ಮೂರು ಮೈಲಿ ನಡೆದರಷ್ಟೇ ಶಾಲೆ, ಆಸ್ಪತ್ರೆ!

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ: ಕಾನಗಮಾಕಲಪಲ್ಲಿ ಗ್ರಾಪಂನ ದೇಶಮಾರ ತಾಂಡಾದಲ್ಲಿ 32 ಲಂಬಾಣಿ ಕುಟುಂಬಗಳಿದ್ದು, ಮೂಲಸೌಲಭ್ಯಗಳಿಂದ ವಂಚಿತಗೊಂಡಿವೆ.

ಮೂರರಿಂದ 5 ವರ್ಷದ ಮಕ್ಕಳು 12, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ 15 ಮಕ್ಕಳು ತಾಂಡಾದಲ್ಲಿದ್ದು, ಶಾಲೆ ಹಾಗೂ ಆಸ್ಪತ್ರೆಗೆ ತೆರಳಬೇಕಾದರೆ ಗಿಡ-ಗಂಟಿ, ಕಲ್ಲಿನ ಮೂರು ಮೈಲು ದೂರದ ಮಾರ್ಗದಲ್ಲಿ ಯಲ್ಲಂಪಲ್ಲಿಗೆ ಕಾಲ್ನಡಿಗೆ ಮೂಲಕ ಹೋಗಿ ಅಲ್ಲಿಂದ ಬಾಗೇಪಲ್ಲಿಗೆ ಬಸ್ ಹತ್ತಬೇಕು.

ತಾಂಡಾದಲ್ಲಿ ಕೊರೆಸಲಾಗಿದ್ದ ಕೊಳವೆಬಾವಿ ಬತ್ತಿದ್ದು, ಏಳು ತಿಂಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಗ್ರಾಪಂನಿಂದ ವಾರದ ಎರಡು ದಿನ ಒಂದೊಂದು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದ್ದು, ಇದು ಸಾಕಾಗುತ್ತಿಲ್ಲ. ಗ್ರಾಪಂ ಸಮರ್ಪಕ ನೀರಿನ ಸೌಲಭ್ಯ ಕಲ್ಪಿಸದ ಕಾರಣ ಒಂದು ಕಿ.ಮೀ. ದೂರದ ಕಟ್ಟೆ ಬಳಿಗೆ ಕಾಡು ರಸ್ತೆಯಲ್ಲಿ ತೆರಳಿ ಬಟ್ಟೆಯಿಂದ ಶೋಧಿಸಿ ತರುವ ಸ್ಥಿತಿ ಏರ್ಪಟ್ಟಿದೆ. ಅನಿವಾರ್ಯ ಪರಿಸ್ಥಿತಿಯಿಂದಾಗಿ ಅದೇ ನೀರನ್ನು ಅಡುಗೆ ಮತ್ತು ಕುಡಿಯಲು ಬಳಸುತ್ತಿರುವುದರಿಂದ ಅನೇಕರು ಜ್ವರ, ನೆಗಡಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಅಂಗನವಾಡಿಯೂ ಇಲ್ಲ: ತಾಂಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂಗನವಾಡಿ ತೆರೆದು ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಮತ ಕೇಳಲು ತಾಂಡಾಗೆ ಆಗಮಿಸಿದ್ದ ಜನಪ್ರತಿನಿಧಿಗಳು ಈಗ ಇತ್ತ ತಲೆ ಹಾಕುತ್ತಿಲ್ಲ. ಅಧಿಕಾರಿಗಳೂ ಸಹ ನಿರ್ಲಕ್ಷ್ಯ ಮುಂದುವರಿಸಿದ್ದಾರೆ.

 

ಬಾಗೇಪಲ್ಲಿ ತಾಲೂಕಿನ ಏಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಕೊಳವೆಬಾವಿ ಕೊರೆಯುವಂತೆ ಇಂಜಿನಿಯರ್​ಗೆ ಸೂಚಿಸಲಾಗುತ್ತದೆ.

| ಕೆ.ವಿ.ರೆಡ್ಡಪ್ಪ, ಕಾರ್ಯನಿರ್ವಹಣಾಧಿಕಾರಿ, ತಾಪಂ

ಜಿಲ್ಲಾಧಿಕಾರಿಯ ವಿಶೇಷ ಅನುದಾನ ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಲ್ಲಿ ದೇಶಮಾರ ತಾಂಡಾದಲ್ಲಿ ಕೊಳವೆಬಾವಿ ಕೊರೆಸಲು ಪ್ರಯತ್ನಿಸುತ್ತೇವೆ. ಸಾಧ್ಯವಾಗದಿದ್ದಲ್ಲಿ ಹೆಚ್ಚುವರಿ ಟ್ಯಾಂಕರ್ ನೀರು ಸರಬರಾಜು ಮಾಡಲಾಗುವುದು.

| ಗುರುದತ್ ಹೆಗಡೆ, ಜಿಪಂ ಸಿಇಒ