ಬೆಳಗಾವಿ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಹಿರೇಕೊಪ್ಪ ಗ್ರಾಮದ ರೈತ ಈಶ್ವರ ಚಿಕ್ಕೊಪ್ಪ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂಭಾಗದಲ್ಲಿ ಭಾರತೀಯ ಕೃಷಿಕ ಸಮಾಜ ಸೇರಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಮತ್ತು ಮೃತ ರೈತನ ಕುಟುಂಬಸ್ಥರು ಬುಧವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮೃತ ರೈತನ ಕುಟುಂಬದ ಹೆಸರಿನಲ್ಲಿ 7.22 ಎಕರೆ ಜಮೀನು ಇದ್ದು, ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಮತ್ತ ಸಹಕಾರಿ ಬ್ಯಾಂಕ್‌ಗಳಲ್ಲಿ 1.10 ಲಕ್ಷ ರೂ. ಸಾಲ ಮತ್ತು 25 ಗ್ರಾಂ ಚಿನ್ನಾಭರಣ ಅಡವಿಟ್ಟು ಕಿರು ಸಾಲ ಪಡೆದಿದ್ದರು, ಆದರೆ, ಇತ್ತೀಚೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿದ್ದರಿಂದ ಸಾಲ ಮರುಪಾವತಿ ಸಲು
ಸಾಧ್ಯವಾಗಿರಲಿಲ್ಲ.
ಹೀಗಾಗಿ 2020ರ ಸಪ್ಟೆಂಬರ್ 9ರಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಯಜಮಾನ ಇಲ್ಲದ್ದರಿಂದ ಆ ಕುಟುಂಬ ಸದಸ್ಯರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ತ್ವರಿತವಾಗಿ ಪರಿಹಾರ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೋದಗಿ, ಮೃತ ರೈತನ ಪತ್ನಿ ಅನಸೂಯಾ ಈಶ್ವರ ಚಿಕ್ಕೊಪ್ಪ, ಚೈತ್ರಾ ಚಿಕ್ಕೊಪ್ಪ, ಚೇತನ ಚಿಕ್ಕೊಪ್ಪ ಮತ್ತಿತರರು ಇದ್ದರು.