ಮುಳಬಾಗಿಲಿಗೆ ಶೀಘ್ರ ಶಿಕ್ಷಕರ ಭವನ

ಮುಳಬಾಗಿಲು: ಮುಂದಿನ ನಾಲ್ಕು ವರ್ಷದೊಳಗೆ ಮುಳಬಾಗಿಲಿಗೆ ಸುಸಜ್ಜಿತ ಶಿಕ್ಷಕರ ಭವನ ಮಂಜೂರು ಮಾಡಿಸಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಭರವಸೆ ನೀಡಿದರು.

ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ತಾಲೂಕು ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕನ್ನಡ ಶಾಲೆಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. ಆದ್ದರಿಂದ ಶಿಕ್ಷಕರು ಪ್ರಸ್ತುತ ದಿನಮಾನಕ್ಕೆ ಹೊಂದಿಕೊಂಡು ಮಕ್ಕಳಿಗೆ ಬೋಧನೆ ಮಾಡಬೇಕು. ಜತೆಗೆ ಇಂಗ್ಲಿಷ್ ಜ್ಞಾನವನ್ನು ಪ್ರಾಥಮಿಕ ಹಂತದಿಂದಲೇ ನೀಡಬೇಕು ಎಂದರು.

ಡಾ.ಎಸ್.ರಾಧಾಕೃಷ್ಣನ್ ಆದರ್ಶ ಪ್ರತಿ ಶಿಕ್ಷಕರಲ್ಲಿ ಇದ್ದಿದ್ದರೆ ಭಾರತ ವಿಶ್ವದಲ್ಲೇ ಉತ್ತಮ ಸುಸಂಸ್ಕೃತ ರಾಷ್ಟ್ರವಾಗುತ್ತಿತ್ತು. ಉತ್ತಮ ಕೆಲಸ ಮಾಡಲು ಪಕ್ಷ, ಜಾತಿ, ಧರ್ಮ ಭೇದ ಇರಬಾರದು. ಶಿಕ್ಷಕರ ಸಂಘದ ಮುಖಂಡರು ಪ್ರತಿಷ್ಠೆಗೆ ನಾಲ್ಕೈದು ಸಂಘಟನೆ ಮಾಡಿಕೊಳ್ಳುವುದು ಸರಿಯಲ್ಲ. ಕೆಲವರಂತು ನಮ್ಮ ಸಂಘವೇ ಅಧಿಕೃತ ಎಂದು ಹೇಳಿಕೊಂಡು ಬರುತ್ತಾರೆ. ಶಿಕ್ಷಕರಾದವರೇ ಈ ರೀತಿಯಾದರೆ ಹೇಗೆ ಎಂದು ಪ್ರಶ್ನಿಸಿದರು.

ಜಿಪಂ ಅಧ್ಯಕ್ಷೆ ಗೀತಮ್ಮಆನಂದರೆಡ್ಡಿ, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್.ಪ್ರಕಾಶ ರಾಮಚಂದ್ರ, ಜಿಪಂ ಸದಸ್ಯ ವಿ.ಎಸ್.ಅರವಿಂದ್‌ಕುಮಾರ್, ತಾಪಂ ಸದಸ್ಯರಾದ ಸಿ.ವಿ.ಗೋಪಾಲ್, ಆವನಿ ರವಿಶಂಕರ್, ನಂಗಲಿ ಶ್ರೀನಾಥ್, ರೈತ ಮುಖಂಡ ಎಂ.ಗೋಪಾಲ್, ಬಿಇಒ ಪಿ.ಸೋಮೇಶ್, ತಾಪಂ ಇಒ ಎಸ್.ವೆಂಕಟಾಚಲಪತಿ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ ಇದ್ದರು.

ನನ್ನ ಸಮಯ ವ್ಯರ್ಥ ಮಾಡಬೇಡಿ: ಎಲ್ಲಿಗೆ ಬಂತು ಅಬಕಾರಿ ಇಲಾಖೆ ಯೋಜನೆ ಎಂಬ ಸುದ್ದಿಗಾರರ ಪ್ರಶ್ನೆಗೆ ಗರಂ ಆದ ನಾಗೇಶ್, ನಾನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಬಂದಿದ್ದೇನೆ. ಮಂತ್ರಿಮಂಡಲದಲ್ಲಿ ಚರ್ಚಿಸಿಯೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ತಾಲೂಕಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಪ್ರಶ್ನೆ ಇದ್ದರೆ ಕೇಳಿ. ಸುಮ್ಮನೆ ನನ್ನ ಸಮಯ ವ್ಯರ್ಥ ಮಾಡಬೇಡಿ ಎಂದು ಸಿಡಿಮಿಡಿಗೊಂಡರು. ಡಿಕೆಶಿ ಕುರಿತು ಮಾತನಾಡಲು ನಿರಾಕರಿಸಿದರು.

ವೈದ್ಯಕೀಯ ಸೇವೆ ಉತ್ತಮವಾಗಿರಲಿ: ತಾಪಂ ಸಭಾಂಗಣದಲ್ಲಿ ನಾಗೇಶ್ ತಾಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸರ್ಕಾರಿ ವೈದ್ಯಕೀಯ ಸೇವೆಯನ್ನು ಉತ್ತಮವಾಗಿ ನೀಡಬೇಕು. ದಿನದ 24 ಗಂಟೆ ಸೇವೆ ಸಲ್ಲಿಸುವ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಸಮಸ್ಯೆಗಳ ಬಗ್ಗೆ ಅರ್ಜಿ ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಇತ್ಯರ್ಥ ಪಡಿಸುವಂತೆ ಸೂಚಿಸಿದರು.