ಮುಗ್ಧ ಭಕ್ತನಿಗೆ ದರ್ಶನದ ಕರುಣೆ

| ಡಾ. ಕೆ.ಎಸ್. ನಾರಾಯಣಾಚಾರ್ಯ

ಊರ್ವಶಿಯ ಕಥೆ ಕೇಳಿಲ್ಲವೇ…? ನರನಾರಾಯಣರ ತಪಸ್ಸಿಗೆ, ಅವರ ಘೊರತೆಗೆ ಇಂದ್ರ ಬೆರಗಾದ…! ತಪಸ್ಸಿನ ಉದ್ದೇಶ್ಯ ಅವನಿಗೆ ತಿಳಿಯಲಿಲ್ಲ…! ಅದು ವಿಷ್ಣುಮಾಯೆ…! ಪರೀಕ್ಷಿಸಲು ರಂಭೆ, ಮೇನಕೆ ಮೊದಲಾದ ಅಪ್ಸರೆಯರನ್ನು ಕಳುಹಿದ್ದ…! ನರನಾರಾಯಣರ ಮನಸ್ಸು ವಿಚಲಿತವಾಗಲಿಲ್ಲ! ಕೋಪಗೊಂಡು ಶಾಪ ಕೊಡುವ ಹೀನ ಋಷಿಗಳು ಅವರಲ್ಲ, ಅಲ್ಲವೆ! ಅಷ್ಟೇ ಅಲ್ಲ… ಆ ಅಪ್ಸರೆಯರೂ ನಾಚುವಂತೆ ಭಗವಂತನು, ನಾರಾಯಣರೂಪಿಯಾಗಿದ್ದ, ತನ್ನ ತೊಡೆಯಿಂದಲೇ, ಅವರೆಲ್ಲರ ಗರ್ವಭಂಗವಾಗುವಂತೆ, ಅವರೆಲ್ಲರಿಗಿಂತಲೂ ಹೆಚ್ಚು ಸುಂದರಿಯಾದ, ಲೋಕಮೋಹನೆಯಾದ ಇನ್ನೊಬ್ಬ ಅಪ್ಸರೆಯನ್ನು ಸೃಷ್ಟಿಸಿದ…! ಅವಳೇ ಊರ್ವಶೀ… ಊರುವಿನಲ್ಲಿ ಹುಟ್ಟಿದವಳು. ಉಳಿದವರಿಗೆ ಮೋಹ ಕರಗುವಂತೆ ಉಪದೇಶಿಸಿ, ಇವಳನ್ನು ಅವರೊಡನೆಯೇ ಬಳುವಳಿಯಾಗಿ ಇಂದ್ರಲೋಕಕ್ಕೆ ಕಳುಹಿದ…! ಇದು ವಿಶ್ವಾಮಿತ್ರ ಸೃಷ್ಟಿಯಲ್ಲ! ಅವರನ್ನು ಮರುಳು ಮಾಡಿದ ದೈವೀಸೃಷ್ಟಿ…! ಅಪ್ಸರೆಯರ ಗರ್ವಭಂಗ ಮಾಡಿದ ಅವತಾರವಿದು…!

ಶುಕರು ಈಗ ಧ್ರುವ ವರಪ್ರದಾವತಾರವನ್ನು ನೆನಸುತ್ತಾರೆ… ಎಂಥ ಮುಗ್ಧ ಭಕ್ತನಿಗೆ ಎಂಥ ಮೋಹಕ ದರ್ಶನವಿತ್ತ ಕಾರುಣ್ಯ ಇದು! ಉತ್ತಾನಪಾದನೆಂಬ ದೊರೆಗೆ ಸುನೀತಿ ಎಂಬ ಪತ್ನಿಯ ಮಗ ಈ ಧ್ರುವ! ಆ ದೊರೆಯ ಇನ್ನೊಬ್ಬ ಪತ್ನಿ ಸುರುಚಿ! (ಇವಳಿಗೆ ಮೈಬಣ್ಣ ಚೆನ್ನಾಗಿತ್ತು! ಮೊದಲವಳು ನೀತಿ ಚೆನ್ನಾಗಿದ್ದವಳು ಎಂಬುದು ಹೆಸರಿನ ಮರ್ಮ ಇರಬೇಕು!) ದೊರೆ ಎರಡನೆಯವಳಿಗೆ ತನ್ನನ್ನು ಮಾರಿಕೊಂಡಿದ್ದ! ಇವಳಿಗೆ ಹುಟ್ಟಿದ ಉತ್ತಮನಿಗೆ – ಓ! ಎಂಥ ವಿಡಂಬನೆ, ಈ ಹೆಸರಿನದು! ಹೆಚ್ಚು ಪ್ರೀತಿ ತೋರುತ್ತಿದ್ದ ಪುಕ್ಕಲ! ದೊರೆಯ ಸಿಂಹಾಸನದಲ್ಲಿ ಒಂದು ತೊಡೆಯ ಮೇಲೆ ಕುಳಿತಿದ್ದ ಉತ್ತಮನನ್ನು ಕಂಡು, ಬಾಲಕ ಧ್ರುವ, ತಾನೂ ತಂದೆಯ ಇನ್ನೊಂದು ತೊಡೆಯ ಮೇಲೆ ಕೂಡಲು ಆಶಿಸಿದ! ತಂದೆಗೆ ಕೂಡಿಸಿಕೊಳ್ಳಲು ಇಷ್ಟವಾದರೂ, ಎರಡನೆಯ ಹೆಂಡತಿಯ ಭಯ! ಕೂಡಿಸಿಕೊಂಡ, ಹಿಂದೆ ಮುಂದೆ ನೋಡಿ…! ಆಗ ಬಂದಳು ಸುರುಚಿ! ಧ್ರುವನನ್ನೊದೆದು ಕೆಳಗೆ ತಳ್ಳಿ, ಆ ಸಿಂಹಾಸನದ ಮೇಲೆ ಕೂಡಲು ಅವನಿಗೆ ಹಕ್ಕಿಲ್ಲವೆಂದು ಜರೆದಳು…! (ಸಿಂಹಾಸನಕ್ಕೆ ಜಗಳ ಹೀಗೆ ಅನಾದಿಯಾಯಿತು! ಅನಂತವೂ ಆಯಿತು!) ಅಪಮಾನಿತನಾದ ಬಾಲಕ ಧ್ರುವ ತಾಯಿಯ ಮೊರೆ ಹೊಕ್ಕ… ತನಗೊಂದು ಸಿಂಹಾಸನ ಬೇಕೆಂದು… ನಿಸ್ಸಹಾಯಕಳಾದ ತಾಯಿ ‘‘ಶ್ರೀಮನ್ನಾರಾಯಣನನ್ನು ಪ್ರಾರ್ಥಿಸು; ಅವನು ಕಾಮಧೇನುವಿನಂತೆ! ಕೇಳಿದ್ದು ಕೊಡುತ್ತಾನೆ’’ ಎಂದಳು. ಅದೇ ಉಪದೇಶವಾಯಿತು…! ಹೊರಟ ಧ್ರುವ… ಆ ಭಗವಂತನ ದರ್ಶನಾರ್ಥಿಯಾಗಿ… ಕಂಡಕಂಡವರನ್ನೆಲ್ಲ ಕೇಳುತ್ತಾ… ‘‘ನೀವು ದೇವರನ್ನು ನೋಡಿರುವಿರಾ?’’ ಎಂದು… ನಾರದರ ಉಪದೇಶದಿಂದ ಭಗವಂತನನ್ನು ಧ್ರುವ ಸಾಕ್ಷಾತ್ಕರಿಸಿಕೊಂಡ! ಶಾಶ್ವತವಾದ ಧ್ರುವಪದವಿಯನ್ನು ಪಡೆದ! ಸರ್ಪ¤ಗಳಿಗೂ ಮೇಲ್ಪಟ್ಟ ಸ್ಥಾನ ಅದು; ಅವರೂ ಅವನಿಗೆ ಪ್ರದಕ್ಷಿಣೆ ಹಾಕುವಂತೆ ಆದುದು ಧ್ರುವನ ಭಕ್ತಿಯ ಮಹಿಮೆ; ಭಗವಂತನ ಅನುಗ್ರಹದಿಂದ. ಒಬ್ಬನಿಗಾಗಿಯೇ ಆದ ಒಂದವತಾರ ಈ ಧ್ರುವವರಪ್ರದಾವತಾರ…! ಎಷ್ಟು ವಿಚಿತ್ರ!!

***

ಶುಕರು ಆಗಾಗ ಕಣ್ಣು ಮುಚ್ಚಿ ರಸಾನುಭೂತಿಯ ಸಮಾಧಿಯಲ್ಲಿರುತ್ತ, ಸ್ವಾನುಭವದ ರುಚಿಯೊಡನೆ ಪರೀಕ್ಷಿತನಿಗೆ ಅವತಾರವಿಶೇಷಗಳನ್ನು ವರ್ಣಿಸುತ್ತಿದ್ದಾರೆ. ಕಾಲಾಂತರ, ದೇಶಾಂತರದಲ್ಲಿ ನಡೆದು ಮುಗಿದಂತೆ ಅವು ತೋರುವುದೇ ಇಲ್ಲ! ಶ್ರೋತೃಗಳು ಲೋಕವನ್ನೂ ಮೈ-ಮನಗಳನ್ನೂ ಮರೆತು ಆನಂದಾವೇಶದಲ್ಲಿ ಕೇಳುತ್ತಾ ಮಗ್ನರಾಗಿದ್ದಾರೆ…

Leave a Reply

Your email address will not be published. Required fields are marked *