ಮುಚ್ಚುವ ಸ್ಥಿತಿಯಲ್ಲಿ ಜೆಟಿಎಸ್

ಭರತ್‌ರಾಜ್ ಸೊರಕೆ ಮಂಗಳೂರು

ಬಿರುಕು ಬಿಟ್ಟ ಕಟ್ಟಡ, ಬೀಗ ಜಡಿದ ಕೋಣೆಯೊಳಗೆ ಧೂಳು ಹಿಡಿದ ಪುಸ್ತಕ ರಾಶಿ, ತುಕ್ಕು ಹಿಡಿದು ಭೂತಬಂಗಲೆಯಂತಾಗಿರುವ ವರ್ಕ್‌ಶಾಪ್…

ಹಿಂದೊಮ್ಮೆ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಡಿಕೇರಿ ಭಾಗದ ವಿದ್ಯಾರ್ಥಿಗಳ ಬಹುಬೇಡಿಕೆಯ ಸಂಸ್ಥೆಯಾಗಿದ್ದ ಕದ್ರಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ (ಜೆಟಿಎಸ್) ಸ್ಥಿತಿ ಇದು.

ರಾಜ್ಯದ ಆರು ಜೆಟಿಎಸ್‌ಗಳಲ್ಲಿ ಇದೂ ಒಂದು. ಕರಾವಳಿಯ ಸಾವಿರಾರು ಮಂದಿಗೆ ಬದುಕು ಕೊಟ್ಟ ಏಕೈಕ ತಾಂತ್ರಿಕ ಸಂಸ್ಥೆ. ಈಗಿರುವುದು ಬೆರಳೆಣಿಕೆಯ ವಿದ್ಯಾರ್ಥಿಗಳು. ಒಂದೆಡೆ ವಿದ್ಯಾರ್ಥಿಗಳ ಕೊರತೆ, ಮತ್ತೊಂದೆಡೆ ಅಧ್ಯಾಪಕರ, ಮೂಲಸೌಕರ್ಯ ಸಮಸ್ಯೆ.

54 ವರ್ಷ ಹಿಂದೆ (1965ರಲ್ಲಿ) ಈ ತಾಂತ್ರಿಕ ಶಾಲೆ ಆರಂಭಗೊಂಡಿದ್ದು, ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 2010ರ ಮೊದಲು ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ತರಗತಿಯಲ್ಲಿ 60ರಷ್ಟು ಇತ್ತು. ಪ್ರಸ್ತುತ ಎಂಟನೇ ತರಗತಿಯಲ್ಲಿ 11, ಒಂಬತ್ತರಲ್ಲಿ 26, ಹತ್ತರಲ್ಲಿ 17 ಮಂದಿ ಇದ್ದು, ಈ ಪೈಕಿ ವಿದ್ಯಾರ್ಥಿನಿ ಒಬ್ಬರು ಮಾತ್ರ.

ನಿಯಮ ಪ್ರಕಾರ ಶಾಲೆಯಲ್ಲಿ 35 ಕಾಯಂ ಹುದ್ದೆಗಳಿರಬೇಕಿತ್ತು. ಪ್ರಸ್ತುತ ಇರುವುದು 1 ಮುಖ್ಯ ಶಿಕ್ಷಕ, 1 ದೈಹಿಕ ಶಿಕ್ಷಣ ಶಿಕ್ಷಕ. ಓರ್ವ ಕ್ಲರ್ಕ್. ಅರೆಕಾಲಿಕ ಶಿಕ್ಷಕರು 7. ಸಿಬ್ಬಂದಿ ಕೊರತೆಯಿಂದ ವರ್ಕ್‌ಶಾಪ್‌ಗಳಿಗೆ ಪ್ರಾಕ್ಟಿಕಲ್ ವರ್ಕ್ ನಡೆಯುತ್ತಿಲ್ಲ. ಅರೆಕಾಲಿಕ ಶಿಕ್ಷಕರ ಪಾಠ ಪ್ರವಚನ ಸರಾಗವಾಗಿಲ್ಲ. ಪರೀಕ್ಷೆ ಬರೆಯಲು ಕಷ್ಟವಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಗೋಳು.

ಶಾಲಾ ವಸ್ತು ಕಳ್ಳರ ಪಾಲು: ಕದ್ರಿಯ ಕರ್ನಾಟಕ ಪಾಲಿಟೆಕ್ನಿಕ್ ತರಬೇತಿ ಸಂಸ್ಥೆಯ ಎದುರಿಗಿರುವ ಈ ಶಾಲೆಯ ತರಗತಿ ಕೋಣೆಯ ಕಿಟಕಿ ಗಾಜುಗಳು ಒಡೆದುಹೋಗಿವೆ. ಕಿಟಕಿಯ ಕಬ್ಬಿಣ ಚೌಕಟ್ಟುಗಳು ಕಳ್ಳರ ಪಾಲಾಗುತ್ತಿದೆ. ಸುತ್ತ ಕಸಕಡ್ಡಿ ಬಿದ್ದು ಪರಿಸರ ಗಲೀಜು. ಮಳೆಗಾಲದಲ್ಲಿ ಛಾವಣಿಯಿಂದ ನೀರು ತರಗತಿಯ ಒಳಗೆ ಜಿನುಗುತ್ತದೆ ಎಂದು ವಿದ್ಯಾರ್ಥಿಯೊಬ್ಬ ದೂರಿದ್ದಾನೆ.

ವರ್ಕ್‌ಶಾಪ್‌ಗೆ ಬೀಗ: ಶಾಲೆಯಲ್ಲಿ ಫಿಟ್ಟಿಂಗ್, ಇಲೆಕ್ಟ್ರಿಕಲ್, ಕಾರ್ಪೆಂಟರ್ ಸಂಬಂಧಿಸಿದ ಬೃಹತ್ ವರ್ಕ್‌ಶಾಪ್‌ಗಳಿದ್ದು, ಪ್ರಸ್ತುತ ಇವುಗಳಿಗೆ ಬೀಗ ಜಡಿಯಲಾಗಿದೆ. ಬಾಗಿಲು ತೆರೆಯದೆ ವರ್ಷಗಳೇ ಕಳೆದಿದ್ದು ಲಕ್ಷಾಂತರ ಬೆಲೆಬಾಳುವ ವಸ್ತುಗಳು ತುಕ್ಕು ಹಿಡಿಯುತ್ತಿದೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಪಾಠಗಳಿಲ್ಲ.

ಏನಿದು ಕಿರಿಯ ತಾಂತ್ರಿಕ ಶಾಲೆ?: ಕಿರಿಯ ತಾಂತ್ರಿಕ ಶಾಲೆ, ಪ್ರೌಢಶಾಲೆಗೆ ಸಮಾನ ಶಿಕ್ಷಣ. ಪ್ರೌಢಶಾಲೆಗಳಿಗಿರುವ ಎಲ್ಲ ಪಠ್ಯಗಳ ಜತೆಗೆ ಮೆಕಾನಿಕ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಗ್ರಾಫಿಕ್ಸ್ ಎಂಬ ಪ್ರತ್ಯೇಕ ಪಠ್ಯಗಳಿವೆ. ಪ್ರೌಢಶಾಲೆಗೆ 625 ಅಂಕಗಳ ಪರೀಕ್ಷೆಯಾದರೆ, ಜೆಟಿಎಸ್‌ಗೆ 825 ಅಂಕ.

ಶಾಲೆಯ ಮೂಲಸೌಕರ್ಯ ಸಮಸ್ಯೆ ಬಗ್ಗೆ ತಾಂತ್ರಿಕ ಶಿಕ್ಷಣ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಜತೆಗೆ ಅಧ್ಯಾಪಕರ ಕೊರತೆಯೂ ಇದೆ. ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ವಸ್ತುಗಳು ಕಳ್ಳರ ಪಾಲಾಗುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ.
ಮಂಜುನಾಥ್, ಮುಖ್ಯಶಿಕ್ಷಕರು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ ಕದ್ರಿ

ಜಿಲ್ಲೆಯ ಏಕೈಕ ತಾಂತ್ರಿಕ ಶಾಲೆಯಲ್ಲಿ ವ್ಯವಸ್ಥೆಗಳು ಅಸಮರ್ಪಕವಾಗಿದ್ದು, ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಮಸ್ಯೆಯಾಗಿದೆ. ಇದೇ ರೀತಿ ಮುಂದುವರಿದರೆ ಶಾಲೆ ಮುಂದೊಂದು ದಿನ ಮುಚ್ಚುವ ಸ್ಥಿತಿ ಬಂದೀತು. ಸ್ಥಳೀಯ ಪ್ರತಿನಿಧಿಗಳಿಗೆ ಶಾಲೆಯ ಸಮಸ್ಯೆ ಬಗ್ಗೆ ಹಲವು ಬಾರಿ ಮನವರಿಕೆ ಮಾಡಿದ್ದೇನೆ.
ಜಯಂತ್ ಕುಮಾರ್ ಅಧ್ಯಕ್ಷರು, ಶಿಕ್ಷಕರ ರಕ್ಷಕ ಸಂಘ ಕಿರಿಯ ತಾಂತ್ರಿಕ ಶಾಲೆ ಕದ್ರಿ