ಚಿತ್ರದುರ್ಗ: ಮುಸ್ಲಿಂ ಸಮುದಾಯದವರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ನಿರ್ಧಾರ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಪ್ರಶಾಂತ್‌ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆದ ನಂತರ ಎಸ್ಸಿ-ಎಸ್ಟಿ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಹೀಗಿರುವಾಗ ತಮ್ಮ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಬಳಕೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಟೆಂಡರ್ ಎಲ್ಲ ಸಮುದಾಯದವರು ಪಡೆಯುತ್ತ ಬಂದಿದ್ದಾರೆ. ಆದರೆ, ಈ ವಿಚಾರದಲ್ಲೂ ಸಿಎಂ ಒಂದು ವರ್ಗದ ಓಲೈಕೆಗೆ ಮುಂದಾಗಿ ಮೀಸಲಾತಿ ನೀಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲು ಸಿದ್ಧ ಎಂದು ಎಚ್ಚರಿಸಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಿಂದು ವಿರೋಧಿ ಸರ್ಕಾರವಾಗಿದೆ. ಪದೇ ಪದೆ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತ ಬಂದಿದ್ದು, ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ಅನ್ಯ ಧರ್ಮೀಯರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರದ ನಿರ್ಧಾರದಿಂದ ಸಮಾಜದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಅಶಾಂತಿಗೂ ಕಾರಣ ಆಗಬಹುದು. ಆದ್ದರಿಂದ ಹಿಂಪಡೆಯಲು ಮುಂದಾಗಬೇಕು ಎಂದು ಕೋರಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಪದಾಧಿಕಾರಿಗಳಾದ ಮಾಧುರಿ ಗಿರೀಶ್, ಶ್ಯಾಮಲಾ ಶಿವಪ್ರಕಾಶ್, ಕುಮಾರಸ್ವಾಮಿ, ಸೌಭಾಗ್ಯಾ ಬಸವರಾಜನ್, ಬಾಳೆಕಾಯಿ ರಾಮದಾಸ್, ಶಿವಣ್ಣ, ತಿಪ್ಪೇಸ್ವಾಮಿ, ಶೈಲಜಾರೆಡ್ಡಿ, ಮಲ್ಲೇಶ್, ಶಿವಕುಮಾರ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶ್ರೀರಾಮರೆಡ್ಡಿ, ಶಾಂತಮ್ಮ, ಚಂದ್ರಿಕಾ ಲೋಕನಾಥ್, ಗಾಯತ್ರಿ ದೇವಿ, ವೀಣಾ ಇತರರಿದ್ದರು.