ಮೂಲ ಉದ್ದೇಶ ಮರೆತ ಮಾನವ

ಹಳಿಯಾಳ: ಮಾನವ ಇಂದು ಅಧ್ಯಾತ್ಮದ ಬದಲು ವಿನಾಶದತ್ತ ಹೆಜ್ಜೆಯಿಡುವ ಮೂಲಕ ತನ್ನ ಸುತ್ತ ಭಯಾನಕ ಸ್ಥಿತಿ ನಿರ್ವಿುಸಿಕೊಳ್ಳುತ್ತ ಜೀವನದ ಮೂಲ ಉದ್ದೇಶವನ್ನೇ ಮರೆಯುತ್ತಿದ್ದಾನೆ ಎಂದು ಮನಗುಂಡಿ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಾಜಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಒಂದು ತಿಂಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನೊಂದಿಗೆ ಮಾನವ ಸಹ ಇಂದು ಹೊಸತನ ಮತ್ತು ಶ್ರೀಮಂತಿಕೆಯ ಬೆನ್ನು ಹತ್ತಿದ್ದಾನೆ. ಸೃಷ್ಟಿಕರ್ತನ ಎಲ್ಲ ರಚನೆಗಳಲ್ಲಿಯೂ ಮಾನವ ಜೀವಿಯ ರಚನೆ ಶ್ರೇಷ್ಠವಾಗಿದ್ದು, ಜಗತ್ತಿನ ಎಲ್ಲ ಜೀವಿಗಳಲ್ಲಿ ಅತ್ಯಂತ ಹೆಚ್ಚು ಸಾಧನೆಗೈಯುತ್ತ ಶ್ರೇಷ್ಠನಾಗಲು ಪರಿತಪಿಸುತ್ತಿದ್ದಾನೆ. ಆದರೆ, ಇನ್ನೊಂದೆಡೆ ವಿಜ್ಞಾನ, ಅವಿಷ್ಕಾರ, ಸಂಶೋಧನೆಯ ಹೆಸರಿನಲ್ಲಿ ದೇವರ ಮಾರ್ಗದಿಂದ ವಿಮುಖನಾಗುತ್ತಿದ್ದಾನೆ ಎಂದರು.

ಶ್ರೀ ಸಿದ್ಧೇಶ್ವರ ಮಹಾಸ್ವಾಮಿಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಂಬಿಕಾ ನಗರಮಠದ ಶ್ರೀ 108 ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕೆ.ಕೆ. ಹಳ್ಳಿಯ ಶ್ರೀ ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಧಾರವಾಡ ಶ್ರೀ ರಾಮಕೃಷ್ಣ ಆಶ್ರಮದ ವಿಜಯಾನಂದ ಸ್ವಾಮೀಜಿ, ಆದಿಶಕ್ತಿ ಪೀಠ ಹಳಿಯಾಳದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ, ಯಡೋಗಾ ಶ್ರೀ ಸಿದ್ಧಾರೂಢಮಠದ ಶ್ರೀ ನಿರ್ಮಲಾನಂದ ಮಾತಾಜಿ, ಅರ್ಲವಾಡ ಆನಂದಾಶ್ರಮದ ಶ್ರೀ ರುದ್ರಾಕ್ಷಿಬಾಬಾ ಸಾನ್ನಿಧ್ಯ ವಹಿಸಿದ್ದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ, ಮಂಗೇಶ ದೇಶಪಾಂಡೆ, ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಹೂಲಿ, ಎಂ.ಎನ್. ತಳವಾರ, ವಿಆರ್​ಡಿ ಟ್ರಸ್ಟ್ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ, ಆಡಳಿತಾಧಿಕಾರಿ ಪ್ರಕಾಶ ಪ್ರಭು ಉಪಸ್ಥಿತರಿದ್ದರು. ಡಾ.ಟಿ.ಸಿ. ಮಲ್ಲಾಪುರಮಠ ಹಾಗೂ ಶಿವದೇವ ದೇಸಾಯಸ್ವಾಮಿ ನಿರ್ವಹಿಸಿದರು.

ಆಧ್ಯಾತ್ಮಿಕ ಹಾಗೂ ಜ್ಞಾನಸಂಪತ್ತಿಗೆ ಭಾರತ ಜಗತ್ತಿನಲ್ಲಿಯೇ ಶ್ರೇಷ್ಠ ಸ್ಥಾನ ಹೊಂದಿದೆ. ಆದಿಯಿಂದ ಈವರೆಗೂ ಪ್ರತಿ ಕಾಲಮಾನದಲ್ಲೂ ಶ್ರೇಷ್ಠ ಶರಣರು, ಸಂತರು, ಯುಗಪುರುಷರು ಜನಿಸಿ ಅಧ್ಯಾತ್ಮ ಹಾಗೂ ಜ್ಞಾನದ ಪರಿಧಿಯನ್ನು ಬೆಳಗಿಸಿ ಸನ್ಮಾರ್ಗವನ್ನು ತೋರಿದ್ದಾರೆ. 21ನೇ ಶತಮಾನದಲ್ಲಿ ತಮ್ಮ ನಡೆ ಹಾಗೂ ನುಡಿಯಿಂದ ಆದರ್ಶ ಬದುಕು ಕಟ್ಟಿ ಕೊಳ್ಳುವಂತಹ ಸನ್ಮಾರ್ಗವನ್ನು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ತೋರುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಒಂದು ತಿಂಗಳ ಕಾಲ ನೀಡಲಿರುವ ಆಧ್ಯಾತ್ಮಿಕ ಪ್ರವಚನ ಕೇಳುವ ಸೌಭಾಗ್ಯ ಹಳಿಯಾಳದ ಜನರಿಗೆ ಲಭಿಸಿದೆ.

| ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ

ಹಳಿಯಾಳ, ಉಪ್ಪಿನಬೇಟಗೇರಿ

ದಾಂಡೇಲಿಯಿಂದ ವಿಶೇಷ ಬಸ್ ಸೌಲಭ್ಯ

ದಾಂಡೇಲಿ: ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನಕ್ಕಾಗಿ ದಾಂಡೇಲಿಯಿಂದ ಬೆಳಗ್ಗೆ 5.30 ಮತ್ತು 6 ಗಂಟೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದಾಂಡೇಲಿಯ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.