ಮೂರು ತಾಸಲ್ಲಿ ಲಕ್ಷ ರೂ. ದಂಡ

ಹುಬ್ಬಳ್ಳಿ: ಹೊಸೂರು ವೃತ್ತದಿಂದ ವಿಮಾನ ನಿಲ್ದಾಣದವರೆಗೆ ಶುಕ್ರವಾರ ಸಂಜೆ ಭಾರಿ ಕಾರ್ಯಾಚರಣೆ ನಡೆಸಿದ 25 ಪೊಲೀಸರ ತಂಡ ಮೂರು ತಾಸಿನಲ್ಲಿ ಬರೋಬ್ಬರಿ 738 ಪ್ರಕರಣ ದಾಖಲಿಸಿಕೊಂಡು, 98,350 ರೂ. ದಂಡ ವಸೂಲಿ ಮಾಡಿದೆ. ನಿಯಮ ಉಲ್ಲಂಘಿಸಿದ 80 ಬೈಕ್​ಗಳು, 45 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದ ತಂಡ ವಾಹನಗಳ ತೀವ್ರ ತಪಾಸಣೆ ನಡೆಸಿತು. ಸರಗಳ್ಳತನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ತಪಾಸಣೆ ನಡೆಸಿದರು. ದಾಖಲೆ ಇಲ್ಲದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ಚಾಲನಾ ಪತ್ರ, ಹೆಲ್ಮೆಟ್ ಧರಿಸದಿರುವ ಹಾಗೂ ವಿಮೆ ಮಾಡಿದ ವಾಹನಗಳಿಗೆ ದಂಡ ವಿಧಿಸಿದರು.

ಪೊಲೀಸ್ ಅಧಿಕಾರಿಗಳ 25 ತಂಡಗಳು ಏಕ ಕಾಲದಲ್ಲಿ ಭಾರಿ ಕಾರ್ಯಾಚರಣೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವವರಲ್ಲಿ ನಡುಕ ಹುಟ್ಟಿಸಿದರು. ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಮೀಟರ್ ಇಲ್ಲದ ಆಟೋ ವಶಕ್ಕೆ: ಈಗಾಗಲೇ ಆಟೋ ಮೀಟರ್ ಕಡ್ಡಾಯಗೊಳಿಸಲಾಗಿದ್ದು, ಮೀಟರ್ ಅಳವಡಿಸದ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ ಆಟೋ ಮೀಟರ್ ಕಡ್ಡಾಯ ಮಾಡುವ ಕುರಿತು ಚಾಲಕರಿಗೆ ಸೂಚನಾ ಪತ್ರ ನೀಡಲಾಯಿತು.

ಹಳಿ ದಾಟುವಾಗ ಮಹಿಳೆ ಸಾವು

ಹುಬ್ಬಳ್ಳಿ: ರೈಲು ಹಳಿ ದಾಟಲು ಮುಂದಾಗಿದ್ದ ಅಪರಿಚಿತ ಮಹಿಳೆಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಶೋಕನಗರದ ಕಿಮ್್ಸ ಹಿಂದಿನ ಗೇಟ್ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಸುಮಾರು 45ರಿಂದ 50 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಹನ ಡಿಕ್ಕಿ, ಚಿಗರಿ ಸಾವು

ಸಂಶಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಡು ಚಿಗರಿಯೊಂದು ಸಾವನ್ನಪ್ಪಿದ ಘಟನೆ ಗ್ರಾಮದ ಹೊರವಲಯದ ಯರೇಬೂದಿಹಾಳ ಕ್ರಾಸ್ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ವೀಕ್ಷಕ ಎನ್.ಜಿ. ಶಿರಹಟ್ಟಿ ಹಾಗೂ ಸಿಬ್ಬಂದಿ ಮೃತ ಚಿಗರಿಯನ್ನು ಕುಂದಗೋಳದ ಪಶು ಚಿಕಿತ್ಸಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಹಿರಿಯ ಅಧಿಕಾರಿಗಳ ಸೂಚನೆಯಂತೆ ಹುಬ್ಬಳ್ಳಿ ವಲಯದ ಅರಣ್ಯ ಪ್ರದೇಶದಲ್ಲಿ ಚಿಗರಿಯ ಅಂತ್ಯ ಸಂಸ್ಕಾರ ಮಾಡಲಾಯಿತು ಎಂದು ತಿಳಿಸಿದ್ದಾರೆ.

ದೇವರ ದೀಪ ಬಿದ್ದು ಮನೆಗೆ ಬೆಂಕಿ

ಹುಬ್ಬಳ್ಳಿ: ದೇವರ ಕೋಣೆಯಲ್ಲಿ ಹಚ್ಚಿದ್ದ ದೀಪ ಕೆಳಗೆ ಉರುಳಿ ಬಿದ್ದು ಮನೆಗೆ ಬೆಂಕಿ ಹೊತ್ತಿಕೊಂಡ ಘಟನೆ ಎಪಿಎಂಸಿ ಬಳಿಯ ಈಶ್ವರ ನಗರದಲ್ಲಿ ಶುಕ್ರವಾರ ಸಂಭವಿಸಿದೆ. ನಾಗಪ್ಪ ಅವಳಕೋಡ ಎಂಬುವರ ಮನೆಯಲ್ಲಿ ಅವಘಡ ಸಂಭವಿಸಿದೆ. ದೇವರ ಪೂಜೆ ವೇಳೆ ದೀಪ ಹಚ್ಚಿ ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದ ವೇಳೆ ಹೇಗೋ ಬೆಂಕಿ ಹೊತ್ತಿಕೊಂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಲ್ಲಿ 50 ಸಾವಿರ ರೂ. ಮೌಲ್ಯದ ಬಟ್ಟೆ, ಟಿವಿ, ಫ್ಯಾನ್, ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕದಳ ಸಿಬ್ಬಂದಿ ತಿಳಿಸಿದ್ದಾರೆ.

ಬೀದಿ ವ್ಯಾಪಾರಿ ಮೇಲೆ ಹಲ್ಲೆ 

ಹುಬ್ಬಳ್ಳಿ: ಕಲ್ಯಾಣ ಮಂಟಪ ಬಳಿ ಅಂಗಡಿ ತೆರೆಯುವ ಸಂಬಂಧ ಹಾಡಹಗಲೇ ಬೀದಿ ವ್ಯಾಪಾರಸ್ಥನ ಮೇಲೆ ಹಲ್ಲೆ ನಡೆಸಿದ ಘಟನೆ ಹಳೇ ಹುಬ್ಬಳ್ಳಿ ಗುಡಿಹಾಳ ರಸ್ತೆಯ ನಿಹಾಲ್ ಕಲ್ಯಾಣ ಮಂಟಪ ಬಳಿ ನಡೆದಿದೆ.

ಆನಂದ ನಗರದ ಈರಣ್ಣ ಪವಾರ ಹಲ್ಲೆಗೀಡಾದ ವ್ಯಕ್ತಿ. ಅಂಗಡಿ ತೆರೆಯುವ ವಿಚಾರದಲ್ಲಿ ಜಗಳ ತೆಗೆದ ನಾಲ್ವರು ಈರಣ್ಣ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ವಿಚಾರಣಾಧೀನ ಕೈದಿ ಪರಾರಿ

ಹುಬ್ಬಳ್ಳಿ: ಚಿಕಿತ್ಸೆಗೆ ಕರೆತಂದಿದ್ದ ವಿಚಾರಣಾಧೀನ ಕೈದಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಇಲ್ಲಿನ ಕಿಮ್್ಸ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ಕೇಶ್ವಾಪುರ ಮಧುರಾ ಎಸ್ಟೇಟ್​ನ ಬಸವರಾಜ ಕುರುಡಗಿಮಠ (47) ಪರಾರಿಯಾದ ವಿಚಾರಣಾಧೀನ ಕೈದಿ.

ಅತ್ಯಾಚಾರ ಪ್ರಕರಣದಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಬಸವರಾಜನನ್ನು ಬಂಧಿಸಿ, ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಬಳಿಕ ಎದೆನೋವು ಎಂದು ಇತ್ತೀಚೆಗೆ ಕಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದ. ಕಿಮ್ಸ್​ನ ಕೈದಿಗಳ ವಾರ್ಡ್​ನಿಂದ ಬೆಂಗಾವಲು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಿ ಹೋಗಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈತನ ಸುಳಿವು ಸಿಕ್ಕಲ್ಲಿ ಕಂಟ್ರೋಲ್ ರೂಮ್ (0836-2233555) ಸಂರ್ಪಸುವಂತೆ ಕೋರಲಾಗಿದೆ.