ಮೃತ ಬಾಲಕಿ ಬದುಕಿಸಲು ಬಂದ ವ್ಯಕ್ತಿ !

ಅಕ್ಕಿಆಲೂರ:ಸಮೀಪದ ಗುರುರಾಯಪಟ್ಟಣದಲ್ಲಿ ಶನಿವಾರ ನಾಗರಹಾವು ಕಚ್ಚಿ ಮೃತಪಟ್ಟ ಬಾಲಕಿಯ ಮೃತದೇಹಕ್ಕೆ ವ್ಯಕ್ತಿಯೊಬ್ಬ ಔಷಧ ನೀಡಿ ಬದುಕಿಸಲು ಪ್ರಯತ್ನಿಸಿದ ವಿಚಿತ್ರ ಘಟನೆ ನಡೆದಿದೆ.

ಹಾವೇರಿ ತಾಲೂಕಿನ ಕೊಳೋರು ಗ್ರಾಮದ ಅಸ್ಕರ ಅಲಿ ಅಲಿಸಾಹೇಬ ಕ್ಯಾಲಕೊಂಡ ಎಂಬಾತನೇ ಮೃತ ಬಾಲಕಿಗೆ ಔಷಧ ನೀಡಿ ಬದುಕಿಸಲು ಬಂದ ವ್ಯಕ್ತಿ.

ಜ್ಞಾನಭಾರತಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಗುರುರಾಯಪಟ್ಟಣದ ಸಂಜನಾ ಸೋಮಲಪ್ಪ ಲಮಾಣಿ ಶನಿವಾರ ನಾಗರ ಹಾವು ಕಚ್ಚಿ ಮೃತಪಟ್ಟಿದ್ದಳು. ಸಾವು ಸಂಭವಿಸಿ ಮೂರು ಗಂಟೆ ನಂತರ ಗ್ರಾಮದ ಕೆಲವರು ಗೌಟಿ ಔಷಧ ನೀಡುವ ಕೊಳೋರ ಗ್ರಾಮದ ಅಸ್ಕರ ಅಲಿ ಎಂಬುವನನ್ನು ಕರೆದುಕೊಂಡು ಬಂದಿದ್ದಾರೆ. ಐದು ಬಗೆಯ ಗೌಟಿ ಔಷಧವನ್ನು ಬಾಲಕಿಯ ಬಾಯಲ್ಲಿ ಇಳಿಬಿಟ್ಟರೆ ಸತ್ತ ಬಾಲಕಿ ಪುನರ್ಜನ್ಮ ಪಡೆಯುತ್ತಾಳೆ ಎಂದು ಜನರನ್ನು ನಂಬಿಸಿದ್ದ. ಅಂತೆಯೇ ಶನಿವಾರ ಮಧ್ಯರಾತ್ರಿಯವರೆಗೂ ಬಾಲಕಿಯ ಮೂಗಿನಿಂದ ಔಷಧ ನೀಡಿದ್ದಾನೆ. ಕೊನೆಗೆ ಮೂರು ಗಂಟೆಯಲ್ಲಿ ಬಾಲಕಿಗೆ ಜೀವ ಬರುತ್ತದೆ ಎಂದಿದ್ದಾನೆ. ಈತನ ಮಾತು ನಂಬಿ ಗ್ರಾಮಸ್ಥರೆಲ್ಲ ರಾತ್ರಿಯಿಡಿ ಬಾಲಕಿಯ ಶವವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇದ್ದರು. ಆದರೆ, ಭಾನುವಾರ ಬೆಳಗಾದರೂ ಬಾಲಕಿಗೆ ಜೀವ ಬರಲಿಲ್ಲ. ನಂತರ ಬೇರೆ ದಾರಿ ಕಾಣದೇ ಅಂತ್ಯ ಸಂಸ್ಕಾರ ಮಾಡಿದ್ದಾರೆ. ವಿಜ್ಞಾನ ಇಷ್ಟು ಮುಂದುವರಿದಿದ್ದರೂ ಸತ್ತ ಬಾಲಕಿಗೆ ಜೀವ ಬರಿಸುತ್ತೇನೆ ಎಂದು ಬಂದ ವ್ಯಕ್ತಿಯನ್ನು ನಂಬಿ ಬಾಲಕಿಗೆ ಔಷಧ ಹಾಕಿರುವ ಘಟನೆ ತಾಲೂಕಿನಾದ್ಯಂತ ಚರ್ಚೆಗೆ ಕಾರಣವಾಗಿದೆ.

ನನ್ನಲ್ಲಿರುವ ಗ್ರಂಥದ ಪ್ರಕಾರ ಹಾವು ಕಚ್ಚಿ ಸತ್ತ ವ್ಯಕ್ತಿಗೆ ಐದು ಬಗೆಯ ಗೌಟಿ ಔಷಧ ನೀಡಿದರೆ ಮತ್ತೆ ಜೀವ ಬರುತ್ತದೆ. ನೀರಿನಲ್ಲಿ ಮುಳುಗಿ, ಗರ್ಭಪಾತ ಮತ್ತು ಇನ್ನಿತರ ಅಕಾಲಿಕ ಸಾವು ಸಂಭವಿಸಿದದರೂ ಸತ್ತ ಆರು ಗಂಟೆಯಲ್ಲಿ ಬದುಕಿಸುವ ಶಕ್ತಿ ಆ ಔಷಧಕ್ಕಿದೆ. ಆದರೆ, ಇದುವರೆಗೂ ನಾನು ಪ್ರಯೋಗಿಸಿರಲಿಲ್ಲ. ಬಾಲಕಿಗೆ ಔಷಧ ನೀಡಲಾಗಿತ್ತು. ಆದರೆ, ಗೌಟಿ ಔಷಧ ಅಂಗಡಿಯವರು ನಾನು ಹೇಳಿದ ಔಷಧ ನೀಡಲ್ಲ ಎಂಬುದು ಆ ನಂತರ ತಿಳಿಯಿತು. ಇತ್ತ ಔಷಧ ಹೋಗದಷ್ಟು ಬಾಲಕಿ ಶವದಲ್ಲಿ ಹಾವಿನ ವಿಷ ಏರಿತ್ತು.

| ಅಸ್ಕರಲಿ ಕ್ಯಾಲಕೊಂಡ

ಕೊಳೋರ ಗ್ರಾಮದ ವ್ಯಕ್ತಿ

Leave a Reply

Your email address will not be published. Required fields are marked *