More

  ಮುಸ್ಲಿಮರು ಶಿಕ್ಷಣ ಕ್ರಾಂತಿಗೆ ಮುಂದಾಗಲಿ

  ಮೂಡಲಗಿ: ಅರಬಾವಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಮುಸ್ಲಿಂ ಸಮುದಾಯದವರಿಗೆ ಇತರ ಸಮುದಾಯದಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದು, ಈ ಸಮುದಾಯ ಶಿಕ್ಷಣದಲ್ಲಿ ಕ್ರಾಂತಿ ಮಾಡಬೇಕಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

  ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಸೋಮವಾರ ಹಮ್ಮಿಕೊಂಡಿದ್ದ ಅರಬಾವಿ ಕ್ಷೇತ್ರದ ಮುಸ್ಲಿಂ ಸಮುದಾಯದ ಬಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

  ಮುಸ್ಲಿಂ ಸಮುದಾಯದ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಬಹುತೇಕ ಉದ್ಯೋಗಗಳಲ್ಲಿ ಗುರುತಿಸಿಕೊಂಡಿರುವ ಈ ಸಮುದಾಯದವರು ಶ್ರಮಜೀವಿಗಳು. ಯಾವುದೇ ಕೆಲಸವನ್ನೂ ಮಾಡಲು ಹಿಂಜರಿಯುವುದಿಲ್ಲ. ನನಗೆ ಕೇವಲ ಒಂದು ಸಮುದಾಯದ ಮತವನ್ನು ಪಡೆದು ಆಯ್ಕೆಯಾಗದೆ ಎಲ್ಲ ಸಮುದಾಯಗಳು ಬೆಂಬಲ ಕೊಟ್ಟು ಆಶೀರ್ವಾದ ಮಾಡಿದಾಗಲೇ ಖುಷಿಯಾಗುತ್ತದೆ. ಪ್ರತಿ ಸಮುದಾಯಗಳ ಅಭ್ಯುದಯಕ್ಕೆ ದುಡಿಯುತ್ತಿದ್ದೇನೆ. ಅದರಂತೆ ಎಲ್ಲ ಸಮುದಾಯಗಳು ನನ್ನ ಬೆನ್ನಿಗಿವೆ. ಕ್ಷೇತ್ರದ ಪ್ರತಿ ಮತದಾರನಿಗೂ ನಮನ ಸಲ್ಲಿಸುತ್ತೇನೆ ಎಂದರು.

  2014ರಲ್ಲಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ದೇಶದ ಚಿತ್ರಣವೇ ಬದಲಾಗಿದೆ. ಭಾರತವನ್ನು ಯಾರು ದ್ವೇಷಿಸುತ್ತಿದ್ದರೋ ಅವರೇ ಇಂದು ನಮ್ಮ ದೇಶಕ್ಕೆ ಗೌರವ ನೀಡುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಮೋದಿ ಬ್ರೇಕ್ ಹಾಕುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಸಂಘಟನೆಗಳನ್ನು ಹತ್ತಿಕ್ಕುವ ಕಾರ್ಯ ಮಾಡಿದ್ದಾರೆ. ಗಡಿಯಲ್ಲಿ ಯಾರೋ ಬಾಂಬ್ ಸಿಡಿಸಿದರೆ ನಮ್ಮಲ್ಲಿರುವ ಮುಸ್ಲಿಮರನ್ನು ಬೊಟ್ಟು ಮಾಡಿ ತೋರಿಸುತ್ತಿದ್ದೆವು. ಆದರೆ, ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ಮೇಲೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುತ್ತಿದ್ದ ವ್ಯಕ್ತಿಗಳಿಗೆ ಕಡಿವಾಣ ಹಾಕಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

  ಮುಸ್ಲಿಂ ಸಮುದಾಯದ ಮಕ್ಕಳು ಸುಶಿಕ್ಷಿತರಾಗಿ ಮುಂದೆ ಬರಬೇಕು. ಶಾಲೆಗೆ ಹೋಗುವ ಮಕ್ಕಳನ್ನು ಎಂದಿಗೂ ಬಿಡಿಸಬೇಡಿ. ಪ್ರತಿ ಮಕ್ಕಳು ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದಾರೆಂದರೆ ಅದಕ್ಕೆ ಶಿಕ್ಷಣದ ಬದಲಾವಣೆಯೇ ಕಾರಣ. ಸಮುದಾಯದಲ್ಲಿ ಶಿಕ್ಷಣದಿಂದ ಬದಲಾವಣೆ ತರಬೇಕಾಗಿದೆ ಎಂದರು.

  2 ತಿಂಗಳಿನಿಂದ ಅರಬಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿದ್ದೇವೆ. ಎಲ್ಲ ಸಮಾವೇಶಗಳು ಭರ್ಜರಿಯಾಗಿ ಯಶಸ್ವಿಯಾಗಿವೆ. ಇದರಿಂದ ವಿರೋಧಿಗಳಿಗೆ ನಡುಕ ಪ್ರಾರಂಭವಾಗಿದೆ. ಈಗ ಮುಸ್ಲಿಂ ಸಮುದಾಯ ಒಂದಾಗಿ ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಅವರ ಆಸೆಗೆ ತನ್ನೀರು ಎರಚಿದಂತಾಗಿದೆ ಎಂದು ಹೇಳಿದರು.
  ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಬರುವ ಚುನಾವಣೆಯಲ್ಲಿ ಎಲ್ಲರೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತೆ ಪ್ರಾರ್ಥನೆ ಮಾಡಿಕೊಳ್ಳಿ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

  ಮುಖಂಡ ಲಾಲಸಾಬ್ ಸಿದ್ದಾಪುರ ಮಾತನಾಡಿ, ಮುಸ್ಲಿಂ ಸಮುದಾಯ ಯಾವಾಗಲೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆನ್ನಿಗೆ ನಿಂತಿದೆ. ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಬಳಿ ಯಾರೇ ಸಮಸ್ಯೆ ಎಂದು ಹೋದರೆ ತಕ್ಷಣ ಪರಿಹಾರ ಸೂಚಿಸುತ್ತಾರೆ. ಶಾಸಕರ ಋಣ ತೀರಿಸಲು ಅವರಿಗೆ ನಮ್ಮ ಅಮೂಲ್ಯವಾದ ಮತ ನೀಡಿ ಆಯ್ಕೆ ಮಾಡೋಣ ಎಂದರು. ಹಿರಿಯ ಮುಖಂಡ ಜನಾಬ್ ಎಚ್.ಡಿ.ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಮುಸ್ಲಿಂ ಮುಖಂಡರಾದ ಅಜೀಜ್ ಡಾಂಗೆ, ಮಲ್ಲಿಕ್ ಹುಣಶ್ಯಾಳ, ಅನ್ವರ್ ನದಾಫ್, ಹುಸೇನಸಾಬ್ ಶೇಖ, ಅಬ್ದುಲ್‌ಗಾರ ಡಾಂಗೆ, ನನ್ನುಸಾಬ್ ಶೇಖ, ರಾಜೇಸಾಬ್ ಖೆಮಲಾಪುರ, ಅಮೀನಸಾಬ್ ಯಳ್ಳೂರ, ಹಾಸಿಂ ನಗಾರ್ಚಿ, ದಸ್ತಗೀರಸಾಬ್ ಶಿರಹಟ್ಟಿ, ನಿಜಾಮಸಾಬ್ ಜಮಾದಾರ, ರಿಯಾಜ್ ಯಾದವಾಡ, ಇಕ್ಬಾಲ್ ಸರ್ಕಾವಸ್, ರಸೂಲ್ ಮಿರ್ಜಾನಾಯಿಕ, ರಾಜು ಬಳಿಗಾರ, ಹಾಜೀಸಾಬ್ ನದಾಫ್, ಬಂದೇನವಾಜ ನದಾಫ್, ಶಾನೂರ ಮೊಘಲ, ಇಮಾಮ್ ಮೋಮಿನ, ಇಸ್ಮಾಯಿಲ್ ಲಾಡಖಾನ್, ಎಂ.ಎಸ್.ದಂತಾಳೆ, ಮಕ್ತುಮಸಾಬ್ ಖಾಜಿ ಇತರರು ಇದ್ದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಮುಸ್ಲಿಂ ಸಮುದಾಯದವರು ಸತ್ಕರಿಸಿದರು. ಜಾನಪದ ಗಾಯಕ ಶಬ್ಬೀರ್ ಡಾಂಗೆ ಅವರು ಶಾಸಕರ ಕುರಿತು ಹಾಡಿರುವ ಹಾಡಿಗೆ ಸಭಿಕರು ಕುಣಿದು ಕುಪ್ಪಳಿಸಿದರು. ಹಾಫೀಜ್‌ಉಮರ ಶೇಖ್ ಕುರಾನ ಬೋಧಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣದ ಬಸವೇಶ್ವರ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಮುಖ್ಯವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶರೀಫ್ ನದಾಫ್ ಸ್ವಾಗತಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts