ಮೂಲಸೌಲಭ್ಯ ವಂಚಿತ ಕಳಕಾಪುರ

ನರೇಗಲ್ಲ: ಚುನಾವಣೆ ಸಮಯದಲ್ಲಿ ಮತದಾರರಿಗೆ ಹಲವು ರೀತಿಯ ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಗೆದ್ದ ಮೇಲೆ ಜನರತ್ತ ಹಿಂದಿರುಗಿಯೂ ನೋಡುವುದಿಲ್ಲ ಎಂಬುದಕ್ಕೆ ಕಳಕಾಪುರ ಗ್ರಾಮವೇ ಸಾಕ್ಷಿ.

ಹೌದು, ಪಟ್ಟಣದ ಸಮೀಪದ ಕಳಕಾಪುರ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಚುನಾವಣೆ ವೇಳೆ ಗ್ರಾಮವನ್ನು ಅಭಿವೃದ್ಧಿಗೊಳಿಸುವ ಭರವಸೆ ನೀಡುವ ಜನಪ್ರತಿನಿಧಿಗಳು ಬಳಿಕ ಕೊಟ್ಟ ಮಾತಿನಂತೆ ನಡೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದೀಗ ಮತ್ತೆ ಲೋಕಸಭೆ ಚುನಾವಣೆ ಎದುರಾಗಿದೆ. ಇಂತಹ ವೇಳೆ ‘ವೋಟ್ ಹಾಕೋದು ಮರಿಬ್ಯಾಡ್ರೀ…, ಕೆಲ್ಸ ಮಾತ್ರ ಕೇಳಬ್ಯಾಡ್ರೀ’ ಎನ್ನುವ ಧೋರಣೆ ತಳೆದಿರುವ ಜನಪ್ರತಿನಿಧಿಗಳ ನಡೆಗೆ ಗ್ರಾಮಸ್ಥರು ಬೇಸತ್ತಿದ್ದಾರೆ.

ಹೊಸಳ್ಳಿ ಗ್ರಾಪಂಗೆ ಒಳಪಡುವ ಕಳಕಾಪುರ ಗ್ರಾಮವು ಮೂವರು ಗ್ರಾಪಂ ಸದಸ್ಯರನ್ನು ಹೊಂದಿದೆ. ಇಟಗಿ ತಾಪಂ ಕ್ಷೇತ್ರಕ್ಕೆ, ನಿಡಗುಂದಿ ಜಿಪಂ ವಿಭಾಗಕ್ಕೆ ಬರುವ ಈ ಗ್ರಾಮಕ್ಕೆ ಕನಿಷ್ಠ ಮೂಲ ಸೌಲಭ್ಯವೂ ಇಲ್ಲ. ಇದರಿಂದ ಗ್ರಾಮಸ್ಥರು ಹಲವು ಸಮಸ್ಯೆಗಳ ಮಧ್ಯೆಯೇ ದಯನೀಯ ಜೀವನ ಸಾಗಿಸುತ್ತಿದ್ದಾರೆ. 1200 ಮತದಾರರನ್ನು ಹೊಂದಿರುವ ಈ ಗ್ರಾಮವು, ಸರ್ಕಾರಿ ಪ್ರೌಢಶಾಲೆ ಹೊಂದಿದೆ. ಆದರೆ, ಗ್ರಾಮಕ್ಕೆ ಸಮರ್ಪಕ ಸಾರಿಗೆ ಸಂಚಾರ ಸೌಲಭ್ಯವಿಲ್ಲ. ಅಧಿಕ ಕುಟುಂಬಗಳು ಕೃಷಿ ಅವಲಂಬಿಸಿವೆ. ಕೃಷಿ ಉತ್ಪನ್ನ ಮಾರಾಟಕ್ಕೆ ಒಯ್ಯಲು ಸೂಕ್ತ ರಸ್ತೆಗಳಿಲ್ಲ. ಗ್ರಾಮದಲ್ಲಿ ಮಾರುಕಟ್ಟೆಯ ವ್ಯವಸ್ಥೆಯೂ ಇಲ್ಲ. ಮುಖ್ಯವಾಗಿ ಗ್ರಾಮವನ್ನು ಸಂರ್ಪಸುತ್ತಿದ್ದಂತೆ ಚರಂಡಿ ವಾಸನೆ ಹರಡುತ್ತದೆ. ಇಲ್ಲಿ ರಸ್ತೆ ಯಾವುದು ಚರಂಡಿ… ಯಾವುದು ರಸ್ತೆ ಎಂಬುದು ತಿಳಿಯುವುದಿಲ್ಲ. ರಸ್ತೆಯಲ್ಲಿ ಅಳವಾದ ತೆಗ್ಗುಗಳು ಬಿದ್ದಿದ್ದರೂ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹೆಸರಿಗೆ ಮಾತ್ರ ಇದ್ದು, ಕಾರ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು, ನಿರ್ವಹಣೆಯಿಲ್ಲದೆ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದರ ಜವಾಬ್ದಾರಿ ವಹಿಸಿಕೊಂಡಿರುವ ಭೂಸೇನಾ ನಿಗಮವು ‘ನಮಗೂ ಘಟಕಕ್ಕೂ ಸಂಬಂಧವಿಲ್ಲ’ ಎಂಬಂತಿದೆ. ಹೀಗಾಗಿ ಗ್ರಾಮದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿ ಬಸ್ ನಿಲ್ದಾಣವೂ ಇಲ್ಲ. ಇನ್ನು ಸ್ಥಳೀಯ ಗ್ರಾಪಂ ಸದಸ್ಯರು ಗ್ರಾಮದ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಹೇಳಿದ್ದೇವೆ. ಯಾರೂ ಇತ್ತ ಗಮನಹರಿಸುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ನರೇಗಲ್ಲ ಹೋಬಳಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳು ಅಭಿವೃದ್ಧಿಯತ್ತ ಸಾಗಿವೆ. ಆದರೆ, ಕಳಕಾಪುರ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ ಮರೀಚಿಕೆಯಾಗಿದೆ.

ಸಮಸ್ಯೆಗೆ ಸ್ಪಂದಿಸಿಲ್ಲ: ಚುನಾವಣೆಗಳು ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ನಮ್ಮ ಗ್ರಾಮದ ಜನರ ನೆನಪಾಗುತ್ತದೆ. ಬಳಿಕ ಯಾರೂ ಇತ್ತ ನೋಡುವುದಿಲ್ಲ. ಗ್ರಾಮದ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಇಲ್ಲಿಯವರೆಗೂ ಯಾರೂ ಗ್ರಾಮದತ್ತ ಬಂದಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ಹೊಸಳ್ಳಿ ಗ್ರಾಮ ಪಂಚಾಯಿತಿಗೆ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದೇನೆ. ಕಳಕಾಪುರ ಗ್ರಾಮದ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ.

| ಲೋಹಿತ ಹೊಸಳ್ಳಿ, ಗ್ರಾಪಂ ಪಿಡಿಒ