ಆನಂದ ಭಮ್ಮನ್ನವರ ಚಿಕ್ಕೋಡಿ: ಜಿಲ್ಲೆಯ ಅಥಣಿ ತಾಲೂಕಿನ ಒಟ್ಟು 15 ಗ್ರಾಮಗಳಿಗೆ ಅನುಕೂಲವಾಗಲೆಂದು ಚಿಕೂಡ ಹಾಗೂ ಸತ್ತಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆರಂಭಿಸಲಾಗಿದೆ. ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ. ಇದು ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಇವೆರಡು 103 ಕೋಟಿ ರೂ. ವೆಚ್ಚದ ಕಾಮಗಾರಿಗಳಾಗಿದೆ. 2022ರಲ್ಲಿ ಸತ್ತಿ, 2023ರಲ್ಲಿ ಚಿಕೂಡ ಯೋಜನೆ ಕಾಮಗಾರಿ ಆರಂಭಿಸಲಾಗಿದೆ. ಸತ್ತಿ ಯೋಜನೆಗೆ 63 ಕೋಟಿ ರೂ., ಚಿಕೂಡ ಯೋಜನೆಗೆ 40 ಕೋಟಿ ರೂ. ಖರ್ಚು ಮಾಡಲಾಗಿದೆ. ಕೃಷ್ಣಾ ನದಿಯಿಂದ ಚಿಕೂಡ ಯೋಜನೆಗೆ ಸಿದ್ದಾಪುರ ಬ್ಯಾರೇಜ್‌ನಿಂದ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾಮಗಾರಿ ಕುಂಟುತ್ತ ಸಾಗಿದೆ. ಸತ್ತಿ ಯೋಜನೆಗೆ ನಾಗನೂರ ಪಿಕೆ ಗ್ರಾಮದ ಜಾಕ್‌ವೆಲ್‌ನಿಂದ ಒಟ್ಟು 80 ಕಿಮೀ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾಮಗಾರಿ ಹೊಣೆ ಹೊತ್ತಿದೆ. ಸಿಆರ್‌ಜಿ ಇನ್ಪಾಸ್ಟ್ರಕ್ಚರ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ.
ಯಾವ ಕಾಮಗಾರಿ ಯಾಕೆ ವಿಳಂಬ: ಕೃಷ್ಣಾ ನದಿಯಿಂದ ಈ ಎರಡು ಯೋಜನೆಗೆ ನೀರು ಬಳಸಲು ಯೋಜನೆ ರೂಪಿಸಲಾಗಿದೆ. ಅಧಿಕಾರಿಗಳ ಸಮನ್ವಯತೆ ಕೊರತೆ, ಪೈಪ್‌ಲೈನ್ ಅಳವಡಿಸಲು ಸ್ಥಳೀಯರ ತಕರಾರು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಯೋಜನೆ ಅನುಷ್ಠಾನಕ್ಕೆ ನಿರ್ಮಿಸುತ್ತಿರುವ ಓವರ್ ಹೆಡ್ ಟ್ಯಾಂಕ್, ಪೈಪ್‌ಲೈನ್ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಶೇ.50ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿವೆ.
ಯೋಜನೆ ವ್ಯಾಪ್ತಿ ಗ್ರಾಮಗಳು: ಸತ್ತಿ ಯೋಜನೆ ವ್ಯಾಪ್ತಿಯಲ್ಲಿ ಸತ್ತಿ, ಸವದಿ, ನಾಗನೂರ ಪಿಕೆ, ಅವರಖೋಡ, ಸಂಕೋನಟ್ಟಿ ಹಾಗೂ ಚಿಕೊಡ ಯೋಜನೆ ವ್ಯಾಪ್ತಿಗೆ ಸಿದ್ದಾಪುರ, ದರೂರ, ನದಿ ಇಂಗಳಗಾವ, ಸಪ್ತಸಾಗರ, ಚಿಕೂಡ, ಸಂಕ್ರಟ್ಟಿ, ಶೇಗುಣಸಿ ಗ್ರಾಮಗಳು ಒಳ ಪಡುತ್ತವೆ. ಯೋಜನೆ ಅನುಷ್ಠಾನಗೊಂಡರೆ ಈ ಗ್ರಾಮಗಳಿಗೆ ನೀರಿನ ಬವಣೆ ನೀಗಲಿದೆ.

ಸತ್ತಿ ಬಹು ಗ್ರಾಮ ಕುಡಿಯುವ ಯೋಜನೆ ಅನುಷ್ಠಾನಗೊಂಡರೆ 8 ಗ್ರಾಮಗಳಿಗೆ ನೀರಿನ ಬವಣೆ ದೂರಾಗಲಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದರೂ ಅರ್ಧ ಕಾಮಗಾರಿ ಆಗಿಲ್ಲ. ಆದಷ್ಟು ಬೇಗ ಕಾಮಗಾರಿಗೆ ವೇಗ ನೀಡಿ, ಯೋಜನೆ ಅನುಷ್ಠಾನಗೊಳಿಸಲಿ.
| ಮಲ್ಲಪ್ಪ ಹಂಚಿನಾಳ, ಗ್ರಾಪಂ ಮಾಜಿ ಅಧ್ಯಕ್ಷ, ಸತ್ತಿಅಥಣಿ ತಾಲೂಕಿನ ಸತ್ತಿ ಹಾಗೂ ಚಿಕೂಡ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಪ್ರಗತಿಯಲ್ಲಿವೆ. ಕೆಲವು ತಾಂತ್ರಿಕ ದೋಷದಿಂದ ಕಾಮಗಾರಿ ವಿಳಂಭವಾಗಿದ್ದು, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು.
| ರವೀಂದ್ರ ಮುರಗಾಲಿ, ಎಇಇ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಥಣಿ