ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್​ಡಿ)ಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್ ಹೇಳಿದರು.

ಜಿಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಕೊಡಿಸುವ ಕಾರ್ಯ ಪ್ರಗತಿಯಲ್ಲಿದ್ದು, 10 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಅರಳಗೋಡು ಸೇರಿ ಹಲವೆಡೆ ಮಂಗನಕಾಯಿಲೆ ಬಗ್ಗೆ ಜನರಲ್ಲಿ ಆತಂಕ ಕಡಿಮೆ ಆಗಿಲ್ಲ. ಭಯದ ವಾತಾವರಣ ನಿರ್ವಣಗೊಂಡಿದೆ. ಆ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಹಾಗೂ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ಭರಿಸಬೇಕು ಎಂದು ಸೂಚಿಸಿದರು.

ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಲು ನಿರಾಸಕ್ತಿ ವಹಿಸುವ ವೈದ್ಯರ ಪ್ರಮಾಣಪತ್ರವನ್ನೇ ರದ್ದುಗೊಳಿಸುವಂತೆ ಸಲಹೆ ನೀಡಿದರು.

ಕೆಎಫ್​ಡಿ ನಿಯಂತ್ರಣ: ಕೆಎಫ್​ಡಿ ಕುರಿತು ಪ್ರತಿಕ್ರಿಯೆ ನೀಡಿದ ಡಿಎಚ್​ಒ ಡಾ. ಬಿ.ಸಿ.ವೆಂಕಟೇಶ್, ಈಗಾಗಲೆ 536 ಹೊರರೋಗಿಗಳಿದ್ದು, 102 ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 763 ಜನರಿಗೆ ಜ್ವರ ಕಾಣಿಸಿಕೊಂಡಿದೆ. 131 ಜನರಲ್ಲಿ ರೋಗ ಶಂಕಿಸಿದ್ದು, 17 ಪಾಸಿಟೀವ್ ಬಂದಿದೆ ಎಂದರು.

ಎಸ್ಸ್ಸೆಸ್ಸೆಲ್ಸಿಯಲ್ಲಿ 5ರೊಳಗೆ ತರಲು ಯತ್ನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಉತ್ತಮ ಫಲಿತಾಂಶಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ 20ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು 5ರೊಳಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಡಿಡಿಪಿಐ ಸುಮಂಗಳಾ ಕುಚಿನಾಡ ಹೇಳಿದರು.

ಶೂನ್ಯದಿಂದ ಶೇ.50ರೊಳಗಿರುವ 31 ಶಾಲೆಗಳಿದ್ದು, ಪ್ರತಿ ಶಾಲೆಗೆ ಒಬ್ಬೊಬ್ಬ ಅಧಿಕಾರಿ ನಿಯೋಜಿಸಿ ವಾರಕ್ಕೊಮ್ಮೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಗಣಿತ ವಿಷಯದಲ್ಲಿ ಫಲಿತಾಂಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಗಣಿತ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಹೋಬಳಿ ಮಟ್ಟದಲ್ಲಿ ಕಲಿಕೆಯಲ್ಲಿ ಹಿಂದುಳಿದ 2,916 ಮಕ್ಕಳನ್ನು ಗುರುತಿಸಿದ್ದು, 37 ಹೋಬಳಿ ಕೇಂದ್ರಗಳಲ್ಲಿ ಪ್ರತಿ ವಿಷಯದ ಕುರಿತು 5 ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಶೀಘ್ರ ಭತ್ತ ಖರೀದಿ ಆರಂಭಕ್ಕೆ ಆಗ್ರಹ: ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಇನ್ನೂ ಆರಂಭಗೊಂಡಿಲ್ಲ. ಖರೀದಿ ಕೇಂದ್ರದ ಲಾಭವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದು, ಅದನ್ನು ತಡೆಯಬೇಕು. ಅಲ್ಲದೆ ಭತ್ತ ಖರೀದಿಯನ್ನು ಶೀಘ್ರವೇ ಆರಂಭಿಸುವಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಅಧಿಕಾರಿಗಳಿಗೆ ಹೇಳಿದರು.

ಖರೀದಿ ಆರಂಭಿಸದ ಕಾರಣ ರೈತರು ನೋಂದಣಿಗೆ ನಿರಾಸಕ್ತಿ ತೋರುತ್ತಿದ್ದಾರೆ. ಈ ಹಿಂದೆ ಭತ್ತ ಕೊಯ್ಲು ಮಾಡಿ ಬಣವೆ ಹಾಕಿ ಒಕ್ಕಲುತನ ಮಾಡಲು ಕನಿಷ್ಠ 2ರಿಂದ 3 ತಿಂಗಳು ಆಗುತ್ತಿತ್ತು. ಆದರೆ ಇಂದು ಯಂತ್ರಗಳು ಬಂದಿದ್ದು, ಕೇವಲ 15 ದಿನಗಳಲ್ಲಿ ಭತ್ತ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳಿಗೆ ಅನುಕೂಲ ಆಗುತ್ತಿದೆ ಎಂದು ದೂರಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಡಕೆ ಕೊಳೆ ರೋಗ ಕುರಿತು 10 ಸಾವಿರ ಹೆಕ್ಟೇರ್ ಗುರುತಿಸಿದ್ದು, 25 ಸಾವಿರ ರೈತರಿಗೆ 18.50 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕೈದು ಸಾವಿರ ರೈತರಿಗೆ 3.5 ಕೋಟಿ ರೂ. ಬಿಡುಗಡೆ ಆಗಿದ್ದು, ರೈತರ ಖಾತೆಗೆ ನೇರ ವಿತರಣೆ ಮಾಡಲಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್​ಕುಮಾರ್ ಮಾತನಾಡಿ, ಹಿಂಗಾರಿನಲ್ಲಿ ಶಿಕಾರಿಪುರ ಮತ್ತು ಸೊರಬ ಭಾಗದಲ್ಲಿ ಮಾತ್ರ 826 ರೈತರು 1,600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. 4 ತಾಲೂಕುಗಳನ್ನು ಬರ ಎಂದು ಘೊಷಿಸಿದ್ದು, ಒಂದೆರಡು ದಿನಗಳಲ್ಲಿ ಬರ ಅಧ್ಯಯನ ತಂಡ ಪ್ರವಾಸ ಕೈಗೊಳ್ಳಲಿದೆ ಎಂದರು. ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *