ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಹುಬ್ಬಳ್ಳಿ:ಹು-ಧಾ ಮಹಾನಗರ ಪಾಲಿಕೆಯ 64 ಕೋಟಿ ರೂ. ವೆಚ್ಚದ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಮುಗ್ಗರಿಸಿದೆ. ಈಗಂತೂ ಚುನಾವಣೆ ಕೆಲಸವೇ ಪರಮೋಚ್ಚವೆಂದು ಪಾಲಿಕೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಹೀಗಿರುವಾಗ ಕಸ ವಿಲೇವಾರಿ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸುಧಾರಿಸುವ ನಿರೀಕ್ಷೆ ಇಟ್ಟುಕೊಳ್ಳಬೇಡಿ.

ಕೆಲವೊಂದು ವಾರ್ಡ್​ಗಳಲ್ಲಿ ಮಧ್ಯಾಹ್ನ 11, 12ರ ಬಳಿಕವೂ ಪೌರ ಕಾರ್ವಿುಕರು ಆಟೋ ಟಿಪ್ಪರ್ ಮೂಲಕ ಮನೆ ಮನೆಯಿಂದ ಕಸ ಸಂಗ್ರಹಿಸುತ್ತ ಇರುತ್ತಾರೆ. ಕಚೇರಿ, ದಿನಂಪ್ರತಿ ಕೆಲಸ ಕಾರ್ಯಗಳಿಗ ಮನೆಯಿಂದ ಹೊರಗೆ ಹೋಗುವ ಜನರು ಮಧ್ಯಾಹ್ನ 11, 12 ಗಂಟೆಯ ಬಳಿಕ ಆಟೋ ಟಿಪ್ಪರ್​ಗೆ ಕಸ ನೀಡಲು ಸಾಧ್ಯವಿಲ್ಲ. ಎಷ್ಟೋ ದಿನ ಖಾಲಿ ಜಾಗದಲ್ಲಿ, ಕಸದ ತೊಟ್ಟಿಯಲ್ಲಿ ಕಸ ಹಾಕುವುದು ಅನಿವಾರ್ಯವಾಗಿದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಮನೆ ಮನೆಗೆ ಬರಲು ವಿಳಂಬವಾಗುತ್ತಿರುವುದರಿಂದ ಬಹುತೇಕ ವಾರ್ಡ್​ಗಳಲ್ಲಿ ಹೊಸ ವ್ಯವಸ್ಥೆ ವಿಫಲವಾಗಿದೆ. ಜತೆಗೆ ವಾರದಲ್ಲಿ 2-3 ಬಾರಿ ಆಟೋ ಟಿಪ್ಪರ್ ಕೆಟ್ಟು ನಿಲ್ಲುತ್ತಿದೆ. ಅಂಥ ಸಂದರ್ಭದಲ್ಲಿ ಕಸ ಸಂಗ್ರಹಿಸಲು ಪೌರ ಕಾರ್ವಿುಕರು ಪುಶ್​ಕಾರ್ಟ್ ಹಿಡಿದುಕೊಂಡು ಬರುತ್ತಾರೆ. ಬಡಾವಣೆಯ ಅರ್ಧದಷ್ಟು ಜನರಿಗೆ ಅದು ಗೊತ್ತಾಗುವುದೇ ಇಲ್ಲ. ಜನರು ಈಗಾಗಲೇ 2-3 ತಿಂಗಳಿಂದ ಆಟೋ ಟಿಪ್ಪರ್ ವ್ಯವಸ್ಥೆಗೆ ಹೊಂದಿಕೊಂಡಿರುವುದು ಇದಕ್ಕೆ ಕಾರಣ. ಸಾರ್ವಜನಿಕರು ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ಕಸವನ್ನು ಪ್ರತ್ಯೇಕಿಸಿ ಕೊಡಬೇಕೆಂದು ಪಾಲಿಕೆ ತಾಕೀತು ಮಾಡುತ್ತದೆ. ಆದರೆ, ಆಟೋ ಟಿಪ್ಪರ್​ನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಇದ್ದರೂ ಜನರು ನೀಡಿದ ಕಸವನ್ನು ಪೌರ ಕಾರ್ವಿುಕರು ಪ್ರತ್ಯೇಕವಾಗಿ ಹಾಕುವುದಿಲ್ಲ. ಜನರಿಂದ ಹೀಗೆ ಪಡೆದು ಹಾಗೇ ಆಟೋ

ಟಿಪ್ಪರ್​ಗೆ ಎಸೆಯುತ್ತ ಹೋಗುತ್ತಾರೆ. ಮುಂದೆ ಡಂಪಿಂಗ್ ಯಾರ್ಡ್​ಗೆ ಹೋಗಿ ವಿಲೇವಾರಿ ಮಾಡುತ್ತಾರೆ. ಎಲ್ಲ ಆಟೋ ಟಿಪ್ಪರ್​ಗಳು ದೂರದ ಡಂಪಿಂಗ್ ಯಾರ್ಡ್​ಗೆ ಹೋಗುವುದನ್ನು ತಪ್ಪಿಸಲು ವಿವಿಧೆಡೆ ಕಾಂಪ್ಯಾಕ್ಟರ್ ಸ್ಟೇಷನ್ ನಿರ್ವಿುಸಲಾಗುತ್ತಿವೆ. ಅವು ಕಾರ್ಯಾರಂಭ ಮಾಡಿಲ್ಲ. ಕಾಂಪ್ಯಾಕ್ಟರ್ ಸ್ಟೇಷನ್​ಗಳಲ್ಲಿ ಕಸದ ಗಾತ್ರವನ್ನು ಗಣನೀಯವಾಗಿ ಕುಗ್ಗಿಸುವ ಕೆಲಸ ಮಾಡಲಾಗುತ್ತದೆ. ಇವು ಕಾರ್ಯಾರಂಭ ಮಾಡದ ಹೊರತು ಆಟೋ ಟಿಪ್ಪರ್​ಗಳು ದೂರದ ಡಂಪಿಂಗ್ ಯಾರ್ಡ್​ಗೆ ಹೋಗುವುದು ತಪ್ಪುವುದಿಲ್ಲ.

ಆಟೋ ಟಿಪ್ಪರ್ ದುರ್ಬಲ

ಪ್ರತಿಯೊಂದಕ್ಕೆ 7.50 ಲಕ್ಷ ರೂ. ವೆಚ್ಚದಲ್ಲಿ ಸುಮಾರು 170 ಆಟೋ ಟಿಪ್ಪರ್ ಖರೀದಿಸಲಾಗಿದೆ. ಪ್ರತಿ ವಾರ್ಡ್​ಗೆ 2-3 ಆಟೋ ಟಿಪ್ಪರ್​ಗಳನ್ನು ನೀಡಲಾಗಿದೆ. ಆಟೋ ಟಿಪ್ಪರ್ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತಗೊಂಡಾಗ ಅದು ಯಾಂತ್ರಿಕವಾಗಿ ಬಲಿಷ್ಟವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. ಈಗ 3 ತಿಂಗಳ ಅವಧಿಯಲ್ಲಿಯೇ ವಾರಕ್ಕೆ 2 ಬಾರಿ ಆಟೋ ಟಿಪ್ಪರ್ ಕೆಟ್ಟು ನಿಲ್ಲುತ್ತಿದೆ. ಹಾಗಾದರೆ ಆಟೋ ಟಿಪ್ಪರ್ ಯಾಂತ್ರಿಕವಾಗಿ ದುರ್ಬಲವಾಗಿದೆ ಎಂಬುದು ಸ್ಟಷ್ಟವಾಗುತ್ತದೆ.

ಇಂದಿರಾನಗರ, ಉಣಕಲ್ ಹಾಗೂ ನಂದಿನಿ ಲೇಔಟ್​ನಲ್ಲಿ ಕಾಂಪ್ಯಾಕ್ಟರ್ ಸ್ಟೇಷನ್ ಸಿದ್ಧ ಸ್ಥಿತಿಯಲ್ಲಿದೆ. ಉದ್ಘಾಟನೆಗೆ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ. ಕಾಂಪ್ಯಾಕ್ಟರ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದರೆ ಪ್ರತಿ ಆಟೋ ಟಿಪ್ಪರ್ ಕಾರವಾರ ರಸ್ತೆ ಡಂಪಿಂಗ್ ಯಾರ್ಡ್​ಗೆ ಹೋಗಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಮೇಯ ಬರುವುದಿಲ್ಲ. ಸಾಕಷ್ಟು ಸಮಯ ಉಳಿತಾಯವಾಗಲಿದೆ.

| ವಿಜಯಕುಮಾರ

ಕಾರ್ಯನಿರ್ವಾಹಕ ಇಂಜಿನಿಯರ್ (ಎಸ್​ಡಬ್ಲ್ಯುಎಂ)