ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ರಾಜಾಂಗಣದಲ್ಲಿ ಭಾನುವಾರ ಮುರಿಗೆ ಶಾಂತವೀರ ಶ್ರೀಗಳ, ಅಲ್ಲಮಪ್ರಭು ದೇವರ ಭಾವಚಿತ್ರ, ಜಯದೇವ ಶ್ರೀಗಳ ಬೆಳ್ಳಿ ಪುತ್ಥಳಿ ಇಡುವ ಮೂಲಕ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.
ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಶ್ರೀಮಠದ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಎಂದಿನ ಗುರು ಪರಂಪರೆಯಂತೆ ನಡೆಯಿತು.
ಶಾಂತವೀರ ಶ್ರೀಗಳ ಗದ್ದಿಗೆ, ರಾಜಾಂಗಣವನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇದೇ ವೇಳೆ ಭಕ್ತರು ಭಕ್ತಿ ಸಮರ್ಪಿಸಿದರು. ಶ್ರೀಮಠದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು.
ಇದಾದ ನಂತರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಧರ್ಮಗುರು ಬಸವಣ್ಣ, ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತ ಪ್ರತಿಗಳನ್ನು ಇಟ್ಟು ಪೂಜಿಸಲಾಯಿತು. ನಂತರ ಮೆರವಣಿಗೆಗೆ ಶ್ರೀಮಠ, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಸದಸ್ಯ ಡಾ.ಬಸವಕುಮಾರ ಶ್ರೀ ಚಾಲನೆ ನೀಡಿದರು.
ಕಹಳೆ, ಉರುಮೆ, ತಮಟೆ ಸೇರಿ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಶ್ರೀಮಠದ ಆವರಣದಲ್ಲಿ ನಡೆದ ಮೆರವಣಿಗೆಯೂ ಅದ್ದೂರಿಯಾಗಿ ಜರುಗಿತು. ನೆರೆದಿದ್ದ ಸಾವಿರಾರು ಭಕ್ತರು ಮುರುಘಾ ಪರಂಪರೆಗೆ ಜಯಘೋಷ ಮೊಳಗಿಸಿದರು.
ಮಹಾಂತ ರುದ್ರೇಶ್ವರ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ವಚನಾನಂದ ಶ್ರೀ, ಬಸವನಾಗಿದೇವ ಶ್ರೀ, ಶಿವಾನಂದ ಶ್ರೀ, ಶಾಂತವೀರ ಶ್ರೀ, ಬಸವ ಶಾಂತಲಿಂಗ ಶ್ರೀ, ಹರಗುರು ಚರಮೂರ್ತಿಗಳು, ಮುಖಂಡರಾದ ಕೆ.ಸಿ.ನಾಗರಾಜ್, ಮಲ್ಲಿಕಾರ್ಜುನ್, ನಾಗರಾಜ್ ಸಂಗಂ ಇತರರಿದ್ದರು.