ಮುತ್ತಲಮುರಿ-ಕಿವಡೆಬೈಲ್ ರಸ್ತೆ ಅತಿಕ್ರಮಣ ತೆರವಿಗೆ ಒತ್ತಾಯ

ಹಳಿಯಾಳ: ತಾಲೂಕಿನ ಮುತ್ತಲಮುರಿ-ಕಿವಡೆಬೈಲ್ ರಸ್ತೆ ಅತಿಕ್ರಮಣ ತೆರವುಗೊಳಿಸಿ ಕೃಷಿಕರು, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮುತ್ತಲಮುರಿ ಗ್ರಾಮಸ್ಥರು ಸೋಮವಾರ ತಾಲೂಕಾಡಳಿತವನ್ನು ಆಗ್ರಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಸ್ಥರು ಪಟ್ಟಣದ ಮಿನಿ ವಿಧಾನಸೌಧ ಪ್ರವೇಶ ದ್ವಾರದ ಪ್ರಾಂಗಣದಲ್ಲಿ ಕುಳಿತು ತಮ್ಮ ಹಕ್ಕೊತ್ತಾಯ ಮಂಡಿಸಿದರು. ಗ್ರಾಮಸ್ಥರ ಅಹವಾಲು ಆಲಿಸಲು ಬಂದ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಮುತ್ತಲಮುರಿ ಗ್ರಾಮಸ್ಥರ ಮುಖ್ಯ ಸಂಪರ್ಕ ರಸ್ತೆಯನ್ನೇ ತೇರಗಾಂವ ಗ್ರಾಮದ ರೈತರೊಬ್ಬರು ಅತಿಕ್ರಮಿಸಿ ರಸ್ತೆ ಮಧ್ಯೆ ಚರಂಡಿ ತೆಗೆದು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ರೈತರು ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಸಮಸ್ಯೆಯಾಗಿದೆ ಎಂದು ದೂರಿದರು. ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು. ರಸ್ತೆ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು. ಪಿಎಸ್​ಐ ಆನಂದಮೂರ್ತಿ ಸ್ಥಳದಲ್ಲಿದ್ದರು. ಮದ್ನಳ್ಳಿ ಗ್ರಾಪಂ ಅಧ್ಯಕ್ಷ ಮಹೇಂದ್ರ ಕಮ್ಮಾರ, ಸದಸ್ಯ ನಾರಾಯಣ ಜಿಡ್ಡಿಮನಿ, ನಾರಾಯಣ ಕೆಸರೇಕರ, ಅರುಣ ಮಿರಾಶಿ, ಯಲ್ಲವ್ವ ಮಾನಜಿ, ಸಾವೇರ ದಾಲಮೇತ, ನಾಮದೇವ ಮಿರಾಶಿ, ಅಶೋಕ ಜೈನ್, ಅರ್ಜುನ ಶಿಮಣ್ನನವರ ಇತರರಿದ್ದರು.

Leave a Reply

Your email address will not be published. Required fields are marked *