ಮುನಿದ ಕಾರ್ಯಕರ್ತರ ಮನವೊಲಿಕೆಗೆ ಕಸರತ್ತು

ಮುಳಬಾಗಿಲು: ಲೋಕಸಭಾ ಚುನಾವಣೆ ಕಾವು ಎಲ್ಲೆಡೆ ಜೋರಾಗಿದ್ದರೂ, ಕೋಲಾರ ಲೋಕಸಭಾ ಕ್ಷೇತ್ರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಏರಿಲ್ಲ.

ಬಿಜೆಪಿ ಕಾರ್ಯಕರ್ತರ, ಶಕ್ತಿ ಕೇಂದ್ರಗಳ ಮುಖಂಡರ ಸಭೆಗಳನ್ನು ನಡೆಸಿದೆ. ಆದರೆ ಭಿನ್ನಾಭಿಪ್ರಾಯದಿಂದ ತತ್ತರಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಇಲ್ಲಿ ತನಕ ಟಿಕೆಟ್​ಗಾಗಿ ಹೋರಾಡಿ, ನಾಮಪತ್ರ ಸಲ್ಲಿಸಿದ ನಂತರ ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ.

ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ನಿರ್ಧಾರಕ್ಕೆ ಬಹುತೇಕ ಕಾಂಗ್ರೆಸ್ ಮುಖಂಡರು ಕಾದು ಕುಳಿತಿರುವುದು ಕೆ.ಎಚ್. ಬಣ ಟೇಕ್​ಆಫ್ ಆಗಲು ತಿಣುಕಾಡುತ್ತಿದೆ. ಇದನ್ನು ಮನಗಂಡಿರುವ ಮುನಿಯಪ್ಪ ಡ್ಯಾಮೇಜ್ ಕಂಟ್ರೋಲ್​ಗೆ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎನ್.ಬಿಸ್ಸೇಗೌಡ, ಕಾಂಗ್ರೆಸ್ ಜಿಲ್ಲಾ ಖಜಾಂಚಿ ಕೆ.ವಿ.ರಾಮ್್ರಸಾದ್, ಆವನಿ ಬ್ಲಾಕ್ ಅಧ್ಯಕ್ಷ ಜಿ.ಆನಂದರೆಡ್ಡಿ, ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗಾರೆಡ್ಡಿಗೆ ಜವಾಬ್ದಾರಿ ವಹಿಸಿದ್ದಾರೆ. ಕೊತ್ತೂರು ಮಂಜುನಾಥ್ ಬೆಂಬಲ ಸಿಗದಿದ್ದರೂ ಚುನಾವಣೆ ಎದುರಿಸುವ ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಮುನಿಯಪ್ಪ ವಿರುದ್ಧ ಸೆಟೆದು ನಿಂತಿದ್ದ ಕೊತ್ತೂರು ಮಂಜುನಾಥ್ ಮತ್ತು ಬೆಂಬಲಿಗರು ಪ್ರತಿತಂತ್ರ ಹೆಣಿದು ಮುನಿಯಪ್ಪ ಮತಗಳಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಇದರ ನಡುವೆ ಕೆಎಚ್ ಬಣದೊಂದಿಗೆ ಗುರುತಿಸಿಕೊಳ್ಳುವ ಬೆಂಬಲಿಗರನ್ನು ಪಕ್ಕಕ್ಕಿಟ್ಟು ಬೂತ್​ವುಟ್ಟದಿಂದಲೇ ಪರ್ಯಾಯ ನಾಯಕತ್ವ ಬೆಳೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಜೆಡಿಎಸ್ ಪರಿಸ್ಥಿತಿ ಭಿನ್ನವಾಗಿದೆ. ಗಂಟಲಲ್ಲಿ ಸಿಕ್ಕಿಕೊಂಡಿರುವ ಬಿಸಿ ತುಪ್ಪ ಉಗುಳಲು ಆಗದೆ ನುಂಗಲೂ ಆಗದೆ ಮುನಿಯಪ್ಪರನ್ನು ಬೆಂಬಲಿಸಿ ಅಸ್ಥಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ವರಿಷ್ಠರ ಸೂಚನೆ ಪಾಲಿಸಿದರೆ ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿರುವ ಬೂತ್​ವುಟ್ಟದ ಕಾರ್ಯಕರ್ತರ ಸ್ಥಿತಿ ಏನು ಎಂಬ ಜಿಜ್ಞಾಸೆಯಲ್ಲಿ ತಾಲೂಕು ಮಟ್ಟದ ಮುಖಂಡರಿದ್ದಾರೆ.

ಕಾಂಗ್ರೆಸ್ ಭಿನ್ನಮತ ಉಪಶಮನಕ್ಕೆ ಮುಂದಾಗಿರುವ ಕೆಪಿಸಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರನ್ನು ಒಂದೆರಡು ದಿನಗಳಲ್ಲಿ ಮುಳಬಾಗಿಲಿಗೆ ಕಳುಹಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದೆ. ಇನ್ನು ಜೆಡಿಎಸ್​ನವರು ಮಾ.28ರಂದು ಕಾರ್ಯಕರ್ತರ ಸಭೆ ಕರೆದಿದ್ದು, ಕಾಂಗ್ರೆಸ್ ಅನ್ನು ಬೆಂಬಲಿಸುವ ಕುರಿತು ತೀರ್ವನಿಸಲಿದ್ದಾರೆ.

ಜೋರಾಗಿದೆ ಕೈ, ಕಮಲ ಅಲೆ: ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅಲೆ ಪ್ರಬಲವಾಗಿದ್ದು, ಅಷ್ಟೇ ಜೋರಾಗಿ ಕೆಎಚ್ ವಿರೋಧಿ ಅಲೆಯೂ ಎದ್ದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​ನ 2ನೇ ಹಂತದ ಬಹುತೇಕ ಮುಖಂಡರು ಈ ಬಾರಿ ಕೆಎಚ್ ಅವರನ್ನು ಶತಾಯಗತಾಯ ಸೋಲಿಸುವ ಮಾತುಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರು ಮುನಿದಿರುವ ಕಾರ್ಯಕರ್ತರನ್ನು ಯಾವರೀತಿ ಕೆ.ಎಚ್.ಮುನಿಯಪ್ಪ ಪರ ಬರುವಂತೆ ಮನವೊಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.