ಮುರುಗಲಿಗೆ ಇದೆ ಅಂತಾರಾಷ್ಟ್ರೀಯ ಬೇಡಿಕೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಮುರುಗಲು ಬೆಳೆಯನ್ನು ಬೆಳೆದು ಗುಣಮಟ್ಟದ ಉತ್ಪಾದನೆಯನ್ನು ಮಾರುಕಟ್ಟೆಗೆ ಒದಗಿಸಲು ಸಾಧ್ಯವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುರುಗಲಿಗೆ ಬೇಡಿಕೆ ಇದ್ದು, ಈ ಅವಕಾಶವನ್ನು ಇಲ್ಲಿಯ ಬೆಳೆಗಾರರು ಪಡೆದುಕೊಳ್ಳಬಹುದಾಗಿದೆ ಎಂದು ಗೋವಾದ ಕೋಕಂ ಫೌಂಡೇಷನ್ ಅಧ್ಯಕ್ಷ ಅಜಿತ ಶಿರೋಳಕರ್ ಹೇಳಿದರು.

ನಗರದ ಕದಂಬ ಮಾರ್ಕೆಟಿಂಗ್​ನಲ್ಲಿ ಶನಿವಾರ ಆಯೋಜಿಸಲಾದ ಕೋಕಂ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಸೊಪ್ಪಿನ ಬೆಟ್ಟಗಳಲ್ಲಿ ಮುರುಗಲು ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಜಿಲ್ಲೆಯಲ್ಲಿ ಶೇ.70ರಷ್ಟು ಜನ ಕೃಷಿಯನ್ನು ಜೀವನ ನಿರ್ವಹಣೆಗೆ ಅವಲಂಬಿಸಿದ್ದಾರೆ. ಹೊರ ಜಗತ್ತಿನಲ್ಲಿ ಯಾವ ಬೆಳೆಗೆ ಬೇಡಿಕೆ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಸಾಂಪ್ರದಾಯಿಕ ಕೃಷಿಯನ್ನು ಉಳಿಸಿಕೊಂಡು ಹೊಸ ಬೆಳೆಯನ್ನೂ ಅಳವಡಿಸಿಕೊಳ್ಳಬೇಕು. ಇಸ್ರೇಲ್ ಮಾದರಿಯ ಕೃಷಿಯನ್ನು ಅಳವಡಿಸಿಕೊಂಡಲ್ಲಿ ಮುರುಗಲನ್ನು ಉದ್ಯಮ ರೀತಿಯಲ್ಲಿ ಬೆಳೆಯಬಹುದಾಗಿದೆ. ಮುರುಗಲಿನಿಂದ ತಯಾರಿಸಲ್ಪಡುವ ಮೌಲ್ಯ ವರ್ಧಿತ ಉತ್ಪನ್ನಗಳನ್ನು ಆಯುರ್ವೆದ ವೈದ್ಯರ ಸಲಹೆಯಿಂದ ತಯಾರಿಸುವುದು ಉತ್ತಮ. ಮುರುಗಲು ಹಣ್ಣು ಕ್ಯಾನ್ಸರ್ ರೋಗ ನಿಯಂತ್ರಕ ಅಂಶಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಈ ಬೆಳೆ ಹೆಚ್ಚಿದರೆ ಕೋಕಂ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ರೈತರ ಮನೆ ಬಾಗಿಲಿಗೆ ಬರುತ್ತವೆ. ಮಾರುಕಟ್ಟೆ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ‘ಕೇರಳದಿಂದ ಮಹಾರಾಷ್ಟ್ರದ ತನಕ ಮುರುಗಲು ಬೆಳೆ ನೈಸರ್ಗಿಕವಾಗಿ ಈಗಾಗಲೇ ಬೆಳೆಯುತ್ತಿದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಉದ್ಯಮದ ರೀತಿಯಲ್ಲಿ ಕೋಕಂ ಬೆಳೆಯಲಾಗುತ್ತಿದೆ. ತೋಟಗಾರಿಕೆ ಇಲಾಖೆ ಕೋಕಂ ಗಿಡಗಳನ್ನು ಬೆಳೆಸಿ ರೈತರಿಗೆ ನೀಡುತ್ತಿದೆ. ಇದರಿಂದಾಗಿ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ 4 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಮುರುಗಲು ಈಗ 41.45ಹೆಕ್ಟೇರ್​ಗೆ ಹೆಚ್ಚಿದೆ’ ಎಂದರು.

ಕದಂಬ ಮಾರ್ಕೆಟಿಂಗ್ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ನಬಾರ್ಡ್ ಡಿಡಿ ಎಂ. ಯೋಗೇಶ, ಕೃಷಿ ವಿಜ್ಞಾನ ಕೇಂದ್ರದ ಡಾ. ರೂಪಾ ಪಾಟೀಲ, ಪಿ.ಆರ್. ಭಟ್ ಇತರರಿದ್ದರು. ಮುರುಗಲಿನಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರದರ್ಶನ ಮತ್ತು ಮಾರಾಟ: ಮುರುಗಲು ಬೆಳೆಯ ವಿವಿಧ ಉತ್ಪನ್ನಗಳು ಒಂದೇ ಸೂರಿನಲ್ಲಿ ಲಭ್ಯವಾದ ಕಾರಣ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ತಂಪು ಪಾನೀಯಕ್ಕೆ ಬಳಸಲಾಗುವ ಕೋಕಂ ಪುಡಿ, ಕೆಂಪು ಮುರುಗಲು, ಬಿಳಿ ಮುರುಗಲು, ಹುಣಸೆ ಮತ್ತು ಕೋಕಂ ಮಿಶ್ರಿತ ಚಾಕಲೇಟ್, ವಿವಿಧ ರೀತಿಯ ಕೋಕಂ ಪಾನೀಯಗಳನ್ನು ರಾಜ್ಯದ ವಿವಿಧೆಡೆಯಿಂದ ವ್ಯಾಪಾರಸ್ಥರು ಮಾರಾಟಕ್ಕೆ ತಂದಿದ್ದರು. ಇವುಗಳ ಖರೀದಿಯೂ ಜೋರಾಗಿ ನಡೆದಿದೆ.