ಮುನಿದ ಮಳೆ, ಒಣಗಿದ ಇಳೆ

ಚಿಕ್ಕಬಳ್ಳಾಪುರ: ಬಿರುಸುಗೊಳ್ಳದ ಕೃಷಿ ಚಟುವಟಿಕೆ, ಕರ್ನಾಟಕ ಹಸಿರೀಕರಣಕ್ಕೆ ಹಿನ್ನಡೆ, ವಿದ್ಯಾರ್ಥಿಗಳಿಂದ ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಎಸೆಯುವಿಕೆಗೆ ಕೂಡಿ ಬಾರದ ಕಾಲ, ಬಹುತೇಕ ಕಡೆ ನೀಗದ ನೀರಿನ ಹಾಹಾಕಾರ.

ಇವು ಜಿಲ್ಲೆಯಲ್ಲಿ ಇನ್ನು ಮಳೆ ಕೃಪೆ ತೋರದ ಹಿನ್ನೆಲೆಯಲ್ಲಿ ಕಂಡು ಬಂದಿರುವ ಪ್ರಮುಖ ಸಮಸ್ಯೆಗಳು. ಉತ್ತಮ ಮುಂಗಾರು ಮಳೆ ನಿರೀಕ್ಷೆಯಲ್ಲಿ ವಿವಿಧ ಚಟುವಟಿಕೆಗೆ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇವುಗಳ ತ್ವರಿತ ಗುರಿ ಸಾಕಾರಕ್ಕೆ ಮಳೆ ಕೊರತೆ ಅಡ್ಡಿಯಾಗಿದೆ.

ಜಿಲ್ಲೆಯಲ್ಲಿ 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿದ್ದಾರೆ. ಮುಂಗಾರು ಪೂರ್ವ ಮಳೆಗೆ ಭೂಮಿ ಹದ ಮಾಡಿಕೊಂಡಿದ್ದಾರೆ. ಆದರೆ, 15 ದಿನಗಳಿಂದ ಪುನಃ ಮಳೆ ಬೀಳದಿರುವುದರಿಂದ ಮತ್ತೆ ಕೃಷಿ ಚಟುವಟಿಕೆ ಬಿರುಸಗೊಂಡಿಲ್ಲ. ಸತತ ಬರದಿಂದ ಕಂಗೆಟ್ಟಿರುವ ರೈತರಲ್ಲಿ ಈ ಬಾರಿಯೂ ಮಳೆ ಕೈ ಕೊಡುವ ಆತಂಕ ಮೂಡಿದೆ. ಇನ್ನು 1 ವಾರ ವಿಳಂಬವಾಗಿ ಮುಂಗಾರು ರಾಜ್ಯ ಪ್ರವೇಶಿಸಲಿದೆ ಎಂಬ ಹವಾಮಾನ ಇಲಾಖೆಯ ಮಾತಿನಿಂದ ಕಾದು ಕುಳಿತಿದ್ದಾರೆ.

ಜಿಲ್ಲಾಡಳಿತದ ಹಸಿರೀಕರಣ ಹಿನ್ನಡೆ: ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಕೋಟಿ ಸಸಿ ನೆಡುವ ಅಭಿಯಾನವನ್ನು ಜಿಲ್ಲಾಡಳಿತ ಮತ್ತು ಜಿಪಂ ಕೈಗೊಂಡಿದ್ದು ಇದಕ್ಕೆ ವಿಶ್ವ ಪರಿಸರ ದಿನಾಚರಣೆಯಲ್ಲಿ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಪ್ರಸ್ತುತ 50 ಲಕ್ಷ ಸಸಿಗಳನ್ನು ಗ್ರಾಪಂ ಮೂಲಕ ವಿತರಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೆರೆ-ಕುಂಟೆಗಳ ಖಾಲಿ, ಅಂತರ್ಜಲ ಮಟ್ಟ ಕುಸಿತ, ನೀರಿನ ಹಾಹಾಕಾರದಿಂದ ಅಭಿಯಾನ ಕುಂಟುತ್ತ ಸಾಗುವಂತಾಗಿದೆ. ಪ್ರಸ್ತುತ ನೀರು ಲಭ್ಯವಿರುವ ರೈತರ ಜಮೀನು, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳ ಬಳಿ ಹೆಚ್ಚಿಗೆ ಗಿಡ ನೆಡಲು ಆದ್ಯತೆ ನೀಡಲಾಗಿದೆ. ಉತ್ತಮ ಮಳೆಯಾಗುತ್ತಿದ್ದಂತೆ ಅಭಿಯಾನವನ್ನು ಮತ್ತಷ್ಟು ಬಿರುಸುಗೊಳಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಯುತ್ತಿರುವ ಶಾಲಾ ಮಕ್ಕಳು: ಅರಣ್ಯ ಪ್ರದೇಶ ಮತ್ತು ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಬೀಜದುಂಡೆ ಎಸೆಯಲು ಶಾಲಾ ಮಕ್ಕಳು ಸಜ್ಜಾಗಿದ್ದಾರೆ. ಆದರೆ, ಮುಖ್ಯವಾಗಿ ಮಳೆಯೇ ಇಲ್ಲ ಎಂಬ ಉದ್ಗಾರ ಕೇಳಿ ಬರುತ್ತಿದೆ. ಹಸಿರು ಸಂಪತ್ತು ವೃದ್ಧಿಗೆ ಪ್ರತಿ ವರ್ಷ ಶಾಲಾ ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ತಳಿಗಳ ಬೀಜದುಂಡೆಗಳನ್ನು ತಯಾರಿಸುವುದು ಮತ್ತು ಹಾಗೆಯೇ ಸಾಮೂಹಿಕವಾಗಿ ಒಂದು ದಿನ ಸಮೀಪದ ಅರಣ್ಯ, ಬೆಟ್ಟದ ತಪ್ಪಲಿಗೆ ಎಲ್ಲರೂ ತೆರಳಿ ಎಸೆಯುವುದು ವಾಡಿಕೆ. ಅದರಂತೆ ಈ ಬಾರಿಯೂ ಸರ್ಕಾರಿ ಮತ್ತು ಖಾಸಗೀ ಸೇರಿ ಬಹುತೇಕ ಶಾಲೆಗಳಲ್ಲಿ ತೇಗ, ಹುಣಸೆ, ತಪಸಿ, ಹೊಂಗೆ ಜತೆಗೆ ವಿವಿಧ ತಳಿಯ ಸಾವಿರಾರು ಬೀಜದುಂಡೆಗಳನ್ನು ತಯಾರಿಸಲಾಗಿದೆ. ಆದರೆ, ಸಮರ್ಪಕವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಎಸೆಯುವಿಕೆಯನ್ನು ಮುಂದೂಡಲಾಗಿದೆ. ಜಿಲ್ಲೆಯ ಆವಲಬೆಟ್ಟ, ಕಳವಾರ, ನಂದಿ, ವೀರದಿಮ್ಮಮ್ಮನ ಕಣಿವೆ, ಕೈವಾರ ಬೆಟ್ಟ ಸೇರಿ ವಿವಿಧೆಡೆ ಸೀಡಿಂಗ್ ನಡೆಯಲಿದೆ.

Leave a Reply

Your email address will not be published. Required fields are marked *