ಕಲಬುರಗಿ: ಭೂಮಿಯಲ್ಲಿ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಇಂಗುವಂತೆ ಮಾಡಲು ರೂಪಿಸಿರುವ ಅಂತರ್ಜಲ ಚೇತನ ಯೋಜನೆ ಫಲವಾಗಿ ಮೂರು ವರ್ಷದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ಕಾಣಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ವಿಶ್ವ ಪರಿಸರ ದಿನವಾದ ಶುಕ್ರವಾರ `ಅಂತರ್ಜಲ ಚೇತನ’ ಯೋಜನೆಗೆ ಚಾಲನೆ ನೀಡಿದ ಅವರು, 40 ವರ್ಷ ಹಿಂದೆ ಶೇ.40 ಮಳೆ ನೀರು ಭೂಮಿ ಇಂಗುತ್ತಿತ್ತು. ಆದರೀಗ ಕೇವಲ ಶೇ.5 ಇಂಗುತ್ತಿದೆ. ಮೊದಲಿನಂತೆ ಭೂಮಿ ನೀರು ಇಂಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ನದಿ, ಕೆರೆ ಸೇರಿ ಅಂತರ್ಜಲ ಮೂಲಗಳನ್ನು ರಕ್ಷಿಸದಿದ್ದರೆ ನಮ್ಮ ಮಗುವಿಗೆ ನಾವೇ ವಿಷವಿಟ್ಟಂತೆ ಆಗಲಿದೆ. ಅಂತರ್ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ದಿ ಆರ್ಟ್ ಆಫ್ ಲಿವಿಂಗ್ ಹಾಗೂ ಮೈರಾಡ ಸಂಸ್ಥೆಗಳು ಈ ಯೋಜನೆ ಜಾರಿಗೆ ಸರ್ಕಾರದೊಂದಿಗೆ ಕೈಜೋಡಿಸಿವೆ. ಮುಂದಿನ ಮೂರು ವರ್ಷದಲ್ಲಿ ಪ್ರತಿ ಮನೆಗೆ ಗಂಗೆ ಬರಲಿದ್ದಾಳೆ. ಎಲ್ಲ ಹಳ್ಳಿ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕರೊನಾ ನಿರ್ಮೂಲನೆಗಾಗಿ ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ.ರಾಜಾ ಪಿ. ಸೇರಿ ಜಿಲ್ಲೆಯ ಅಧಿಕಾರಿಗಳು ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ನಾನಾ ಕಡೆಗಳಿಂದ ಆಗಮಿಸಿದ ವಲಸಿಗರಿಗೆ ನರೇಗಾದಲ್ಲಿ ಕೆಲಸ ಕೊಡುವ ಮೂಲಕ ಮತ್ತೆ ಯಾರೂ ಗುಳೆ ಹೋಗದಂತೆ ಕ್ರಮ ವಹಿಸಬೇಕು ಎಂದು ಕೋರಿದರು.
ಆರ್ಟ್ ಆಫ್ ಲಿವಿಂಗ್ ಪ್ರತಿನಿಧಿ ನಾಗರಾಜ ಮಾತನಾಡಿ, ಹಳ್ಳಿ ಮನೆ-ಮನೆಗಳಲ್ಲಿ ಅರಿವು ಮೂಡಿಸುವ ಮೂಲಕ ಮೂರು ವರ್ಷದಲ್ಲಿ ಅಂತರ್ಜಲ ಇಂಗುವಿಕೆ ಪ್ರಮಾಣವನ್ನು ಶೇ.30ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ಶಾಸಕರಾದ ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ್, ಡಾ.ಅವಿನಾಶ ಜಾಧವ್, ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಪಂ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಡಿಸಿ ಶರತ್ ಬಿ., ಜಿಪಂ ಸಿಇಒ ಡಾ.ಪಿ.ರಾಜಾ ಇತರರಿದ್ದರು.
ಅಂತರ್ಜಲ ಚೇತನ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಜ್ಞಾನ ಸಹಾಯ ನೀಡಲು 24 ಸಂಸ್ಥೆಗಳು ಮುಂದೆ ಬಂದಿದ್ದವು. ಕೆಲ ಮಾನದಂಡ ಅನುಸರಿಸಿ 4 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಹಾಗೂ ಮೈರಾಡ ಸಂಸ್ಥೆಗಳು ಈ ಯೋಜನೆಗೆ ನೆರವಾಗಲಿವೆ.
| ಅನಿರುದ್ಧ ಶ್ರವಣ್
ಪಂಚಾಯತ್ ರಾಜ್ ಇಲಾಖೆ ಆಯುಕ್ತ
ಭೀಮಾದಲ್ಲಿ ಅಕ್ರಮ ಮರಳುಗಾರಿಕೆ ತಡೆಯಿರಿ
ನದಿ ಸಂರಕ್ಷಣೆ, ಜಲಚೇತನ ಮಾಡಲು ಯೋಜನೆ ಹಾಕಿಕೊಂಡರೆ ಪ್ರಯೋಜವಾಗಲ್ಲ, ನದಿಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು. ಅದರಲ್ಲೂ ಜಿಲ್ಲೆಯ ಜೀವ ನದಿ ಭೀಮೆಯುದ್ದಕ್ಕೂ ನಡೆದಿರುವ ಅಕ್ರಮ ಮರಳುಗಾರಿಕೆ ತಡೆಯಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಆಗ್ರಹಿಸಿದರು. ನದಿ ಉಳಿದರೆ ನೀರು ಉಳಿಯಲು ಸಾಧ್ಯ ಎಂಬುದನ್ನು ಅರಿತು ರಾಜ್ಯದಲ್ಲಿ ಹರಿಯುವ 110 ಕಿಮೀ ಉದ್ದದ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಇಲ್ಲವಾದರೆ ನದಿ ಸಂರಕ್ಷಣೆ ಯೋಜನೆ ಉಪಯೋಗವಾಗಲ್ಲ ಎಂದು ಹೇಳಿ ಗಮನ ಸೆಳೆದರು.