ಮೂಲಸೌಲಭ್ಯ ಒದಗಿಸುವಲ್ಲಿ ಶಾಸಕರು ವಿಫಲ

ಗಜೇಂದ್ರಗಡ: ಚುನಾವಣೆ ವೇಳೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಚುನಾವಣೆ ಮುಗಿದ ಬಳಿಕ ಬಿಜೆಪಿಗರು ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡದ ಪರಿಣಾಮ ಪಟ್ಟಣದಲ್ಲಿ ಕುಡಿಯುವ ನೀರು ಹಾಗೂ ಮರಳಿಗಾಗಿ ಪರದಾಡುವಂತಾಗಿದೆ ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.

ಪಟ್ಟಣದ 1ನೇ ವಾರ್ಡ್​ನ ರಾಜವಾಡೆ ಮುಂಭಾಗದಲ್ಲಿನ ಪಂಪ್​ಹೌಸ್​ನಿಂದ ಉರ್ದು ಶಾಲೆವರೆಗೆ ಮಂಗಳವಾರ ನಗರೋತ್ಥಾನ ಅಡಿಯಲ್ಲಿ ಸಿಸಿ ರಸ್ತೆ, ಪೈಪ್​ಲೈನ್ ಜೋಡಣೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಶಾಸಕರಾಗಿ ಆಯ್ಕೆಯಾದ ಬಳಿಕ ಕಳಕಪ್ಪ ಬಂಡಿಯವರು ಪಟ್ಟಣದಲ್ಲಿನ ಕುಡಿಯುವ ನೀರು ಹಾಗೂ ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಪರಿಣಾಮ ಪಟ್ಟಣದಲ್ಲಿ ಬಿಜೆಪಿ ಪುರಸಭೆ ಸದಸ್ಯರು ಹಾಗೂ ತಾಲೂಕಿನ ಕೆಲ ಗ್ರಾಮಗಳಲ್ಲಿ ಬಿಜೆಪಿ ಮುಖಂಡರು ಸಮರ್ಪಕ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸ ಎಂದರು.

ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಜನಪರ ಆಡಳಿತ ನಡೆಸಬೇಕಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ವರ್ತನೆಯಿಂದಾಗಿ ಏಕಾಏಕಿ ನೋಟ್ ಬ್ಯಾನ್​ನಂಥ ಕೆಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ದೇಶದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದಾರೆ. ಪರಿಣಾಮ ಜನವಿರೋಧಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ರಾಜೇಸಾಬ ಯಲಬುರ್ಗಿ, ಹುಸೇನಸಾಬ ನಿಶಾನದಾರ, ರಂಜಾನಸಾಬ ನದಾಫ್, ಗುಡದೆಪ್ಪ ಸಾಳೊಂಕೆ, ಪಾಶಾ ಗಂಗಾವತಿ, ಲಕ್ಷ್ಮಣ ಬಂಕದ, ಹೈದರಲಿ ಹುನಗುಂದ, ಮುರ್ತಜಾ ಚಳಗಿ, ಮೈಬೂ ಸುಂಕದ ಇದ್ದರು.