ಮೂರುಕಾಸು ಕೆಲಸಕ್ಕೆ ಮೂಟೆದುಡ್ಡು ಬೇಕು!

ಬೆಲೆ ಇಲ್ಲದಂತೆ ನೋಟುಗಳು ಚಲಾವಣೆಯಲ್ಲಿದ್ದರೆ ವೈದ್ಯಕೀಯ ಶಿಕ್ಷಣ ಬಿಡಿ, ನರ್ಸರಿ ಸ್ಕೂಲ್ಗೆ ಮಕ್ಕಳನ್ನು ಸೇರಿಸೋದಕ್ಕೂ ಲಕ್ಷ ರೂ. ಡೊನೇಷನ್ ಕೊಡಬೇಕು. ಕೇಂದ್ರ ಸರ್ಕಾರದ ಒಂದು ದಿಟ್ಟ ನಿರ್ಧಾರ ದೇಶವನ್ನೇ ಎಬ್ಬಿಸಿ ಕೂರಿಸಿದೆ. ಕೆಲ ದಶಕದ ಹಿಂದೆ ಜರ್ಮನಿಯೂ ಇಂಥದ್ದೇ ಸ್ಥಿತಿಯಿಂದ ಮೇಲೆದ್ದ ಪವಾಡ ಹೇಗಿತ್ತು ಗೊತ್ತೇ?

ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣ-ಭ್ರಷ್ಟಾಚಾರದ ವಿರುದ್ಧದ ಮಹಾಸಮರದಲ್ಲಿ ಕರೆನ್ಸಿ ನೋಟಿನ ರಾಮಬಾಣ ಬಿಟ್ಟಿದ್ದಾರೆ. ಜನ ಬೆರಗಾಗಿದ್ದಾರೆ. ಕಷ್ಟಕಷ್ಟ ಎನ್ನುವುದನ್ನು ಕೂಡ ಅವರು ಹೇಳುತ್ತಿಲ್ಲ; ಇದೂ ಓಕೆ ಎಂದು ಮೆಚ್ಚುಗೆಯಲ್ಲಿ ಕಷ್ಟವನ್ನೂ ಮರೆತಿದ್ದಾರೆ; ಇಲ್ಲಿ ಮಾತು ಮೌನವಾಗಿದೆ; ಮೌನ ವಾಚಾಳಿಯಾಗಿದೆ.

ದುಡ್ಡು ಹೆಚ್ಚಾದಾಗ ವಸ್ತುಗಳು-ಸೇವೆಗಳು ಲೆಕ್ಕಾಚಾರ ಕಳೆದುಕೊಳ್ಳುತ್ತವೆ. ಸರ್ಕಾರದ ಖರ್ಚೂ ಯದ್ವಾತದ್ವಾ ಏರಿದ್ದಕ್ಕೆ ಮೂಲಕಾರಣ ‘ಎಲ್ಲೆಲ್ಲೂ ದುಡ್ಡು’ ಎಂಬ ಶಾಪ. ನನ್ನ ಮಾತು ಅರ್ಥವಾಗಲಿಲ್ಲವೆ? ಈ ಉದಾಹರಣೆ ನೋಡಿ: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸು

ಜಾರಿಗೊಳಿಸಿದಾಗ 2007ರಲ್ಲಿ ಬೊಕ್ಕಸದ ಹೊರೆ 26,000 ಕೋಟಿ ರೂ.ಗೇರಿತು! 2016ರಲ್ಲಿ ಇದು 1.02 ಲಕ್ಷ ಕೋಟಿ ರೂ.ಗೆ ಏರಿದೆ!! ನೋಟುಗಳು ಜಾಸ್ತಿಯಾದಂತೆ ಇಂಥದ್ದೆಲ್ಲಾ ಇದ್ದದ್ದೇ. ರೊಕ್ಕ ಜಾಸ್ತಿ; ಆದರೆ ಸುಖ ಜಾಸ್ತಿ ಆಗುತ್ಯೇ?

ಖಂಡಿತಾ ಇಲ್ಲ; ಆಗ ಕಾಫಿ-ಇಡ್ಲಿ ವಡೆಗೆ ಕೊಡುತ್ತಿದ್ದ ಹಣವು ನಿಮಗೆ ಜಾಸ್ತಿಯಾದ ಸಂಬಳಕ್ಕಿಂತಲೂ ವೇಗವಾಗಿ ಏರಿದೆ. ಪೆಟ್ರೋಲ್ ದರ ಆಗ ಇದ್ದುದಕ್ಕೂ ಈಗ ಇರುವುದಕ್ಕೂ ಅಜಗಜಾಂತರ ಇದೆ. ಇನ್ನು ಮನೆ ಖರೀದಿ, ಮನೆ ಬಾಡಿಗೆ ಮಾತು ಬೇಡ ಬಿಡಿ. ಇದನ್ನು ಎಷ್ಟುದ್ದ ಹೇಳಿದರೂ ಅದರ ಸಾರಾಂಶ ಇಷ್ಟೆ: ‘ಎಷ್ಟು ದುಡ್ಡಿದ್ರೂ ಸಾಕಾಗುತ್ತಿಲ್ಲ’.

ಆಗಾಗ ನಾನು ಮುಂಜಾನೆ ಎದ್ದು ಲಾಲ್ಬಾಗ್ ಕಡೆ ಹೋಗ್ತೀನಿ ವಾಕಿಂಗ್ಗೆ. ಅಲ್ಲಿನ ಪಶ್ಚಿಮ ದ್ವಾರದ ಬಳಿಯ ಹೋಟೆಲ್ನಲ್ಲಿ ಕಾಫಿ ಕುಡಿಯುವಾಗ ಅನೇಕ ಮಾತುಗಳು ಕಿವಿಮೇಲೆ ಬೀಳುತ್ತವೆ: ಒಬ್ಬರು ಹೇಳುತ್ತಿದ್ದುದು: ‘ಈಗ ಮಗು ನರ್ಸರಿಗೆ ಹೋಗುತ್ತಿದೆ. ಸ್ಕೂಲಿಗೆ ಒಳ್ಳೆ ಬ್ರ್ಯಾಂಡ್ ಇದೆ. ವರ್ಷಕ್ಕೆ ಫೀಸು ಒಂದೂವರೆ ಲಕ್ಷ ರೂಪಾಯಿ! ಬೆಳಗ್ಗೆ 9 ಗಂಟೆಗೆ ಹೋಗಿ 12 ಗಂಟೆಗೆ ಮಗು ಬಂದುಬಿಡುತ್ತೆ!!’. ನೋಡಿದ್ರಾ, ಮೂರು ಗಂಟೆಗೆ ಶಾಲೆಯಲ್ಲಿ ಕೂರಿಸಿಕೊಳ್ಳಲು ವರ್ಷಕ್ಕೆ ಒಂದೂವರೆ ಲಕ್ಷ ರೂ.! ಶಾಲೇಲಿ ಕೊಡೋ ಒಂದು ಫೈಲು, ಎರಡು ಹಾಳೆಗೆ ಪುಸ್ತಕಕ್ಕೆ ಅಂತ 1,200 ರೂ. ವಸೂಲಿ! ದುಡ್ಡು ಲೆಕ್ಕಕ್ಕಿಲ್ಲದಷ್ಟು ಓಡಾಡುತ್ತಿದ್ದರೆ ಇಂಥದ್ದೆಲ್ಲಾ ಇದ್ದದ್ದೇ. ಎಂಬಿಬಿಎಸ್ ಅಲ್ಲ, ನರ್ಸರಿಗೆ ಮಗು ಸೇರಿಸಿದ್ರೂ ದುಡ್ಡಿನ ಮೂಟೆ ಬೇಕು!

ಹೀಗೇಕೆ?: ಎಲ್ಲಾ ದುಡ್ಡಿನ ಮಹಿಮೆ. ಮೂರುಕಾಸು ಕೆಲಸಕ್ಕೆ ಮೂಟೆ ದುಡ್ಡು ಬೇಕು! ಇದು ಹೇಗಾಯಿತು, ನೀವೇ ನೋಡಿ: 2000-01ರಲ್ಲಿ ಚಲಾವಣೆಯಲ್ಲಿದ್ದ 500 ರೂ. ನೋಟುಗಳಲ್ಲಿ 50,000 ಕೋಟಿ ರೂಪಾಯಿ ಹಣ ಇತ್ತು. ಅದು 2014-15ಕ್ಕೆ 6,56,300 ಕೋಟಿ ರೂ.ಗೆ ಏರಿದೆ! ಇದೇ ರೀತಿ ಸಾವಿರ ರೂ. ನೋಟುಗಳಲ್ಲಿ ಆಗ 3,700 ಕೋಟಿ ರೂ. ಮೊತ್ತ ಇತ್ತು. ಈಗ ಅದು 5,61,200 ಕೋಟಿ ರೂಪಾಯಿಗೆ ಏರಿದೆ!! ಇದಕ್ಕೇ ನಾವು ನೀವು ಈಗ ದುಡ್ಡಿನ ಮೂಟೆ ಹೊರಬೇಕಾದ ಸ್ಥಿತಿ ಬಂದಿರುವುದು. ಇದು ಒಳ್ಳೆಯ ಲಕ್ಷಣ ಅಲ್ಲ. ಈಗಿನ ಮೋದಿ ರಾಮಬಾಣ ಇಲ್ಲದಿದ್ದರೆ ಏನಾಗುತ್ತಿತ್ತು ಗೊತ್ತೆ? ಕೇಳಿದರೆ ಬೆಚ್ಚಿಬೀಳುತ್ತೀರಿ. ಕೇಳಿ ನಾನೀಗ ನೂರು ವರ್ಷದ ಹಿಂದಿನ ಈ ಕಥೆ ಹೇಳುತ್ತೇನೆ; ಇದನ್ನು ಕೇಳಿದ ಮೇಲೆ ನಿಮಗೆ ಪ್ರಧಾನಿ ಬಗೆಗಿನ ಮೆಚ್ಚುಗೆ ಇನ್ನೂ ಹೆಚ್ಚುತ್ತದೆ. ಭಾರತ ಬಚಾವ್ ಆಯಿತು ಅನಿಸುತ್ತೆ!

ಬಂಡಿ ತುಂಬಾ ಹಣ- ಕೈತುತ್ತು ಅನ್ನ: ಇಪ್ಪತ್ತನೇ ಶತಮಾನದ ಆರಂಭ ಅದು. 19ನೇ ಶತಮಾನದಲ್ಲಿ ಬ್ರಿಟನ್-ಫ್ರಾನ್ಸ್ಗಳು ವಿಶ್ವದ ಮಹಾನ್ ಶಕ್ತಿಗಳಾಗಿ ದರ್ಬಾರ್ ನಡೆಸುತ್ತಿದ್ದವು. ಇದಾದ ಮೇಲೆ ಅರಳಿತು ಜರ್ಮನಿಯ ಆರ್ಥಿಕಶಕ್ತಿ. 1908ರಲ್ಲಿ ಜರ್ಮನಿಯ ಕೇಂದ್ರ ಬ್ಯಾಂಕ್- ರೇಕ್ಸ್ ಬ್ಯಾಂಕಿಗೆ ಅಧ್ಯಕ್ಷ ಆಗಿ ಬಂದವನು ಹೆವನ್ಸ್ಟೀನ್. ಇವನು ಜರ್ಮನಿಯ ಆರ್ಥಿಕ ವಿಕಾಸದ ಸಾಧನವಾಗಿ ಜರ್ಮನಿ ಕೇಂದ್ರ ಬ್ಯಾಂಕನ್ನು ಬೆಳೆಸಿದ. ಅದೇ ಕಾಲದಲ್ಲಿ ಜರ್ಮನಿಯು ಫ್ರಾನ್ಸ್-ಬ್ರಿಟನ್ಗಳನ್ನೂ ಹಿಂದೆಹಾಕಿ, ಕಬ್ಬಿಣ, ಉಕ್ಕು, ರಾಸಾಯನಿಕಗಳ ರಫ್ತಿನಲ್ಲಿ ನಂ.1 ಪಟ್ಟ ಪಡೆದುಕೊಂಡಿತ್ತು. ಈ ಬಗ್ಗೆ ಬ್ರಿಟನ್-ಫ್ರಾನ್ಸಿಗೆ ಸೈರಣೆ ಇರಲಿಲ್ಲ. ಕೊನೆಗೆ ಇದೇ ಮೊದಲ ಮಹಾಯುದ್ಧಕ್ಕೆ ಬೀಜಪ್ರಾಯದ ಕಾರಣವಾಗಿತ್ತು.

ಯುದ್ಧ ಎಂದರೆ ದುಡ್ಡಿನ ಪ್ರವಾಹವೇ ಬರಬೇಕು. ಹೆವನ್ಸ್ಟೀನ್ ಈ ಪ್ರವಾಹವನ್ನೇ ಸೃಷ್ಟಿಸಿದ್ದ. ಯುದ್ಧ ಬಂದಿದೆ; ಪಿತೃಭೂಮಿ (ಜರ್ಮನಿಯವರಿಗೆ ಮಾತೃಭೂಮಿ ಅಲ್ಲ) ರಕ್ಷಣೆಗೆ ಬನ್ನಿ. ‘ಚಿನ್ನ ಬಿಡಿ, ನೋಟು ಹಿಡಿ’ ಎಂಬ ಕಾಗದದ ನೋಟಿನ ಹುಚ್ಚನ್ನೇ ಹೆವನ್ಸ್ಟೀನ್ ಸೃಷ್ಟಿಸಿದ! ಹಗಲೂ-ರಾತ್ರಿ ನೋಟು ಪ್ರಿಂಟ್ ಮಾಡಿಸಿದ. ದುಡ್ಡಿನ ಹುಚ್ಚುಹೊಳೆಯಲ್ಲಿ ಜರ್ಮನ್ ಕರೆನ್ಸಿ ಮಾರ್ಕ್ನ ಕೊಳ್ಳುವ ಶಕ್ತಿ ಕುಸಿದಿತ್ತು! ಯುದ್ಧ ಮುಗಿಯುವ ವೇಳೆಗೆ ಒಂದು ಡಾಲರ್ಗೆ 4.2 ಮಾರ್ಕ್ ಕೊಡುವ ಬದಲು 7.4 ಮಾರ್ಕ್ ಕೊಡಬೇಕಾಗಿತ್ತು.

ಮೊದಲ ವಿಶ್ವ ಮಹಾಯುದ್ಧ ಮುಗಿದಾಗ ಇಂಗ್ಲೆಂಡ್-ಫ್ರಾನ್ಸ್ಗಳು ಜರ್ಮನಿಯ ರಕ್ತಹೀರಿದವು. ಯುದ್ಧಕ್ಕೆ ಶಿಕ್ಷೆಯಾಗಿ ಜರ್ಮನಿಯ ಆಫ್ರಿಕಾ ವಸಾಹತುಗಳು ಪರರ ಪಾಲಾದವು. ದಂಡವಾಗಿ ಜರ್ಮನಿಯು 132 ಶತಕೋಟಿ ಮಾರ್ಕ್ ಅನ್ನು ಚಿನ್ನದ ರೂಪದಲ್ಲಿ ನೀಡಬೇಕು ಎಂಬ ಆಜ್ಞೆ ಬಂತು. ಇದು ಜರ್ಮನಿಯ ಮೂರು ವರ್ಷಗಳ ರಾಷ್ಟ್ರೀಯ ಆದಾಯ! (ಇದನ್ನು ತೀರಿಸಿ ಋಣಮುಕ್ತ ಜರ್ಮನಿ ಆಗಿದ್ದು 2010ರಲ್ಲಿ!).

ಮೊದಲೇ ಯುದ್ಧದಿಂದ ನಿತ್ರಾಣವಾಗಿದ್ದ ಜರ್ಮನಿಗೆ ಇಂಥ ಹೊರೆಯು ಘೊರಸ್ಥಿತಿ ಮೂಡಿಸಿತ್ತು. ದುಡ್ಡಿಗೆ ಬೆಲೆ ಇಲ್ಲವಾಯ್ತು. 1920ರಲ್ಲಿ ಜರ್ಮನ್ ಕರೆನ್ಸಿ 73 ಮಾರ್ಕ್ ಒಂದು ಡಾಲರ್ಗೆ ಸಮ ಎನಿಸಿತ್ತು. 1923ರ ವೇಳೆಗೆ ಒಂದು ಡಾಲರ್ಗೆ 4.2 ಟ್ರಿಲಿಯನ್ (ಸಾವಿರ ಶತಕೋಟಿ) ಮಾರ್ಕ್ ನೀಡಬೇಕಿತ್ತು! ಬ್ಯಾಂಕ್ ಗುಮಾಸ್ತನಿಗೆ ಅಂಕಿಗಳು, ಸೊನ್ನೆಗಳ ಲೆಕ್ಕವೇ ತಪ್ಪಿಹೋಗುತ್ತಿತ್ತು!

ಇದರ ಪರಿಣಾಮವಾಗಿ ಜನ ‘ದುಡ್ಡಿಗೆ ಬೆಲೆ ಇಲ್ಲ; ವಸ್ತುವಿಗೇ ಬೆಲೆ’ ಎನ್ನುವ ವಾಸ್ತವಸ್ಥಿತಿ ಕಂಡು ದಿಗಿಲುಬಿದ್ದರು. ಊಟ ಆರ್ಡರ್ ಮಾಡುವಾಗ ಇದ್ದ ಬೆಲೆ ಬಿಲ್ ಕೊಡುವಾಗ ಇನ್ನೂ ದುಬಾರಿಯಾಗುತ್ತಿತ್ತು! ಕಳ್ಳರು ಗಾಡಿಗಳಲ್ಲಿ ದುಡ್ಡು ತೆಗೆದುಕೊಂಡು ಹೋಗುತ್ತಿದ್ದವರ ಮೇಲೆ ಎರಗಿ ಗಾಡಿಗಳಲ್ಲಿದ್ದ ದುಡ್ಡನ್ನು ಬೀದಿಗೆ ಎಸೆದು ಬರಿ ಗಾಡಿಯನ್ನೇ ತೆಗೆದುಕೊಂಡು ಹೋಗುತ್ತಿದ್ದರು!! ಷೂ ಕಾರ್ಖಾನೆಯ ಕೆಲಸಗಾರರು ಸಂಬಳವಾಗಿ ಷೂ ಕೇಳಿ ಪಡೆಯುತ್ತಿದ್ದರು!! ಅಂಗಳದಲ್ಲಿ ಉಳಿತಾಯ ರೂಪದಲ್ಲಿ ಇರುತ್ತಿತ್ತು- ಐದಾರು ಸೈಕಲ್, ಏಳೆಂಟು ಹೊಲಿಗೆ ಯಂತ್ರ, ಒಂದೆರಡು ಮೋಟಾರ್ಬೈಕ್!! ಜನರು ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹೊದಿಸಿದ ಚರ್ಮವನ್ನು ಸುಲಿದು ಮಕ್ಕಳಿಗೆ ಷೂ ಹೊಲಿಸಿದ್ದರು; ಕರ್ಟನ್ ಕತ್ತರಿಸಿ ಶಾಲೆ ಮಕ್ಕಳಿಗೆ ಯೂನಿಫಾಮ್ರ್ ಹೊಲಿಸಿದ್ದರು!!

ನಮ್ಮ ಸ್ವರ್ಗಸಮಾನ ಹೆವನ್ಸ್ಟೀನ್ ಮಾತ್ರ ತಲೆಕೆಡಿಸಿಕೊಳ್ಳದೆ ಚುರುಕಾಗಿದ್ದ. ಎಷ್ಟು ಬೇಕಾದರೂ ನೋಟು ಕಳಿಸುತ್ತೇವೆ ಹೆದರಬೇಡಿ ಎಂದು ವಚನ ನೀಡುತ್ತಿದ್ದ. ದಿನಕ್ಕೆ 20,000 ಬಿಲಿಯನ್ ಹೊಸನೋಟುಗಳು ಬಿಡುಗಡೆಯಾಗುತ್ತವೆ; ವಾರಕ್ಕೆ 46,000 ಬಿಲಿಯನ್ ಮಾರ್ಕ್ ಹೊಸ ನೋಟುಗಳು ಬರುತ್ತವೆ ಎನ್ನುತ್ತಿದ್ದ! ಹೀಗೆ ಸಾಗಿತ್ತು ಹೆವನ್ಸ್ಟೀನ್ ಪ್ರತಾಪ.

ಒಳ್ಳೆಯ ಕಾಲವಿರಲಿ, ಕೆಟ್ಟ ಕಾಲವಿರಲಿ ಅಂತ್ಯ ಇದ್ದೇ ಇರುತ್ತದೆ. 1923ರ ನವೆಂಬರ್ 20ರಂದು ಷಾಕ್ಟ್ ಎಂಬಾತ ಹೊಸ ಕರೆನ್ಸಿ ಕಮಿಷನರ್ ಆದ. ಇನ್ನೇನಿದ್ದರೂ ಹೊಸ ನೋಟು ಎಂದ ಅವ. ಒಂದು ಟ್ರಿಲಿಯನ್ ಮಾರ್ಕ್ ಹಳೆನೋಟು ಕೊಡಿ; ಒಂದು ಹೊಸ ಮಾರ್ಕ್ ನೋಟು ಪಡೆಯಿರಿ ಎಂಬ ಆಜ್ಞೆ ಅವನದಾಗಿತ್ತು. ಇನ್ನು ಒಂದು ಜರ್ಮನ್ ಮಾರ್ಕ್ಗೆ ಒಂದೇ ಡಾಲರ್, ಒಂದೇ ಪೌಂಡ್ ಎಂಬ ಕಟ್ಟಾಜ್ಞೆ ಬಂತು. ಅಲ್ಲಿಗೆ ನಿಂತಿತು ದುಡ್ಡಿನ ದೌರ್ಜನ್ಯ. ನಂತರದ ಹತ್ತು ವರ್ಷಗಳಲ್ಲಿ ಜರ್ಮನಿಯು ಮತ್ತೆ ಫ್ರಾನ್ಸ್-ಬ್ರಿಟನ್ನಿಗೆ ಸೆಡ್ಡುಹೊಡೆದು ಪವಾಡ ಸಾಧಿಸಿದ್ದು ಈಗ ಇತಿಹಾಸ.

ಅದೇ ನವೆಂಬರ್ 20ರಂದೇ ನೋಟಿನ ಪ್ರವಾಹದ ಪ್ರವರ್ತಕ ಹೆವನ್ಸ್ಟೀನ್ ಸ್ವರ್ಗಸ್ಥನಾದ. ‘ನಾಯಕ್ ನಹಿ, ನಾಲಾಯಕ್ ಹೈ’ ಎಂಬ ಖ್ಯಾತಿಗೆ ಭಾಜನನಾದ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *