ಹುಬ್ಬಳ್ಳಿ: ಕರೊನಾ ಹರಡುವಿಕೆ ತಡೆಗಟ್ಟಲು ಸರ್ಕಾರ ವಿಧಿಸಿದ ವಾರಾಂತ್ಯದ ಕರ್ಫ್ಯೂಗೆ ಭಾನುವಾರ ಕೂಡ ವಾಣಿಜ್ಯ ನಗರಿ ಅದ್ಭುತ ರೀತಿಯಲ್ಲೇ ಸ್ಪಂದಿಸಿತು.
ಬೆಳಗ್ಗೆ 10 ಗಂಟೆ ಹೊತ್ತಿಗೆಲ್ಲ ನಾಗರಿಕರು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಯ ಹಾದಿ ಹಿಡಿದಿದ್ದರು. ಪೊಲೀಸರು ಒಂದು ಸುತ್ತು ಹಾಕುತ್ತಿದ್ದಂತೆ ದಿನಸಿ, ಇತರ ವಸ್ತುಗಳ ಅಂಗಡಿಗಳೂ ಬಂದ್ ಆದವು. ಪ್ರಮುಖ ದುರ್ಗದಬೈಲ್, ಎಂ.ಜಿ. ಮಾರ್ಕೆಟ್, ಕೊಪ್ಪಿಕರ ರಸ್ತೆ, ದಾಜಿಬಾನ ಪೇಟೆ, ಜನತಾ ಬಜಾರ್, ಹಳೇಹುಬ್ಬಳ್ಳಿ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ಅಂಗಡಿಗಳು ಬಾಗಿಲು ಹಾಕಿದಂತೆಯೇ ಇತ್ತು.
ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಕೊಂಡು ನಿಂತಿದ್ದ ಪೊಲೀಸರಿಗೆ ಭಾನುವಾರ ಸಹ ಭಾರಿ ತಲೆಬಿಸಿ ಕೆಲಸವೇನೂ ಇರಲಿಲ್ಲ. ಅನಗತ್ಯವಾಗಿ ಸಂಚರಿಸುವವರನ್ನು ನಿಲ್ಲಿಸಿ ಗದರಿಕೊಂಡು, ಕೆಲವರಿಗೆ ದಂಡ ಹಾಕಿದರಷ್ಟೆ. ಜನರು ಮನೆಯಲ್ಲೇ ಇದ್ದುದರಿಂದ ನಗರ ಸಾರಿಗೆ ಬಸ್ ಸಂಚಾರವೂ ವಿರಳವಾಗಿತ್ತು. ಬಡಾವಣೆಗಳಲ್ಲಿ ಸಣ್ಣ ಸಣ್ಣ ಗುಂಪು ಸೇರುತ್ತಿದ್ದವರು, ಬಿಡುವಿನ ಸಮಯದಲ್ಲಿ ಬಂಧು ಮಿತ್ರರನ್ನೆಲ್ಲ ಫೋನ್ನಲ್ಲೇ ಸಂರ್ಪಸುತ್ತಿದ್ದವರು ರ್ಚಚಿಸುತ್ತಿದ್ದ ವಿಷಯ, ‘ಲಾಕ್ಡೌನ್ನಂಥ ಈ ಕರ್ಫ್ಯೂ ಮುಗೀತಾ… ಅಥವಾ ಇನ್ನೂ ಐತಾ…’ ಎನ್ನುವುದೇ ಆಗಿತ್ತು. ಸ್ಪಷ್ಟ ಉತ್ತರಕ್ಕಾಗಿ ಜನ ಕಾಯುತ್ತಿದ್ದಾರೆ.
ವಾರಾಂತ್ಯದ ಕರ್ಫ್ಯೂ ಕಟ್ಟುನಿಟ್ಟು
ಧಾರವಾಡ: ಕೋವಿಡ್ 2ನೇ ಅಲೆ ನಿಗ್ರಹಿಸಲು ಭಾನುವಾರ ಜಾರಿಗೊಳಿಸಲಾಗಿದ್ದ ವಾರಾಂತ್ಯದ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿತ್ತು.
ವಾರಾಂತ್ಯದ ಕರ್ಫ್ಯೂನ ಮೊದಲ ದಿನವಾಗಿದ್ದ ಶನಿವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಅದೇರೀತಿ 2ನೇ ದಿನವಾದ ಭಾನುವಾರವೂ ಕಂಡುಬಂದಿತು. ಬೆಳಗ್ಗೆ 10 ಗಂಟೆಯವರೆಗೆ ತರಕಾರಿ, ಹಾಲು- ಹಣ್ಣು, ದಿನಸಿ ಸಾಮಗ್ರಿಗಳ ಖರೀದಿಗೆ ಪೊಲೀಸರು ಅವಕಾಶ ನೀಡಿದ್ದರು. ಹೀಗಾಗಿ ಸಾರ್ವಜನಿಕರು ಮಾರುಕಟ್ಟೆಗೆ ಮುಗಿಬಿದ್ದಿದ್ದರು. 10 ಗಂಟೆಯ ನಂತರ ಪೊಲೀಸರು ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು. ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರನ್ನು ಮನೆಗಳಿಗೆ ಕಳುಹಿಸಿದರು.
ಕರ್ಫ್ಯೂ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಗ್ರಾಮೀಣ ಪ್ರದೇಶ ಹಾಗೂ ನಗರ ಸಾರಿಗೆ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ಆಗೊಮ್ಮೆ ಈಗೊಮ್ಮೆ ಧಾರವಾಡದಿಂದ ಹುಬ್ಬಳ್ಳಿಗೆ ಸಾರಿಗೆ ಬಸ್ಗಳು ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು.
ಪ್ರಮುಖ ರಸ್ತೆ, ವೃತ್ತಗಳಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಪಾದಚಾರಿಗಳು ಹಾಗೂ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ತಡೆದು ವಿಚಾರಿಸಿ ಕಳುಹಿಸುತ್ತಿದ್ದರು. ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಮನೆಗೆ ತೆರಳುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸರು, ಪಾಲಿಕೆ ಅಧಿಕಾರಿಗಳಿಂದ ದಂಡ ವಸೂಲಿ
ಕೋವಿಡ್ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲೂ ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಏ. 1ರಿಂದ 25ರವರೆಗೆ ಈ ನಿಯಮ ಮೀರಿ ಮಾಸ್ಕ್ ಧರಿಸದ 2045 ಜನರಿಂದ 2,04,500 ರೂಪಾಯಿ ದಂಡ ಆಕರಿಸಲಾಗಿದೆ. 17 ವಾಹನಗಳನ್ನು ಜಪ್ತಿ ಮಾಡಿ 4,200 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದ ಭಾನುವಾರ ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಪಾಡದ ಸಾರ್ವಜನಿಕರ ವಿರುದ್ಧ ಪಾಲಿಕೆ ಅಧಿಕಾರಿಗಳ ತಂಡ ದಂಡಾಸ್ತ್ರ ಪ್ರಯೋಗಿಸಿದೆ. ಅವಳಿನಗರದ ವಲಯ 1ರಿಂದ 12ರಲ್ಲಿ ಮಾಸ್ಕ್ ಧರಿಸದ 30 ಜನರಿಂದ 7,500 ರೂಪಾಯಿ ಹಾಗೂ ಪರಸ್ಪರ ಅಂತರ ಕಾಪಾಡದ 242 ಜನರಿಂದ 48,400 ಸೇರಿ 55,900 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
546 ಕರೊನಾ ಪ್ರಕರಣ 6 ಜನರ ಸಾವು
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಭಾನುವಾರ 546 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನರು ಮೃತಪಟ್ಟಿದ್ದಾರೆ. 275 ಜನರು ಬಿಡುಗಡೆಯಾಗಿದ್ದು, 2811 ಸಕ್ರಿಯ ಪ್ರಕರಣಗಳಿವೆ. ಕರೊನಾದಿಂದ ಇದುವರೆಗೆ 677 ಜನರು ಮೃತಪಟ್ಟಿದ್ದಾರೆ.
ಹಳೇಹುಬ್ಬಳ್ಳಿಯ ಮಾರುಕಟ್ಟೆ ಸ್ಥಳಾಂತರ
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗವಳಿಗಲ್ಲಿಯ ಹೂ-ಹಣ್ಣು, ಕಾಯಿಪಲ್ಲೆ ಮಾರುಕಟ್ಟೆಯನ್ನು ಶ್ರೀ ಸಿದ್ಧಾರೂಢ ಮಠದ ಎದುರಿನ ರಸ್ತೆಗೆ ಸ್ಥಳಾಂತರಿಸಲಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ತಿಳಿಸಿದೆ. ಗವಳಿಗಲ್ಲಿ ವ್ಯಾಪಾರಿ ಸ್ಥಳ ಚಿಕ್ಕದಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದರಿಂದ ಸ್ಥಳ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದೆ.
ಮದುವೆಗೆ ಅಡ್ಡಿಯಾದ 2ನೇ ಅಲೆ
ಸಂಶಿ ಕರೊನಾ ಹಾವಳಿಯ ಈ ದಿನಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಕಟಗಳನ್ನು ತಂದಿಟ್ಟಿದೆ. ಮದುವೆ ಮತ್ತಿತರ ಶುಭ ಕಾರ್ಯಗಳ ಮೇಲೂ ಕರೊನಾ ಕಾರ್ವೇಡ ಗಂಭೀರ ಪರಿಣಾಮ ಬೀರಿದೆ.
ನಿಶ್ಚಿಯವಾಗಿದ್ದ ಮದುವೆಗಳು ಮುಂದಕ್ಕೆ ಹೋಗುತ್ತಿವೆ. ಐದಾರು ತಿಂಗಳ ಹಿಂದೆಯೇ ಕಲ್ಯಾಣ ಮಂಟಪ ಬುಕ್ ಮಾಡಿದ್ದವರು ಈಗ ಪರಿತಪಿಸುತ್ತಿದ್ದಾರೆ. ಕೆಲವರು ಮಂಟಪಗಳಿಗೆ ನೀಡಿದ್ದ ಮುಂಗಡ ಹಣ ಮರಳಿ ಪಡೆದಿದ್ದರೆ, ಮತ್ತೆ ಕೆಲವರು ಕರೊನಾ ಸಂಕಷ್ಟ ಮುಗಿಯಲಿ ನೋಡೋಣ ಎನ್ನುತ್ತಿದ್ದಾರೆ. ಮದುವೆ ಮುಂದೆ ಹೋದರೆ ಎಲ್ಲಿ ಸಂಬಂಧ ಕೈ ತಪ್ಪುವುದೋ ಎಂದು ಹೆಣ್ಣು ಹೆತ್ತವರು ಆತಂಕಕ್ಕೊಳಗಾಗಿದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡವರು, ಮದುವೆ ದಿನಾಂಕ ನಿಗದಿಪಡಿಸಿಕೊಂಡವರು, ಲಗ್ನಪತ್ರಿಕೆ ಹಂಚಿದವರು, ಸರ್ಕಾರದ ನಿಬಂಧನೆಗಳನ್ವಯ ವಿವಾಹ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲು ತಯಾರಿ ನಡೆಸಿದ್ದವರು ಈಗ ಸಾವಿರಾರು ರೂಪಾಯಿ ಖರ್ಚು ಮಾಡಿ ಮದುವೆ ಮುಗಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಮದುವೆಯಾದರೆ ಸಾಕಪ್ಪ ಎಂಬ ಹಂತಕ್ಕೆ ಬಂದಿದ್ದಾರೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಜಾತ್ರೆ, ಉತ್ಸವ, ಸಭೆ, ಸಮಾರಂಭ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಜಾತ್ರೆ ನಡೆಸಿದ ಕುಬಿಹಾಳದಲ್ಲಿ 18 ಜನರ ಮೇಲೆ ಪ್ರಕರಣ ದಾಖಲಾಗಿದೆ. ಮದುವೆ ನೆರವೇರಿಸಲು ಕಡ್ಡಾಯವಾಗಿ ಪಾಸ್ ಪಡೆದು ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೈಗೆ ಬ್ಯಾಂಡ್ ಹಾಕುವ ಮೂಲಕ 50 ಜನಕ್ಕೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ತಪ್ಪಿದ್ದಲ್ಲಿ ಕಲ್ಯಾಣ ಮಂಟಪದ ಮಾಲೀಕರು, ಪೋಷಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
| ಬಸವರಾಜ ಕಲ್ಲಮ್ಮನವರ
ಸಿಪಿಐ ಕುಂದಗೋಳ
ಕರೊನಾ ಎರಡನೇ ಅಲೆಯ ಭೀತಿಯಿಂದ ಸರ್ಕಾರದ ಆದೇಶದನ್ವಯ ಏ. 29ರಂದು ಮಗಳ ಮದುವೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದಿದ್ದೇವೆ. ಜನರ ಹಿತದೃಷ್ಟಿಯಿಂದ ಕೋವಿಡ್- 19 ಮಾರ್ಗಸೂಚಿ ಪಾಲನೆ ಮಾಡುವ ಜತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹ ಮಾಡಲು ಇಚ್ಛಿಸಿದ್ದೇವೆ.
| ಡಾ. ಸದಾಶಿವ ತೆಲಗಿ ವಧುವಿನ ತಂದೆ
ಭಾನುವಾರವೂ ಕಲಘಟಗಿ ಸ್ತಬ್ಧ
ಕಲಘಟಗಿ: ಕರೊನಾ ಹಿನ್ನೆಲೆಯ ವೀಕೆಂಡ್ ಕರ್ಫ್ಯೂಗೆ ಪಟ್ಟಣ/ಗ್ರಾಮೀಣ ವ್ಯಾಪ್ತಿಯಲ್ಲಿ ಜನರು ಭಾನುವಾರವೂ ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದು ಕಂಡುಬಂದಿತು. ಸ್ಥಳೀಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬೆಳಗ್ಗೆ 10 ಗಂಟೆ ಬಳಿಕ ಎಲ್ಲ ಅಂಗಡಿ-ಮುಂಗ್ಗಟ್ಟು ಮುಚ್ಚಿಕೊಂಡಿದ್ದವು. ತಿಂಗಳು ಹಿಂದೆಯೇ ನಿಗದಿಯಾಗಿದ್ದ ಮದುವೆ, ಇನ್ನಿತರೆ ಕಾರ್ಯಕ್ರಮಗಳನ್ನು ಅತೀ ಸರಳವಾಗಿ ನೆರವೇರಿಸಿದ್ದು ಕಂಡು ಬಂತು. ಎಸ್ಐ ಪ್ರಭು ಸೂರಿನ್, ಸಿಬ್ಬಂದಿವರ್ಗ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಹಾಗೂ ಸಿಬ್ಬಂದಿವರ್ಗ, ಆರೋಗ್ಯ ಇಲಾಖೆಯವರು ಕಾರ್ಯನಿರ್ವಹಿಸಿದರು.
ಉಪ್ಪಿನಬೆಟಗೇರಿಯಲ್ಲಿ ಉತ್ತಮ ಸ್ಪಂದನೆ
ಉಪ್ಪಿನಬೆಟಗೇರಿ: ಶನಿವಾರ ಹಾಗೂ ಭಾನುವಾರ ಘೋಷಿಸಲಾಗಿದ್ದ ವಾರಾಂತ್ಯದ ಕರ್ಫ್ಯೂಗೆ ಗ್ರಾಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಸ್ಥಳೀಯ ಗ್ರಾಮ ಪಂಚಾಯಿತಿ, ಆರಕ್ಷಕ ಠಾಣೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸಿ ಮನೆಯಿಂದ ಹೊರಗಡೆ ಬರದಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಶುಕ್ರವಾರ ವಿರಕ್ತಮಠದಲ್ಲಿ ಜರುಗಿದ್ದ ಸಭೆಯಲ್ಲಿ ಪ್ರತಿ ಶನಿವಾರ ಜರುಗುತ್ತಿದ್ದ ಸಂತೆ ಈ ಬಾರಿ ರದ್ದು ಮಾಡುವ ಕುರಿತು ನಿರ್ಧರಿಸಿ ಮುಂಚಿತವಾಗಿ ಡಂಗುರ ಸಾರಲಾಗಿತ್ತು. ಹೀಗಾಗಿ ತರಕಾರಿ ಸೇರಿದಂತೆ ಯಾವುದೇ ವ್ಯಾಪಾರಸ್ಥರು ಆಗಮಿಸಿರಲಿಲ್ಲ. ಗ್ರಾಪಂ ಪಿಡಿಒ ಬಿ.ಎ. ಬಾವಾಕಾನವರ, ಕಂದಾಯ ಇಲಾಖೆಯ ಮಹಾಂತೇಶ ಬೆಳಹಾರ, ಅಣ್ಣಪ್ಪ ನಿಲವಾಣಿ, ವಿರೂಪಾಕ್ಷಪ್ಪ ಬಮ್ಮಶೆಟ್ಟಿ, ಅಬ್ದುಲ್ ಸತ್ತಾರ ಲಾಡಮ್ಮನವರ, ಪ್ರಕಾಶ ದೊಡಮನಿ ಸೇರಿ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯ ಪ್ರವೃತ್ತರಾಗಿದ್ದರು. ವೀಕೆಂಡ್ ಕರ್ಫ್ಯೂ ಯಶಸ್ಸಿಗೆ ಶ್ರಮಿಸಿದರು.