ಮೂಲಸೌಲಭ್ಯಕ್ಕೆ ಒತ್ತು ನೀಡಿ

ರೋಣ: ಆರೋಗ್ಯ ನೈರ್ಮಲ್ಯ, ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಬೇಕು ಎಂದು ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಪಂ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರಿಗೆ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು. ಅರಣ್ಯ ಇಲಾಖೆಯ ಪವಾಡಿಗೌಡ್ರ ಪ್ರಗತಿ ವರದಿ ನೀಡಲು ಮುಂದಾಗುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಮ್ಮದ ತರಫದಾರ, ತಾಲೂಕಿನ ಬಹುತೇಕ ಕಡೆ ನಿಮ್ಮ ಇಲಾಖೆಯಿಂದ ನೆಟ್ಟಿರುವ ಗಿಡಗಳ ನಿರ್ವಹಣೆ ಸರಿಯಾಗಿಲ್ಲ್ಲ ವೇಳೆಗೆ ಸರಿಯಾಗಿ ಅವುಗಳಿಗೆ ನೀರು ಹಾಕದ ಕಾರಣ ಗುಜಮಾಗಡಿ-ಸವಡಿ ರಸ್ತೆಯಲ್ಲಿರುವ ಬಹುತೇಕ ಗಿಡಗಳು ಒಣಗಿ ಹೋಗಿವೆ ಎಂದು ಆರೋಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪವಾಡಿಗೌಡ್ರ, ನೀವು ಸುಖಾ ಸುಮ್ಮನೇ ಆರೋಪಿಸಬೇಡಿ. ನೀವೂ ಸೇರಿದಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರೆದುಕೊಂಡು ಬನ್ನಿ, ವಾಹನದ ವ್ಯವಸ್ಥೆ ಮಾಡುತ್ತೇನೆ. ನಾವು ಮಾಡಿದ ಕೆಲಸವನ್ನು ನಿಮಗೆ ತೋರಿಸುತ್ತೇನೆ ಎಂದರು.

ಇದರಿಂದ ಕೋಪಗೊಂಡ ತರಫದಾರ, ಆಯ್ತು ನೀವು ನಿಮ್ಮ ಕೆಲಸ ತೋರಿಸುವಿರಂತೆ, ಈಗ ನೀವು ನೆಟ್ಟ ಗಿಡಗಳು ಹಾಗೂ ಅವುಗಳಿಗಾಗಿ ಮಾಡಿದ ಖರ್ಚಿನ ಮಾಹಿತಿ ಕೊಡಿ ಎಂದರು. ಆಗ ಪವಾಡಿಗೌಡ್ರ ಅವರು ಅದು ಕಚೇರಿಯಲ್ಲಿದೆ ಎಂದರು. ಇದರಿಂದ ಸಿಟ್ಟಿಗೆದ್ದ ತರಫದಾರ ‘ಅಲ್ರೀ ಸಾಹೇಬ್ರೆ ನೀವು ಮಾಡಿದ ಪ್ರಗತಿ ವರದಿ ಕಚೇರಿಯಲ್ಲಿಟ್ಟು ಇಲ್ಲಿಗೇನು ಮಾವನ ಮನಿಗೆ ಬಂದಿರೇನು?’ ಎಂದು ತರಾಟೆಗೆ ತಗೆದುಕೊಂಡರು.

ತಾಪಂ ಉಪಾಧ್ಯಕ್ಷೆ ಇಂದ್ರಾ ತೇಲಿ ಮಾತನಾಡಿ, ‘ನನ್ನ ಕ್ಷೇತ್ರದ ಕೆಲ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಬೀಳುವ ಹಂತ ತಲುಪಿದ್ದು, ಅವುಗಳನ್ನು ಕೂಡಲೇ ದುರಸ್ತಿಗೊಳಿಸಿ’ ಎಂದು ಬಿಇಒ ಎನ್. ನಂಜುಂಡಯ್ಯ ಅವರಿಗೆ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ನಂಜುಂಡಯ್ಯ, ಶಾಲಾ ಕೊಠಡಿ ದುರಸ್ತಿ, ನೂತನ ಕೊಠಡಿ ನಿರ್ವಣಕ್ಕೆ ಅನುದಾನ ಬರುತ್ತಿಲ್ಲ, ಹಂತ ಹಂತವಾಗಿ ಅವುಗಳನ್ನು ದುರಸ್ತಿಗೊಳಿಸಲಾಗುವುದು ಎಂದರು. ಆಗ ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಅಲ್ರೀ ನೀವು ಶಾಲಾ ಮಕ್ಕಳಿಗೆ ಏನು ಅವಶ್ಯಕತೆಯಿದೆಯೋ ಅದನ್ನೇ ಮಾಡುತ್ತಿಲ್ಲ, ಹೀಗಾಗಿ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಪಟ್ಟಣದ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ ಎಂದು ಚಾಟಿ ಬೀಸಿದರು.

ತಾಪಂ ಇಒ ಎಂ.ವಿ. ಚಳಗೇರಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನೀವು ಬೇಡ, ನಿಮ್ಮ ಅಧಿಕಾರಿ ಕಳುಹಿಸಿ: ಶಿಶು ಅಭಿವೃದ್ಧಿ ಅಧಿಕಾರಿ ನಾಗನಗೌಡ ಅನುಪಸ್ಥಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರೊಬ್ಬರು ಸಭೆಗೆ ಆಗಮಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷೆ-ಉಪಾಧ್ಯಕ್ಷರು ಇನ್ನು ಮುಂದೆ ಯಾವುದೇ ಕಾರಣಕ್ಕೂ ನೀವು ಬರಬೇಡಿ. ನಿಮ್ಮ ಅಧಿಕಾರಿಯನ್ನೇ ಕಳಿಸಿ ಎಂದು ಖಡಕ್ ವಾರ್ನಿಂಗ್ ನೀಡಿದರು.