ಹೊನ್ನಾವರ: ನಾಗಾರಾಧನೆಯಿಂದ ವಿಶೇಷ ಮಹತ್ವ ಪಡೆದಿರುವ ಪುರಾಣ ಪ್ರಸಿದ್ಧ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ ಅಂಗವಾಗಿ ಸೋಮವಾರ ವಿಶೇಷ ಪೂಜೆ ನಡೆಯಿತು. ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಬೆಳಗ್ಗೆಯಿಂದ ಪೂಜೆ, ಅಭಿಷೇಕದೊಂದಿಗೆ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀತಿಯ ಬಾಳೆಗೊನೆ ಪೂಜೆ, ಅಪೂಪ ಸೇವೆ ಹಾಗೂ ಕುಂಬಳಕಾಯಿ ನೈವೇದ್ಯ ಅರ್ಪಿಸಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನ ಸಮೀಪ ದಲ್ಲಿರುವ ನಾಗಬನದಲ್ಲಿ ಬೆಳಗ್ಗೆಯಿಂದಲೇ ಪೂಜೆಗಳು ಆರಂಭವಾಗಿ, ಕ್ಷೀರಾಭಿಷೇಕ ನಡೆದವು. ಭಕ್ತರು ನಾಗಬನದಲ್ಲಿ ನಾಗರಕ್ಕೆ ಹಾಲು ಎರೆದು ಪೂಜೆ ಸಲ್ಲಿಸಿದರು. ಸೋಮವಾರ ಬೆಳಗ್ಗೆಯಿಂದಲೇ ಧಾರಾಕಾರ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಸಾವಿರಾರು ಜನರು ದೇವರ ದರ್ಶನ ಪಡೆದರು.