ಮೂವರು ಕುಖ್ಯಾತ ವಂಚಕರ ಬಂಧನ

ಹುಬ್ಬಳ್ಳಿ: ಎರಡು ಲೋಹದ ಮೂರ್ತಿಗಳನ್ನು ಬೆಲೆ ಬಾಳುವ ಪಂಚ ಲೋಹದ ಮೂರ್ತಿಗಳೆಂದು ಮೋಸದಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಸಿಸಿಬಿ ಹಾಗೂ ಗೋಕುಲ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ಶ್ರೀವತ್ಸ ನಾರಾಯಣ, ಅಬ್ದುಲ್ ಮತೀನ ಗುಲಾಮ ಅಲಿ ಹಾಗೂ ಶಿವಮೊಗ್ಗದ ಚನ್ನಬಸಪ್ಪ ಎಂದು ಗುರುತಿಸಲಾಗಿದೆ. ಬಂಧಿತರಿಂದ ಲೋಹದ ಒಂದು ವಿಷ್ಣು ಮೂರ್ತಿ, ಮತ್ತೊಂದು ವೀರಭದ್ರ ದೇವರ ಮೂರ್ತಿ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಗೋಕುಲ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಇಲ್ಲಿನ ಹೊಸ ಬಸ್ ನಿಲ್ದಾಣ ಬಳಿಯ ಅಕ್ಷಯ ಪಾರ್ಕ್ ಸಮೀಪ ಈ ಲೋಹದ ಮೂರ್ತಿಗಳನ್ನು ಆರೋಪಿಗಳು 60 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದರು.

ಇಲ್ಲಿಯ ಚಹಾದ ಅಂಗಡಿಯೊಬ್ಬರ ಪರಿಚಯದಿಂದ ಆರೋಪಿಗಳು ಲೋಹದ ಮೂರ್ತಿಗಳ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಮತ್ತು ಗೋಕುಲ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಮೂರ್ತಿಗಳನ್ನು ಚಿಕ್ಕಮಗಳೂರು ತಾಲೂಕು ಬಾಳೆಹೊನ್ನೂರಿನಿಂದ ತರಲಾಗಿದ್ದು, ಇವು ಕಳ್ಳತನ ಮಾಡಿದ್ದಿರಬಹುದಾದ ಮಾಹಿತಿ ವಿಚಾರಣೆಯಿಂದ ಹೊರಬೀಳಬೇಕಿದೆ. ಬಂಧಿತ ಅಬ್ದುಲ್ ಮತೀನ ಗುಲಾಮ ಅಲಿ ತನ್ನನ್ನು ಹೈಕೋರ್ಟ್ ವಕೀಲನೆಂದು ಹೇಳಿಕೊಳ್ಳುತ್ತಿದ್ದು, ಆತನ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದರು.
ಆರೋಪಿಗಳು ಲೋಹದ ಮೂರ್ತಿಗಳ ಯತ್ನಕ್ಕೆ ಬಳಸಿದ್ದ ಕಾರುಗಳು ಕಳ್ಳತನದ್ದಾಗಿರಬಹುದಾದ ವಿಷಯದ ಕುರಿತೂ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಬಿ ಇನ್​ಸ್ಪೆಕ್ಟರ್ ವಿನೋದ ಮುಕ್ತೆದಾರ, ಗೋಕುಲ ಠಾಣೆ ಪಿಎಸ್​ಐ ಎಸ್.ಎಚ್. ದೊಡ್ಡಮನಿ ಮತ್ತಿತರರು ಹಾಜರಿದ್ದರು.