ಮುತ್ತುರಾಜ್, ರಾಜ್​ಕುಮಾರ್ ಆಗಿದ್ದೇ ರೋಚಕ!

‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ಡಾ. ರಾಜ್​ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಸಿನಿಮಾ ಅವಕಾಶ ಅವರಿಗೆ ಸಿಕ್ಕಿದ್ದು ಹೇಗೆ? ರಂಗಭೂಮಿ ಕಲಾವಿದ ಮುತ್ತುರಾಜ್, ರಾಜ್​ಕುಮಾರ್ ಆಗಿ ಬದಲಾಗಿದ್ದು ಹೇಗೆ? ಮೊದಲ ಚಿತ್ರದಲ್ಲಿ ರಾಜ್​ಕುಮಾರ್ ಅನುಭವಿಸಿದ ಕಷ್ಟ ಎಂಥದ್ದು? ಈ ಕುರಿತು ಹಿರಿಯ ನಟ, ಅಣ್ಣಾವ್ರ ಆಪ್ತ ಹೊನ್ನವಳ್ಳಿ ಕೃಷ್ಣ ವಿಜಯವಾಣಿಯೊಂದಿಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

| ಮಂಜು ಕೊಟಗುಣಸಿ, ಬೆಂಗಳೂರು

ನಾಟಕಗಳ ಜತೆಯಲ್ಲಿ ಸಿನಿಮಾಗಳ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಮುತ್ತುರಾಜ್, ಸಿನಿಮಾದಲ್ಲಿ ಮುಂದುವರಿಯಬೇಕೆಂಬ ಹಂಬಲ ಹೊತ್ತಿದ್ದರು. ಸಿನಿಮಾಗಳಲ್ಲಿ ಅವಕಾಶ ಸಿಗಲಾರದಕ್ಕೆ ಅವರು ಬೇಸರಿಸಿಕೊಂಡಿದ್ದೂ ಉಂಟು. ಆಗ ತಂದೆ ಪುಟ್ಟಸ್ವಾಮಯ್ಯ ಬಳಿ ಬಂದು ಪರಿಸ್ಥಿತಿಯನ್ನು ತೋಡಿಕೊಳ್ಳುತ್ತಿದ್ದರು. ತಾಳ್ಮೆ ಕಳೆದುಕೊಳ್ಳಬೇಡ ಎಂದು ಪುಟ್ಟಸ್ವಾಮಯ್ಯ ಮಗನಿಗೆ ಧೈರ್ಯ ತುಂಬುತ್ತಿದ್ದರು. ಅದಾದ ಕೆಲ ದಿನಗಳ ಬಳಿಕವೇ ಸಿನಿಮಾ ಅವಕಾಶವೊಂದು ಮುತ್ತುರಾಜ್​ಗೆ ಸಿಕ್ಕಿತು. ಅದೇ ‘ಬೇಡರ ಕಣ್ಣಪ್ಪ.

ಅದು 1953ನೇ ಇಸವಿ. ಎ.ವಿ. ಮೇಯಪ್ಪನ್ ಮತ್ತು ಗುಬ್ಬಿ ವೀರಣ್ಣ ಸೇರಿ ‘ಬೇಡರ ಕಣ್ಣಪ್ಪ’ ಸಿನಿಮಾ ನಿರ್ಮಾಣ ಮಾಡುವ ಯೋಜನೆ ಹಾಕಿದ್ದರು. ಆಗ ಆ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಎಚ್​ಎಲ್​ಎನ್ ಸಿಂಹ. ಕಟ್ಟುಮಸ್ತಾದ, ನೀಳ ಕಾಯದ ಯುವಕನಿಗಾಗಿ ಹುಡುಕಾಟ ನಡೆದಿತ್ತು. ಆಗ ಅವರ ಗಮನಕ್ಕೆ ಬಂದವರೇ ಗಾಜನೂರಿನ ಹುಡುಗ ಮುತ್ತುರಾಜ್. ಅವರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ, ಬೆಂಗಳೂರಿನ ಟೌನ್​ಹಾಲ್​ನಲ್ಲಿ ‘ಬೇಡರ ಕಣ್ಣಪ್ಪ’ ನಾಟಕ ಪ್ರದರ್ಶನವಿತ್ತು. ಕಣ್ಣಪ್ಪನಾಗಿ ಮುತ್ತುರಾಜ್ ಅಭಿನಯಿಸಿಲಿದ್ದಾರೆ ಎಂದಿದ್ದೇ ತಡ, ಎಚ್​ಎಲ್​ಎನ್ ಸಿಂಹ ತಡಬಡಾಯಿಸಿ ಹೆಜ್ಜೆಹಾಕಿದ್ದರು. ನಾಟಕ ನೋಡಿ ಕಣ್ತುಂಬಿಕೊಂಡು ಸಂತೃಪ್ತರಾದರು. ನೇರವಾಗಿ ನಿರ್ವಪಕರಾದ ವಿವಿಎಂ ಮತ್ತು ಗುಬ್ಬಿ ವೀರಣ್ಣನವರ ಬಳಿ ಬಂದು ‘ಬೇಡರ ಕಣ್ಣಪ್ಪ’ ಪಾತ್ರಕ್ಕೆ ಮುತ್ತುರಾಜ್ ಬಿಟ್ಟರೇ ಬೇರಾರು ಜೀವ ತುಂಬಲು ಸಾಧ್ಯವಿಲ್ಲ’ ಎಂದು ಅವರನ್ನೂ ಒಪ್ಪಿಸಿದರು. ಬಳಿಕ ನಡೆದಿದ್ದೆಲ್ಲ ಇತಿಹಾಸ! ಸ್ಕ್ರೀನ್ ಟೆಸ್ಟ್​ಗಾಗಿ ಮುತ್ತುರಾಜ್ ಜತೆಗೆ ಜಿವಿ. ಅಯ್ಯರ್, ನರಸಿಂಹರಾಜು ಮದ್ರಾಸ್​ಗೆ ಪ್ರಯಾಣ ಬೆಳೆಸಿದರು. ಎಲ್ಲವೂ ಓಕೆ ಆಗಿ ಚಿತ್ರೀಕರಣವೂ ಶುರುವಾಯಿತು. ಕೌತುಕದ ವಿಚಾರದ ಏನೆಂದರೆ ಅಲ್ಲಿಯೇ ಮುತ್ತುರಾಜ್, ರಾಜ್​ಕುಮಾರ್ ಆಗಿ ಬದಲಾದರು! ಆ ಪಟ್ಟ ಕೊಟ್ಟಿದ್ದು ಬೇರಾರು ಅಲ್ಲ ನಿರ್ದೇಶಕ ಎಚ್​ಎಲ್​ಎನ್ ಸಿಂಹ. ‘ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ಗಾಡ್​ಫಾದರ್ ಇದ್ದೇ ಇರುತ್ತಾರೆ. ಇಲ್ಲ ಎಂದು ಹೇಳಿಕೊಳ್ಳುವವರಿಗೂ ಇರುತ್ತಾರೆ. ಅದೇ ರೀತಿ ಡಾ. ರಾಜ್​ಕುಮಾರ್​ಗೆ ಎಚ್​ಎಲ್​ಎನ್ ಸಿಂಹ ಅವರೇ ಗಾಡ್​ಫಾದರ್ ಆಗಿದ್ದರು. ಅದನ್ನು ಸ್ವತಃ ಅಣ್ಣಾವ್ರೇ ಹೇಳಿಕೊಂಡಿದ್ದರು’ ಎಂದು ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಹಿರಿಯ ನಟ ಹೊನ್ನವಳ್ಳಿ ಕೃಷ್ಣ. ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸುತ್ತಿರುವಾಗ ಬೆಳಗಿನ ಉಪಹಾರ ಮುಗಿಸಿ ಬಂದಿರುತ್ತಿದ್ದ ರಾಜ್​ಕುಮಾರ್​ಗೆ ಮಧ್ಯಾಹ್ನದ ವೇಳೆ ಊಟ ನೀಡುತ್ತಿರಲಿಲ್ಲ. ಊಟ ನೀಡಬೇಡಿ ಎಂದು ಸ್ವತಃ ನಿರ್ದೇಶಕ ಎಚ್​ಎಲ್​ಎನ್ ಸಿಂಹ ಕಟ್ಟಾಜ್ಞೆ ಹೊರಡಿಸಿದ್ದರು! ಅದಕ್ಕೆ ಕಾರಣ; ಕಣ್ಣಪ್ಪನ ಪಾತ್ರ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಬಳಲಿ ಬೆಂಡಾದ ವ್ಯಕ್ತಿಯಂತೆ ರಾಜ್​ಕುಮಾರ್ ಕಾಣಿಸಬೇಕಿತ್ತು. ಉಪವಾಸ ಇದ್ದರೆ, ಪಾತ್ರಕ್ಕೆ ತಕ್ಕಂತೆ ದೇಹವೂ ಒಗ್ಗಿಕೊಳ್ಳಲಿದೆ ಎಂಬುದು ನಿರ್ದೇಶಕರ ಉದ್ದೇಶವಾಗಿತ್ತು. ಹಾಗಂತ ರಾಜ್​ಕುಮಾರ್ ಮೇಲೆ ಅವರಿಗೇನು ಕೋಪವಿರಲಿಲ್ಲ. ಅದು ಅವರ ವೃತ್ತಿನಿಷ್ಠೆಯಾಗಿತ್ತಷ್ಟೇ. ನಿರ್ದೇಶಕರ ಅಣತಿಯಂತೆ ಎಷ್ಟೋ ದಿನಗಳ ಕಾಲ ಮಧ್ಯಾಹ್ನದ ಊಟವನ್ನು ರಾಜ್​ಕುಮಾರ್ ತ್ಯಜಿಸಿದ್ದರು. ಸಿನಿಮಾ ಚಿತ್ರೀಕರಣ ಮುಗಿಯಿತು. 1954ರ ಮೇ ತಿಂಗಳಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರ ಬಿಡುಗಡೆಯಾಯಿತು. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ಪಡೆದುಕೊಂಡಿತು. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು. ಕಣ್ಣಪ್ಪನ ಮೂಲಕ ಮುತ್ತುರಾಜ್, ರಾಜ್​ಕುಮಾರ್ ಆದರು. ಅವರ ಖ್ಯಾತಿಯೂ ದುಪ್ಪಟ್ಟಾಯಿತು. ಅವರಿಗಾಗಿಯೇ ಸಿನಿಮಾ ಕಥೆಗಳು ತಯಾರಾದವು. ಅವಕಾಶಗಳ ಸುರಿಮಳೆಯೇ ಸುರಿಯಿತು. ನಿಜಕ್ಕೂ ಅಣ್ಣಾವ್ರ ಕಾಲಘಟ್ಟವೇ ಒಂದು ರೀತಿ ಸುವರ್ಣಯುಗ.

One Reply to “ಮುತ್ತುರಾಜ್, ರಾಜ್​ಕುಮಾರ್ ಆಗಿದ್ದೇ ರೋಚಕ!”

Comments are closed.