ಮೃತ್ಯುಂಜಯ ಅಪ್ಪಗಳ ಮಹಾದ್ವಾರ ನಿರ್ವಿುಸಲು ಸಿದ್ಧತೆ

ಧಾರವಾಡ: ಪ್ರತಿ ಊರುಗಳಿಗೆ ಪ್ರವೇಶ ಪಡೆಯುತ್ತಿದ್ದಂತೆ ಸ್ವಾಗತ ಕಮಾನುಗಳು ಕಾಣುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಬಳಿ ಬಿಟ್ಟರೆ ಉಳಿದ ಕಡೆಗಳಲ್ಲಿ ಇಂತಹ ಕಮಾನುಗಳು ಕಾಣುವುದೇ ಇಲ್ಲ.

ಇದೀಗ ಧಾರವಾಡ-ಸವದತ್ತಿ ಮುಖ್ಯ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ವಾಗತ ಕಮಾನು ನಿರ್ವ ಣಕ್ಕೆ ಸಿದ್ಧತೆ ನಡೆಸಲಾಗಿದೆ. ನಗರದಲ್ಲಿ ಕಮಾನು ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಆದರೆ ಇದೀಗ ಕಾಲ ಕೂಡಿ ಬಂದಂತಾಗಿದೆ.

ಸವದತ್ತಿ ರಸ್ತೆಯಲ್ಲಿ ಸ್ವಾಗತ ಕಮಾನು ನಿರ್ವಿುಸುವಂತೆ ವಾರ್ಡ್ ನಂ. 6ರ ಪಾಲಿಕೆ ಸದಸ್ಯ ಯಾಸೀನ್ ಹಾವೇರಿ ಪೇಟ್ ಸುಮಾರು 2 ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿದ್ದರು. ಅವರ ಪ್ರಸ್ತಾವಕ್ಕೆ ಒಂದು ವರ್ಷದ ಹಿಂದೆ ಅನುಮೋದನೆ ನೀಡಿದ ಮಹಾನಗರ ಪಾಲಿಕೆ, ವಾರ್ಷಿಕ ಆಯವ್ಯಯದಲ್ಲಿ ಅನುದಾನ ಸಹ ಮೀಸಲಿಟ್ಟಿದೆ.

ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಸವದತ್ತಿ ರಸ್ತೆ ಜೆಎಸ್​ಎಸ್ ಶಾಲೆ ಬಳಿ ನಿರ್ವಣವಾಗುವ ಮಹಾದ್ವಾರದ ವಿನ್ಯಾಸವನ್ನು ಅಮ್ಮಿನಭಾವಿ ಹಾಗೂ ಹೆಗಡೆ ಕನ್ಸಲ್ಟಂಟ್​ನವರು ಸಿದ್ಧಪಡಿಸಿದ್ದು, ಪಾಲಿಕೆ ಇಂಜಿನಿಯರ್ ಉಷಾ ಬೆಂಗೇರಿ ಮಾರ್ಗದರ್ಶನದಲ್ಲಿ ಕಾಮಗಾರಿ ನಡೆಯಲಿದೆ. ಸೆ. 9ರಂದು ಕಾಮಗಾರಿಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಪಾಲಿಕೆ ಸದಸ್ಯರು ಹಾಗೂ ಶಾಸಕರು ತಮ್ಮ ಅನುದಾನದಲ್ಲಿ ಇಂತಹ ಕಾರ್ಯಗಳನ್ನು ನಡೆಸಿದಾಗ ಸಂಬಂಧಿಕರ ಹೆಸರುಗಳನ್ನು ದ್ವಾರಗಳಿಗೆ ನಾಮಕರಣ ಮಾಡುವುದು ಸಾಮಾನ್ಯ. ಆದರೆ ಯಾಸೀನ್ ಅವರು ಇಂತಹ ಗೋಜಿಗೆ ಹೋಗದೆ ಶ್ರೀ ಮೃತ್ಯುಂಜಯ ಅಪ್ಪಗಳ ಮಹಾದ್ವಾರ ಎಂದು ನಾಮಕರಣ ಮಾಡಲು ಕೋರಿದ್ದಾರೆ.

ಈಗಾಗಲೇ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸಿ, ಮೃತ್ಯುಂಜಯ ಅಪ್ಪಗಳ ಹೆಸರಿಡಲು ಒಪ್ಪಿಗೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಹೆಸರಿಗೆ ಒಪ್ಪಿಗೆ ಪಡೆಯಲು ಸಹ ಚಿಂತನೆ ನಡೆಸಿದ್ದಾರೆ.

ಮುರುಘಾಮಠದಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು ಪ್ರಾರಂಭಿಸಿದ ಪ್ರಸಾದ ನಿಲಯದ ಶತಮಾನೋತ್ಸವ ವರ್ಷಾಚರಣೆ ಸಂದರ್ಭದಲ್ಲೇ ಶ್ರೀಗಳ ಹೆಸರಿನ ಮಹಾದ್ವಾರ ನಿರ್ವಣಕ್ಕೆ ಚಾಲನೆ ನೀಡುತ್ತಿರುವುದು ವಿಶೇಷವಾಗಿದೆ.

2 ವರ್ಷಗಳ ಹಿಂದೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ನೀಡಿ ಬಜೆಟ್​ನಲ್ಲಿ ಅನುದಾನ ಮೀಸಲಿಡಲಾಗಿತ್ತು. ಮುರುಘಾಮಠ ಪ್ರಸಾದ ನಿಲಯದ ಶತಮಾನೋತ್ಸವ ನೆನಪಿಗಾಗಿ ಇದೇ ವರ್ಷ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಸೆ. 9ರಂದು ಭೂಮಿ ಪೂಜೆ ನಡೆಸಲು ಚಿಂತಿಸಲಾಗಿದೆ.

| ಯಾಸೀನ್ ಹಾವೇರಿಪೇಟ್ ಪಾಲಿಕೆ ಸದಸ್ಯ