ಮೃತರ ಕುಟುಂಬಕ್ಕೆ ಸಾಂತ್ವನ, ಪರಿಹಾರದ ಭರವಸೆ

ಹಳಿಯಾಳ: ತಾಲೂಕಿನ ಬೊಮ್ಮನಳ್ಳಿಯಲ್ಲಿ ಕಾಳಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಗೌಳಿ ಸಮುದಾಯದ ನಾಲ್ವರು ಸೋಮವಾರ ಮೃತಪಟ್ಟಿದ್ದು, ಆ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಂಗಳವಾರ ಸಾಂತ್ವನ ಹೇಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳಿಗೆ ಪರಿಹಾರದ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ನಿನ್ನೆ ಸಂಜೆಯೇ ಈ ದುರ್ಘಟನೆಯ ಸುದ್ದಿ ತಿಳಿದ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜೊತೆಯಲ್ಲಿ ಸಂರ್ಪಸಿದೆ. ಮೃತ ದೇಹಗಳನ್ನು ಹೊರತೆಗೆಯಲು ನೌಕಾದಳದ ನೆರವನ್ನು ಪಡೆಯುವಂತೆಯೂ ತಿಳಿಸಿದ್ದೆ. ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳ, ತುರ್ತು ಸೇವೆಗಳ ಇಲಾಖೆ ಹಾಗೂ ದಾಂಡೇಲಿಯ ಮುಳುಗು ಪರಿಣತರ ತಂಡದ ಪ್ರಯತ್ನದ ಫಲವಾಗಿ ಬಹುಬೇಗನೆ ಮೃತದೇಹಗಳ ಪತ್ತೆಯಾಗಿದೆ ಎಂದರು.

ಬಟ್ಟೆ ತೊಳೆಯಲು ವ್ಯವಸ್ಥೆ: ಬೊಮ್ಮನಳ್ಳಿ ಡ್ಯಾಂ ಬಳಿ ಹರಿಯುವ ಕಾಳಿ ಹಿನ್ನೀರಿನ ಪ್ರದೇಶದಲ್ಲಿ ಈ ಹಿಂದೆಯೂ ಗೌಳಿ ಸಮುದಾಯದವರು ನೀರು ಪಾಲಾಗಿದ್ದ ಬಗ್ಗೆ ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಅಹವಾಲು ಆಲಿಸಿದ ಸಚಿವರು ಸ್ಥಳೀಯ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಬಟ್ಟೆ ತೊಳೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಸಹಾಯಕ ಆಯುಕ್ತ ಅಭಿಜೀನ್, ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಬಿಇಒ ಸಮೀರ ಮುಲ್ಲಾ, ಡಿವೈಎಸ್ಪಿ ಮೋಹನ ಪ್ರಸಾದ, ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್​ಐ ಆನಂದಮೂರ್ತಿ, ಜಿಪಂ ಸದಸ್ಯ ಕೃಷ್ಣ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಅಂಬಿಕಾನಗರ, ಭಾಗವತಿ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೃತದೇಹಗಳ ಪತ್ತೆ: ಬೊಮನಳ್ಳಿ ಡ್ಯಾಂ ಬಳಿ ಹಿನ್ನಿರಿನಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಸೋಮವಾರ ರಾತ್ರಿ ಗಾಯತ್ರಿ ದೊಳು ಗಾವಡೆ ದೇಹ ಮೊದಲಿಗೆ ಪತ್ತೆಯಾಗಿತ್ತು. ತದನಂತರ ದೊಳು ಗಾವಡೆ, ಕೃಷ್ಣ ದೊಳು ಗಾವಡೆ , ಸತೀಶ ಬೀರು ಗಾವಡೆ ಮೃತದೇಹಗಳು ಪತ್ತೆಯಾದವು. ಮೃತದೇಹಗಳನ್ನು ದಾಂಡೇಲಿ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಜೆ ಬೊಮ್ಮನಳ್ಳಿಯಲ್ಲಿ ಗೌಳಿ ಸಮುದಾಯದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಹಳಿಯಾಳ ಸಿ.ಪಿ.ಐ ಬಿ.ಎಸ್.ಲೋಕಾಪುರ ನೇತೃತ್ವದಲ್ಲಿ ಮೃತದೇಹಗಳನ್ನು ಪತ್ತೆ ಮಾಡುವ ಕಾರ್ಯಚರಣೆ ನಡೆಯಿತು.