ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸದಿದ್ದರೆ ಬಿಜೆಪಿಗೆ ಲಾಭ

ಹಾವೇರಿ: ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಬೇರೆ ಯಾರಿಗಾದರೂ ಮತ ಹಾಕಿದರೆ ಅದು ಪರೋಕ್ಷವಾಗಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹೇಳಿದರು.

ಸ್ಥಳೀಯ ಶಿವಬಸವ ನಗರದ ಗೌಸಿಯಾ ಸಭಾಭವನದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಇದು ದೇಶ ಉಳಿಸುವ ಚುನಾವಣೆ. ಕೋಮುವಾದಿ ಬಿಜೆಪಿಯನ್ನು ದೂರವಿಟ್ಟು ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷವನ್ನು ಸಮುದಾಯದವರು ಬೆಂಬಲಿಸಬೇಕು. ಮುಸ್ಲಿಮರಲ್ಲೂ ಮೀರ್ ಸಾದಿಕ್​ಗಳಿದ್ದಾರೆ. ನಮ್ಮಲ್ಲಿದ್ದುಕೊಂಡೇ ಬೇರೆಯವರನ್ನು ಬೆಂಬಲಿಸುತ್ತಾರೆ. ಅವರ ಬಗ್ಗೆ ಯೋಚಿಸಬೇಡಿ. ಅಕ್ಕಿಯಲ್ಲಿ ಬರುವ ಕಲ್ಲಿನಂತೆ ಅದನ್ನು ಎತ್ತಿ ಬಿಸಾಕಿ ಬಿರಿಯಾನಿ ಮಾಡಿ ತಿನ್ನಿ ಎಂದರು.

ಬುರ್ಖಾ ಕೊಡಿಸುತ್ತೇನೆ: ಬಿಜೆಪಿಯವರಿಗೆ ಜನರಿಗೆ ಮುಖ ತೋರಿಸಲು ಆಗದಿದ್ದರೆ ಬುರ್ಖಾ ಹಾಕಿಕೊಂಡು ಬರಲಿ. ಬೇಕಿದ್ದರೆ ನಾನೇ ತಂದುಕೊಡುತ್ತೇನೆ. ಪ್ರಧಾನಿ ಮೋದಿಯವರು ಬಾಯಿಬಿಟ್ಟರೆ ಅಚ್ಛೇ ದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಮನ್ ಕಿ ಬಾತ್ ಎನ್ನುತ್ತಾರೆ. ನಮಗೆ ಬೇಕಿರುವುದು ಕಾಮ್ ಕಿ ಬಾತ್. ಮಾಮೂಲಿ ಚಹಾ ಮಾರುತ್ತಿದ್ದ ವ್ಯಕ್ತಿ 10 ಲಕ್ಷ ರೂ. ಸೂಟು ಬೂಟು ಹಾಕುವಂತಾಗಿದ್ದೇ ಇವರ ಸಾಧನೆ ಎಂದರು.

ನಾನು ಹೇಳಿದರೆ ಇಶ್ಯೂ ಮಾಡ್ತಾರೆ: ಬಿಜೆಪಿ ಬೆಂಬಲಿಸುವ ಮುಸ್ಲಿಮರು ನಿಜವಾದ ಮುಸ್ಲಿಮರೇ ಅಲ್ಲ ಎಂದು ಹಿಂದೊಮ್ಮೆ ಹೇಳಿದ್ದೆ. ಆದರೆ, ಅದನ್ನು ಇಶ್ಯೂ ಮಾಡಲಾಯಿತು. ನಾನು ನನ್ನ ಅಭಿಪ್ರಾಯ ಹೇಳಿದ್ದು, ಅದಕ್ಕೆ ಈಗಲೂ ಬದ್ಧನಿದ್ದೇನೆ. ಬಿಜೆಪಿಯ ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ, ಅನಂತಕುಮಾರ ಹೆಗಡೆ ಇನ್ನೂ ಅನೇಕ ಬಿಜೆಪಿ ನಾಯಕರು ಮುಸ್ಲಿಮರ ಮತಗಳೇ ಬೇಡ ಎನ್ನುತ್ತಾರೆ. ದೇಶದಲ್ಲಿ ಎಲ್ಲರಿಗೂ ಸಮಾನತೆಯಿದೆ. ಬಿಜೆಪಿಯವರು ಜಾತಿ, ಧರ್ಮಗಳ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಾರೆ. ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸ ಗುಡಿಸಿದರೆ ಆಗ ಮುಸ್ಲಿಮರಿಗೆ ಟಿಕೆಟ್ ಕೊಡಬೇಕೋ ಬೇಡವೋ ಎಂಬುದನ್ನು ತೀರ್ವನಿಸುತ್ತೇವೆ ಎಂದು ಈಶ್ವರಪ್ಪ ಹೇಳುತ್ತಾರೆ. ಮುಸ್ಲಿಮರು ಸ್ವಾಭಿಮಾನಿಗಳಾಗಿದ್ದು, ಇಂತಹ 10 ಜನ ಈಶ್ವರಪ್ಪನವರನ್ನು ಸ್ವಾಭಿಮಾನಿ ಮುಸ್ಲಿಮರು ಕಸ ಗುಡಿಸಲು ಇಟ್ಟುಕೊಳ್ಳುತ್ತಾರೆ ಎನ್ನುವುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಮ್ಮೆ ಅವಕಾಶ ಕೊಡಿ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ಏಕೈಕ ಪಕ್ಷ ಕಾಂಗ್ರೆಸ್. ಬಿಜೆಪಿಯವರು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಿಜೆಪಿಯಿಂದ ಅಪಾಯವಿದ್ದು, ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಐ.ಯು. ಪಠಾಣ, ನಾಸೀರಖಾನ್ ಪಠಾಣ, ಇತರರಿದ್ದರು.

ಹಿಂದಿನ ಎರಡು ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋಲು ಅನುಭವಿಸಿದ್ದರು. ಹೀಗಾಗಿ ಅವರು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ.
| ಜಮೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ

Leave a Reply

Your email address will not be published. Required fields are marked *