ಮುನಿಯಪ್ಪಗೆ ಪಕ್ಷದಿಂದಲೇ ವಿರೋಧ

ಕೆಜಿಎಫ್: ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಜನರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಸ್.ಮುನಿಸ್ವಾಮಿ ಗೆಲುವು ಖಚಿತ. ಈ ಚುನಾವಣೆ ಪೈಪೋಟಿ ಇರುವುದು ಚೌಕಿದಾರ್ ಮತ್ತು ಚೋರಿದಾರ್ ನಡುವೆ ಎಂದು ಬಿಜೆಪಿ ರಾಜ್ಯಾ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಗುರುವಾರ ಚಾಲನೆ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತಪ್ರಚಾರದಲ್ಲಿ ಮಾತನಾಡಿ, ಕಾಶ್ಮೀರ ಜೈಲಿನಲ್ಲಿರುವ ಪಾಕಿಸ್ತಾನ ಉಗ್ರರನ್ನು ಬಿಡುಗಡೆ ಮಾಡಿ 1 ಕೋಟಿ ರೂ. ಪರಿಹಾರ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಹುಲ್​ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಮುನಿಯಪ್ಪಗೆ ಪಕ್ಷದಿಂದಲೇ ವಿರೋಧವಿದೆ. ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಮುನಿಸ್ವಾಮಿ ಜತೆಗಿದ್ದು ಪರಿಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.

ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಕೃಷ್ಣಾರೆಡ್ಡಿ, ಹೊಸರಾಯಪ್ಪ, ಎಐಎಡಿಎಂಕೆ ಮುಖಂಡ ಅನ್ಬು, ಎಂಡಿಎಂಕೆ ಮುಖಂಡ ವೆಂಕಟೇಶ್, ಮಾಜಿ ಶಾಸಕ ವೈ.ಸಂಪಂಗಿ, ಜಿಪಂ ಸದಸ್ಯೆ ಅಶ್ವಿನಿ, ಪ್ರಕಾಶ್​ನಾಯ್ಡು, ನಗರಾಧ್ಯಕ್ಷ ರವಿಕುಮಾರ್, ಕಮಲ್​ನಾಥ್, ನಗರಸಭೆ ಮಾಜಿ ಸದಸ್ಯರಾದ ಉಮಾ, ಗಿರಿಜಾಗಾಂಧಿ, ರವಿಕುಮಾರ್, ಜಾಮ್ ಮೇಘನಾಥ್, ಪಾಂಡಿಯನ್ ಇತರರಿದ್ದರು. ನಗರ ಭಾಗದ ಹಿರಿಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಗೈರು ಎದ್ದುಕಾಣುತ್ತಿತ್ತು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ: ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ನಗರದ ಗೀತಾರಸ್ತೆ, ಸೂರಜ್​ವುುಲ್ ವೃತ್ತ, ಆಂಡ್ರಸನ್​ಪೇಟೆ, ಮಾರಿಕುಪ್ಪಂ, ಚಾಂಪಿಯನ್​ರೀಫ್, ಬೆಮೆಲ್ ನಗರ, ಉರಿಗಾಂಪೇಟೆ, ಮುಂತಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮತಯಾಚನೆ ನಡೆಸಲಾಯಿತು. ತಮಿಳುನಾಡಿನ ಎಐಎಡಿಎಂಕೆ ಮತ್ತು ಎಂಡಿಎಂಕೆ ಪಕ್ಷದ ಮುಖಂಡರು ಬೆಂಬಲ ಸೂಚಿಸಿದರು.