ಮುಳುಗಡೆಯಾಗಿದ್ದ ಬೋಟ್​ನಲ್ಲಿದ್ದವರು 37

ಕಾರವಾರ: ಕೂರ್ಮಗಡ ಜಾತ್ರೆಯಿಂದ ಮರಳುವಾಗ ಮುಳುಗಡೆಯಾದ ದೋಣಿಯಲ್ಲಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದೋಣಿಯಲ್ಲಿ 37ಕ್ಕೂ ಅಧಿಕ ಜನರಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.
ದೋಣಿಯಲ್ಲಿ 35 ಜನರಿದ್ದರು. ಅದರಲ್ಲಿ 19 ಜನರನ್ನು ರಕ್ಷಿಸಲಾಗಿದೆ 16 ಜನರು ನಾಪತ್ತೆಯಾಗಿದ್ದು, ಇದುವರೆಗೆ 14 ಜನರ ಶವ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಆದರೆ, ರಕ್ಷಣೆಗೊಳಗಾದವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ. ತಾವು ಹೇಗೋ ಬಚಾವಾಗಿ ಬಂದಿದ್ದೇವೆ ಎಂದು ಇನ್ನಿಬ್ಬರು ಹೇಳಿಕೊಂಡಿದ್ದಾರೆ.
ಇಲ್ಲಿನ ಸಾಗರ ಮತ್ಸ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಮಧ್ಯಪ್ರದೇಶ ಮೂಲದ ಚೇತನಕುಮಾರ್ ಹಾಗೂ ಮುಖೇಶಕುಮಾರ್ ಎಂಬ ಇಬ್ಬರು ಸಹೋದರರು ಕೂರ್ಮಗಡಕ್ಕೆ ತೆರಳಿ ದೇವಬಾಗ ಅಡ್ವೆಂಚರ್ ಬೋಟಿಂಗ್ ಸೆಂಟರ್​ನ ದೋಣಿಯಲ್ಲಿ ವಾಪಸಾಗುತ್ತಿದ್ದರು. ಅವಘಡ ಸಂಭವಿಸಿದಾಗ ಇಬ್ಬರೂ ಕೆಳಗೆ ಬಿದ್ದು, ಬೋಟ್​ನ ಮೇಲೆ ಹತ್ತಿಕೊಂಡಿದ್ದರು. ‘10 ನಿಮಿಷವಾದರೂ ಯಾರೂ ರಕ್ಷಣೆಗೆ ಬಾರದ್ದನ್ನು ಕಂಡು ಈಜಿಕೊಂಡು ದೂರ ಹೊರಟಿದ್ದೇವು. ಕೆಲ ಹೊತ್ತಿನ ಬಳಿಕ ಕರಾವಳಿ ಕಾವಲುಪಡೆಯ ಬೋಟ್​ನವರು ಬಂದು ನಮ್ಮನ್ನು ಎತ್ತಿಕೊಂಡು ಬೈತಖೋಲ್​ಗೆ ಬಿಟ್ಟರು. ನಾವು ಆರಾಮವಾಗಿದ್ದುದರಿಂದ ರಕ್ಷಣೆ ಮಾಡಿದವರ ಬಳಿ ಹೆಸರು ಹೇಳಿ ಬಂದಿದ್ದೇವೆ ಎಂದಿದ್ದಾರೆ.
ಇಬ್ಬರನ್ನು ರಕ್ಷಿಸಿದ್ದೇವೆ: ಕೂರ್ಮಗಡದಿಂದ ಕೋಡಿಬಾಗಕ್ಕೆ ಹೊರಟ ದೋಣಿಯಲ್ಲಿ 24 ಜನರು ಕೂಡ್ರುವಂತಿತ್ತು. ಆದರೆ, ಕುಳಿತವರ ಜೊತೆಗೆ ಹಿಂದೆ ಹಾಗೂ ಮುಂದೆ ಕೆಲವರು ನಿಂತಿದ್ದರು. ಇದ್ದಕ್ಕಿದ್ದಂತೆ ಬೋಟ್​ನ ಇಂಜಿನ್ ಬಂದ್ ಆಯಿತು. ಇನ್ನೊಮ್ಮೆ ಚಾಲು ಮಾಡುವ ಹೊತ್ತಿಗೆ ದೊಡ್ಡ ಅಲೆ ಬಂದು ಹೊಡೆಯಿತು. ಅಲೆಯನ್ನು ಜಾಗೃತವಾಗಿ ನಿಭಾಯಿಸಲು ಸಾಧ್ಯವಾಗದೇ ಬೋಟ್ ಪಲ್ಟಿಯಾಯಿತು. ಮೊದಲು ಬೋಟ್ ಪಲ್ಟಿಯಾದಾಗ ತಲೆಕೆಳಗಾಗಿದ್ದ ಬೋಟ್​ನ ಮೇಲೆ ಮಕ್ಕಳೂ ಸೇರಿ 20ಕ್ಕೂ ಹೆಚ್ಚು ಜನರಿದ್ದರು. ಆದರೆ, ಎರಡನೇ ಬಾರಿ ಮತ್ತೆ ಪಲ್ಟಿಯಾದಾಗ ಕೆಲವರು ಕೆಳ ಹೋದರು. ನಾನು ಒಬ್ಬ ಬಾಲಕ ಸೇರಿ ಇಬ್ಬರನ್ನು ರಕ್ಷಿಸಿ ಉಲ್ಟಾ ನಿಂತಿದ್ದ ಬೋಟ್ ಮೇಲೆ ಕೂಡ್ರಿಸಿದೆ. ಆದರೆ, ಆ ಬೋಟ್ ಕೂಡ ಮುಳುಗುವಂತೆ ಕಂಡಿದ್ದರಿಂದ ಅಲ್ಲಿಂದ ಈಜಲಾರಂಭಿಸಿದೆ’ ಎಂದು ಚೇತನಕುಮಾರ್ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
48 ಗಂಟೆಗಳ ನಂತರವೂ ಸಿಗದ ಇಬ್ಬರು ಮಕ್ಕಳು: ಸೋಮವಾರ ಮಧ್ಯಾಹ್ನ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಬೋಟ್​ನಿಂದ ನಾಪತ್ತೆಯಾದ ಇಬ್ಬರು ಮಕ್ಕಳು 48 ಗಂಟೆಗಳ ನಂತರವೂ ಸಿಕ್ಕಿಲ್ಲ. ಭಾರತೀಯ ನೌಕಾಪಡೆಯ ಚೇತಕ್ ಹೆಲಿಕ್ಯಾಪ್ಟರ್, ಕೋಸ್ಟ್​ಗಾರ್ಡ್​ನ ಎರಡು ಹಡಗುಗಳು, ಕರಾವಳಿ ಕಾವಲುಪಡೆಯ ಬೋಟ್​ಗಳು ಬುಧವಾರವೂ ಇಡೀ ದಿನ ನಿರಂತರ ಕಾರ್ಯಾಚರಣೆ ನಡೆಸಿವೆ. ಆದರೆ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊಸೂರಿನ ಪರಶುರಾಮ ಅವರ ಕುಟುಂಬದ ಮಕ್ಕಳಾದ ಕೀರ್ತಿ ಹಾಗೂ ಸಂದೀಪ ಅವರು ಇದುವರೆಗೂ ಪತ್ತೆಯಾಗಿಲ್ಲ.
ಶಾಸಕಿ ವಿರುದ್ಧ ಅಸಮಾಧಾನ: ಬೋಟ್ ದುರಂತದಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿದವರನ್ನು ಶಾಸಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಸರಿಯಲ್ಲ ಎಂದು ರಾಘು ನಾಯ್ಕ ಆಕ್ಷೇಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಕುಟುಂಬದವರ ಆಶಯದ ಮೇರೆಗೆ ನಾವು ಮಂಗಳವಾರ ಶವಾಗಾರದ ಎದುರು ಕುಳಿತು ಮೌನ ಪ್ರತಿಭಟನೆ ನಡೆಸಿದ್ದೆವು. ಮೃತ ಕುಟುಂಬಗಳಿಗೆ ತಲಾ 10 ಲಕ್ಷದಂತೆ ಅವರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಶಾಸಕಿ ರೂಪಾಲಿ ನಾಯ್ಕ ಬಂದು ನಮ್ಮನ್ನು ಅವಾಚ್ಯವಾಗಿ ನಿಂದಿಸಿದರು. ಈ ಹಿಂದೆ ಮಲ್ಲಾಪುರದಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲೂ ಶಾಸಕಿ ಇದೇ ರೀತಿ ವರ್ತಿಸಿದ್ದರು. ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದರು. ಜೆಡಿಎಸ್ ಮುಖಂಡ ಖಲಿಲುಲ್ಲಾ ಶೇಖ್, ಸಂದೀಪ ಭಂಡಾರಿ, ಚಂದ್ರಕಾಂತ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.  

Leave a Reply

Your email address will not be published. Required fields are marked *