ಮುನ್ನಡೆ ಕಂಡ ರಾಜ್ಯದ ಸುಹಾಸ್, ಅನನ್ಯ

ಹುಬ್ಬಳ್ಳಿ: ರಾಷ್ಟ್ರಮಟ್ಟದ ಹುಬ್ಬಳ್ಳಿ ಓಪನ್ ಶೂಟಿಂಗ್ ಚಾಂಪಿಯನ್​ಶಿಪ್​ನ ಏರ್ ರೈಫಲ್ ಸ್ಪರ್ಧೆಯ 12ನೇ ಸುತ್ತಿನ ಬಳಿಕ ಪುರುಷರ ವಿಭಾಗದಲ್ಲಿ ರಾಜ್ಯದ ಸುಹಾಸ್ ಕೆ.ಪಿ. (618.50 ಅಂಕ), ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಅನನ್ಯ ನಾಯ್ಕ (409.2) ಮುನ್ನಡೆ ಸಾಧಿಸಿದ್ದಾರೆ.

ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವದಲ್ಲಿ ಇಲ್ಲಿನ ಸಾಯಿನಗರದ ಕಾವೇರಿ ಕಾಲನಿಯಲ್ಲಿ ಆಯೋಜಿಸಲಾಗಿದೆ. ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರದ ಅನಿಲ್ ಪಾಂಡ್ಯ (618.40) ದ್ವಿತೀಯ, ರಾಜ್ಯದ ಸೂರ್ಯ ಆರ್.ಡಿ. (618 ಅಂಕ) ಮೂರನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ರಾಜ್ಯದ ಹರ್ಷಿತಾ ಎನ್. (405.7) ದ್ವಿತೀಯ, ಜೀವಿತಾ ಸಚ್ಚಿದಾನಂದ (405.0) ನಂತರದ ಸ್ಥಾನ ಪಡೆದಿದ್ದಾರೆ. ಶುಕ್ರವಾರ 7 ಸುತ್ತು ಮುಗಿದಿದ್ದು, ಜ. 27ರಂದು ಉಳಿದ ಮೂರು ಸುತ್ತುಗಳ ಸ್ಪರ್ಧೆ ನಡೆಯಲಿದೆ. ಅಂತಾರಾಷ್ಟ್ರೀಯ ಶೂಟರ್​ಗಳಾದ ತೇಜಸ್, ರಾಕೇಶ್ ಮನಪತ್, ಮೇಘನಾ ಸಜ್ಜನರ್, ಪಶ್ಚಿಮ ಬಂಗಾಳದ ಮೇಹುಲಿ ಘೊಶ್, ಪಂಜಾಬ್​ನ ಮನದೀಪ್ ಸಿಂಗ್ ಕಣಕ್ಕಿಳಿಯಲಿದ್ದಾರೆ.

ಬಹುಮಾನ ವಿತರಣೆ ಇಂದು

ಏರ್ ರೈಫಲ್ ಸ್ಪರ್ಧೆಯ ವಿಜೇತರಿಗೆ ಜ. 27ರಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಅರವಿಂದ ಬೆಲ್ಲದ, ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ನಾಗರಾಜ ಛಬ್ಬಿ, ಉದ್ಯಮಿ ಡಾ.ವಿ.ಎಸ್.ವಿ. ಪ್ರಸಾದ, ಹು-ಧಾ ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಪಿ.ಅಂಗಡಿ ಇತರರು ಪಾಲ್ಗೊಳ್ಳುವರು.

Leave a Reply

Your email address will not be published. Required fields are marked *