ಚಿತ್ರದುರ್ಗ: ಮುರುಘಾಮಠಕ್ಕೆ ನಟ ಧೃವ ಸರ್ಜಾ ಶುಕ್ರವಾರ ಭೇಟಿ ನೀಡಿ ಹಿರಿಯ ಗುರುಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ದರ್ಶನ ಪಡೆದರು. ಶ್ರೀಮಠದ ಬಳಿ ಜಮಾಯಿಸಿದ್ದ ಅಭಿಮಾನಿಗಳು ಧೃವ ಪರ ಘೋಷಣೆ ಕೂಗಿದರು.
ಧೃವ ಸರ್ಜಾ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬೈನಲ್ಲಿ ಅಂತಾರಾಷ್ಟ್ರೀಯ ಸುದ್ದಿಗೋಷ್ಠಿಗೆ ಹೊರಟಿದ್ದೇನೆ. ಮಾರ್ಗ ಮಧ್ಯೆ ಸಿದ್ಧಗಂಗಾ ಮಠ, ಮುರುಘಾಮಠದ ಹಿರಿಯ ಗುರುಗಳ ಕರ್ತೃ ಗದ್ದಿಗೆಯ ದರ್ಶನ ಪಡೆದಿದ್ದೇನೆ. ಮಾರ್ಟಿನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಯಶಸ್ವಿಯಾಗುವ ವಿಶ್ವಾಸವಿದೆ. ದಯವಿಟ್ಟು ಎಲ್ಲರೂ ಕನ್ನಡ ಸಿನಿಮಾ ನೋಡಿ ಆಶೀರ್ವದಿಸಿ. ಜೈ ಆಂಜನೇಯ ಎಂದು ಹೇಳಿದರು.
ಬಿಕಾಂ ಪದವಿ ವಿದ್ಯಾರ್ಥಿನಿಯಾದ ವಿದ್ಯಾ ಪರೀಕ್ಷೆ ಬರೆಯುವುದನ್ನೇ ಬಿಟ್ಟು ಬೆಳಗ್ಗೆಯೇ ಮುರುಘಾಮಠಕ್ಕೆ ಧೃವ ಬರುವ ಮಾಹಿತಿ ಹಿನ್ನಲೆಯಲ್ಲಿ ಬಂದಿದ್ದು, ಶ್ರೀ ಬಸವಪ್ರಭು ಸ್ವಾಮೀಜಿ ಪರೀಕ್ಷೆ ಬರೆದು ಬರುವಂತೆ ಹೇಳಿ ಕಳುಹಿಸಿದ್ದರು.
ನಂತರ ಮತ್ತೊಮ್ಮೆ ಮಠಕ್ಕೆ ಬಂದು ಗಂಟೆಗಟ್ಟಲೇ ಕಾದಿದ್ದ ಯುವತಿ ಸರ್ಜಾ ನೋಡಿದ ಕೂಡಲೇ ಭಾವುಕಳಾದಳು. ತನ್ನ ತಾಯಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟಳು. ನಂತರ ಧೃವರಿಂದ ಆಶೀರ್ವಾದ ಪಡೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಳು.
ವಿದ್ಯಾ ಬಾಲ್ಯದಿಂದಲೂ ಧೃವ ಅಭಿಮಾನಿ. ಆಕೆಯ ತಾಯಿ ಧೃವ ನನ್ನ ತಮ್ಮ ಎಂದು ಹೇಳಿದ್ದರಂತೆ. ಹೀಗಾಗಿ ಮಾವ ಎಂದೇ ಭಾವಿಸಿದ್ದಳು. ಕೊನೆಗೆ ಮಾವ ಎಂದು ಕರೆದು ಖುಷಿಪಟ್ಟಳು.