ಮುಠ್ಠಳ್ಳಿ ಹೊಳೆಯಲ್ಲಿ ಕಡಿಮೆಯಾದ ಹರಿವು

ಸಿದ್ದಾಪುರ: ದಿನೇ ದಿನೆ ಏರುತ್ತಿರುವ ತಾಪಮಾನ ದಿಂದಾಗಿ ತಾಲೂಕಿನ ಮುಠ್ಠಳ್ಳಿ (ಅಘನಾಶಿನಿ) ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಹಾರ್ಸಿಕಟ್ಟಾ ಗ್ರಾಪಂ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷದಿಂದ ಮುಠ್ಠಳ್ಳಿ ಹೊಳೆ ಮೂಲಕ ಹಾರ್ಸಿಕಟ್ಟಾ ಗ್ರಾಮಕ್ಕೆ ಗ್ರಾಪಂ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಆದರೆ, ಕಳೆದ ಹದಿನೈದು ದಿನದಿಂದ ಹೊಳೆಯಲ್ಲಿ ಹರಿವು ಕಡಿಮೆಯಾಗಿದೆ. ಮಿನಿ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರು ಪ್ರಯೋಜನಕ್ಕೆ ಬಾರದಂತಾಗಿದೆ.

ಕಳೆದ ಐದು ವರ್ಷದಲ್ಲಿ ಈ ಭಾಗದಲ್ಲಿ ಇದೇ ಮೊದಲ ಬಾರಿ ನೀರಿನ ತುಟಾಗ್ರತೆ ಉಂಟಾಗಿದೆ. ಹಾರ್ಸಿಕಟ್ಟಾದಿಂದ 3ಕಿಮೀ ದೂರದಲ್ಲಿರುವ ಮುಠ್ಠಳ್ಳಿ ಹೊಳೆಯಿಂದ ಮುಠ್ಠಳ್ಳಿಯ 30ಮನೆ, ಹೊಸ್ಕೋಪದ 5, ಕೊಂಬೆಮನೆಯ 3 ಹಾಗೂ ಹಾರ್ಸಿಕಟ್ಟಾದ 111ಮನೆಗಳಿಗೆ ಹಾರ್ಸಿಕಟ್ಟಾ ಗ್ರಾಪಂ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಆದರೆ, ಈಗ ವಾರದಲ್ಲಿ ಒಂದು ದಿನ ನೀರು ಬಿಡುವ ಸ್ಥಿತಿ ಉಂಟಾಗಿದೆ. ಹಾರ್ಸಿಕಟ್ಟಾದಲ್ಲಿರುವ ಬಾವಿಗಳಲ್ಲಿ ನೀರು ಪಾತಾಳ ತಲುಪಿದೆ.

ಹಾರ್ಸಿಕಟ್ಟಾ, ಮುಠ್ಠಳ್ಳಿ ಕುಡಿಯುವ ನೀರಿನ ಯೋಜನೆ ಕುರಿತು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಿನಿ ಡ್ಯಾಂ ಶಿಥಿಲ: ಮುಠ್ಠಳ್ಳಿ ಹೊಳೆಗೆ ನಿರ್ವಿುಸಿದ ಮಿನಿ ಡ್ಯಾಂ ಶಿಥಿಲಗೊಂಡಿದ್ದು, ನೀರು ಸಂಗ್ರಹ ಕಡಿಮೆಯಾಗ ತೊಡಗಿದೆ. ಗ್ರಾಪಂನಿಂದ ಎರಡು ಮೂರು ವರ್ಷಕ್ಕೊಮ್ಮೆ ತೆಪೆ ಹಚ್ಚುವ ಕಾರ್ಯ ನಡೆದಿದೆ. ವಾರದ ಹಿಂದೆ ಕಲ್ಲು-ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಆದರೆ, ಶಾಶ್ವತ ಪರಿಹಾರಕ್ಕೆ ಕಂಡುಕೊಳ್ಳುವಲ್ಲಿ ಗ್ರಾಪಂ ವಿಫಲಾಗಿದೆ.

ಹಾರ್ಸಿಕಟ್ಟಾ ಕುಡಿಯುವ ನೀರಿನ ಯೋಜನೆಗೆ ಗ್ರಾಪಂ ಅಥವಾ ಜಿಪಂ ಅನುದಾನ ಸಾಕಾಗುವುದಿಲ್ಲ. ಅದಕ್ಕೆ ಶಾಸಕರ ಅನುದಾನ ಬೇಕು. ಈಗಾಗಲೇ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತರಲಾಗಿದೆ. ಜನತೆಯೂ ನೀರಿನ ಕುರಿತು ಹೆಚ್ಚು ಕಾಳಜಿವಹಿಸಬೇಕು. | ಮೈದಿನ ಸಾಬ್ ಕಾನಕೊಪ್ಪ ಗ್ರಾಪಂ ಸದಸ್ಯ ಹಾರ್ಸಿಕಟ್ಟಾ.

ಮುಠ್ಠಳ್ಳಿ ಮಿನಿ ಡ್ಯಾಂ ಶಿಥಿಲಗೊಂಡಿದ್ದು, ಶಾಶ್ವತ ದುರಸ್ತಿ ಮಾಡುವ ಅನಿವಾರ್ಯತೆಯಿದೆ. ಈಗ ಮಾಡಲಾದ ತಾತ್ಕಾಲಿಕ ದುರಸ್ತಿ ಮಳೆಗಾದಲ್ಲಿ ಕಿತ್ತು ಹೋಗಲಿದೆ. ನೀರಿನ ತೊಂದರೆಯಾಗದಂತೆ ಗ್ರಾಪಂ ಎಲ್ಲ ರೀತಿಯ ಕ್ರಮಕೈಗೊಂಡಿದೆ. | ಎಸ್.ಎಸ್. ಸಾಗರೇಕರ್. ಕಾರ್ಯದರ್ಶಿ ಹಾರ್ಸಿಕಟ್ಟಾ ಗ್ರಾಪಂ.

Leave a Reply

Your email address will not be published. Required fields are marked *