆಯಲ್ಲೇ ಉಳಿದು ಮಲೇರಿಯಾ ಮತ್ತು ಕಾಲರಾಗಳಿಂದ ಬಳಲುತ್ತಿದ್ದ ಸಾವಿರಾರು ಜನರನ್ನು ರಕ್ಷಿಸಿದರು. ತಾವು ಸೀನಿಯರ್ ಸರ್ಜನ್ ಆಗಿದ್ದ 1885ರಿಂದ 1895 ರವರೆಗಿನ ಅವಧಿಯಲ್ಲಿ ಕರ್ನಲ್ ಮೆಗ್ಗಾನ್ ಮೈಸೂರು ರಾಜ್ಯದ ಆರೋಗ್ಯ ಇಲಾಖೆಯನ್ನು ಕಟ್ಟಿ ಬೆಳೆಸಿದರು. 1895ರಲ್ಲಿ ಅವರನ್ನು ಅಧಿಕೃತವಾಗಿ ಮೈಸೂರು ರಾಜರ ಮತ್ತು ರಾಜಕುಟುಂಬದ ವೈದ್ಯರಾಗಿ ನೇಮಕ ಮಾಡಲಾಯಿತು.

ಜಾಗೃತಿ ಮೂಡಿಸಿದ್ದ ಕರ್ನಲ್ ಮೆಗ್ಗಾನ್: ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿದ್ದ ಕರ್ನಲ್ ಮೆಗ್ಗಾನ್, ಗ್ರಾಮೀಣ ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡಿದ್ದರು. ಕಲುಷಿತ ನೀರು ಸೇವನೆ, ಮನೆ ಸಮೀಪ ಶುಚಿತ್ವ ಕಾಪಾಡಿಕೊಳ್ಳುವುದು, ಅಂಟು ಜಾಡ್ಯಗಳಿಂದ ಮುಕ್ತಿ ಪಡೆಯಲು ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಿದ್ದರು.

ಸ್ವದೇಶಕ್ಕೆ ಮರಳಿದ ಮೆಗ್ಗಾನ್: 1906ರಲ್ಲಿ ಕರ್ನಲ್ ಮೆಗ್ಗಾನ್ ಸೇವೆಯಿಂದ ನಿವೃತ್ತರಾಗಿ ಸ್ವದೇಶಕ್ಕೆ ಮರಳಿದರು. ಆದರೂ ಮೈಸೂರು ಮಹಾರಾಜರೊಂದಿಗಿನ ಅವರ ಒಡನಾಟ ಸದಾ ಜಾರಿಯಲ್ಲಿತ್ತು. ಕರ್ನಲ್ ಮೆಗ್ಗಾನ್ 94ನೇ ವಯಸ್ಸಿನಲ್ಲಿ (1936) ನಿಧನರಾದರು. ಅದಕ್ಕೂ ನಾಲ್ಕು ವರ್ಷ ಮೊದಲೇ ಅವರ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಮೈಸೂರು ರಾಜರು ಅಡಿಗಲ್ಲು ಹಾಕಿದ್ದರು.