ಚಾಮರಾಜನಗರ: ಕಾಡಂಚಿನ ಗ್ರಾಮಗಳು ಹಾಗೂ ವಿವಿಧ ಪೋಡುಗಳಿಗೆ ಮೂಲಸೌಕರ್ಯ ಒದಗಿಸದಿದ್ದರೆ, ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೋರಾಟಕ್ಕೆ ಮುಂದಾಗಿದ್ದ ರೈತರ ಸಮಸ್ಯೆಗಳನ್ನು ಶೀಘ್ರದಲ್ಲೇ ಈಡೇರಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣಕ್ಕೆ ಅಡ್ಡಿಪಡಿಸುವ ಸಲುವಾಗಿ ಸೇರಿದ್ದ ಪ್ರತಿಭಟನಾಕಾರರನ್ನು ಪೋಲೀಸರು ತಡೆದರು. ರೈತರು ಸ್ಥಳದಲ್ಲೇ ಧರಣಿ ಕುಳಿತು ಸಚಿವರು ಪ್ರತಿಭಟನಾ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಕಾರ್ಯಕ್ರಮದ ನಂತರ ಅಧಿಕಾರಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ರೈತರ ಬೇಡಿಕೆಗಳು, ಸಮಸ್ಯೆಗಳನ್ನು ಆಲಿಸಿ ನಂತರ ರೈತರೊಂದಿಗೆ ಚರ್ಚಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಹಲವು ಪೋಡುಗಳಿಗೆ ಇಂದಿಗೂ ಮೂಲಸೌಕರ್ಯ ಕಲ್ಪಿಸಿಲ್ಲ. ಸೂಕ್ತ ರಸ್ತೆ ಹಾಗೂ ವಿದ್ಯುತ್ ಸೌಲಭ್ಯವಿಲ್ಲ. ಬೆಂಕಿಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಆಮೆಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ದಲಿತರ ಜಮೀನು ಕಿತ್ತುಕೊಂಡಿದ್ದಾರೆ. ಅದಕ್ಕೆ ಪರಿಹಾರವನ್ನು ಈವರೆಗೂ ನೀಡಿಲ್ಲ ಎಂದು ದೂರಿದರು.
ಮ.ಬೆಟ್ಟ ವನ್ಯಜೀವಿ ಧಾಮದ ಡಿಎಫ್‌ಒ ಸಂತೋಷ್ ಕುಮಾರ್ ಆ ಭಾಗದ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅಲ್ಲಿ ವಾಸ ಮಾಡುತ್ತಿರುವ ಜನರು ಕಾಡುಗಳಲ್ಲಿ ದನಕರುಗಳನ್ನು ಮೇಯಿಸಲು ಅವಕಾಶ ನೀಡುತ್ತಿಲ್ಲ. ಹಿಂದೆ ಇದ್ದ ಡಿಎಫ್‌ಒ ಇಲ್ಲಿನ ಜನರು ಓಡಾಡಲು ಜನವನ ವಾಹನವನ್ನು ಆರಂಭಿಸಿದ್ದರು. ಆದರೆ, ಇವರು ಅದನ್ನು ನಿಲ್ಲಿಸಿದ್ದಾರೆ. ರೈತರ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯಬೇಕು. ನಮ್ಮ ಸಂಕಷ್ಟಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ಮಾತನಾಡಿ, ಅರಣ್ಯ ಅಧಿಕಾರಿಗಳು ಸರ್ಕಾರಿ ವಾಹನವನ್ನು ಅಡ್ಡಾದಿಡ್ಡಿಯಾಗಿ ಬಳಕೆ ಮಾಡುತ್ತಿದ್ದು, ಪೋಡುಗಳ ವಿದ್ಯಾರ್ಥಿಗಳು, ಜನರು ಸಂಚರಿಸಲು ಜನವನ ವಾಹನ ಬಿಡಲು ಆಗುವುದಿಲ್ಲವೇ? ರೈತರು ಜಮೀನಿನಲ್ಲಿ ಬೆಳದಿರುವ ಗಂಧದ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಎರಡು ವರ್ಷಗಳಾದರೂ ಅನುಮತಿ ನೀಡುವುದಿಲ್ಲ ಎಂದು ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪಾ ಜೆ.ಕಂಟ್ರಾಕ್ಟರ್ ಅವರನ್ನು ಪ್ರಶ್ನಿಸಿದರು.
ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಒಂದು ವಾರದೊಳಗೆ ಮಲೆ ಮಹದೇಶ್ವರಬೆಟ್ಟದಲ್ಲಿ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿದ್ದಾರೆ. ಮನರೇಗಾ ಯೋಜನೆಯಡಿ ಈಗಾಗಲೇ ಅಲ್ಲಿ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದ್ದು, ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಈಗಾಗಲೇ ಹನೂರು ಬಳಿ ಜಾಗ ಗುರುತಿಸಲಾಗಿದ್ದು, ಸ್ಥಳಾಂತರವಾಗಲು ಸಿಎಂ ಅವರ ಸಹಿ ಅಷ್ಟೇ ಬಾಕಿ ಇದೆ ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪಾ ಜೆ.ಕಂಟ್ರಾಕ್ಟರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಎಡಿಸಿ ಗೀತಾ ಹುಡೇದ, ಡಿವೈಎಸ್ಪಿ ಲಕ್ಷ್ಮಯ್ಯ, ರಘು, ಇದ್ದರು. ಧರಣಿಯಲ್ಲಿ ಕುಂದಕೆರೆ ಸಂಪತ್ತು, ಚಂಗಡಿ ಕರಿಯಪ್ಪ, ಮಹೇಶ್, ಮಾಡಹಳ್ಳಿ ಮಹದೇವಪ್ಪ, ಮಣಿ, ಮಹದೇವಮೂರ್ತಿ, ಚಿಕ್ಕಣ್ಣ ಹಾಗೂ ಇತರರು ಭಾಗವಹಿಸಿದ್ದರು.