ಮುಗಿಯದ ಬಿಆರ್​ಟಿಎಸ್ ಕಂಪನಿ ಕಥೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್) ಯೋಜನೆಯಡಿ ನೂತನ ಬಸ್ ಸಂಚಾರ ವ್ಯವಸ್ಥೆ ಈಗಾಗಲೇ ಪ್ರಾಯೋಗಿಕ ಜಾರಿಯಾಗಿದ್ದು, ಯೋಜನೆ ಸಂಪೂರ್ಣ ಕೆಲಸ ಇನ್ನೇನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಆದರೆ, ಯೋಜನೆಯ ಪ್ರಮುಖ ಘಟ್ಟ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿಯದ ಕಾರಣ ಬಿಆರ್​ಟಿಎಸ್ ಎತ್ತ ಸಾಗಿದೆ? ಏನಿದರ ಹಕೀಕತ್? ಎಂಬುದೇ ತಿಳಿಯದಾಗಿದೆ.

ಅವಳಿನಗರ ಮಧ್ಯೆ ಎಂಟು ಪಥದ ರಸ್ತೆ ಅಭಿವೃದ್ಧಿ ಪಡಿಸುವಾಗ ಎಲ್ಲರಿಗೂ ಒಂದೇ ನ್ಯಾಯ ನೀಡುವರು ಎಂದೇ ನಂಬಲಾಗಿತ್ತು. ಆದರೆ, ಬಿಆರ್​ಟಿಎಸ್ ಕಂಪನಿ ಮಾಡಿದ್ದೇನು? ಎಂದು ಕಾರಿಡಾರ್ ಒಂದು ಸುತ್ತು ಹಾಕಿದ ಜನರು, ಕಂಪನಿಯ ಅನ್ಯಾಯ, ಅವ್ಯವಸ್ಥೆ ಕಂಡು ಆಕ್ರೋಶಗೊಳ್ಳುತ್ತಿದ್ದಾರೆ. ನಿತ್ಯ ಸಂಚರಿಸುವ ಜನ ಇದೇನಾ ಮಾದರಿ ರಸ್ತೆ? ಎಂದು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ.

ಹಾಗೆ ನೋಡಿದರೆ ದಕ್ಷಿಣ ಭಾರತದ ಮೊದಲ ಎನ್ನಲಾಗುವ ಈ ತ್ವರಿತ ಬಸ್ ಸಂಚಾರ ವ್ಯವಸ್ಥೆ ಯೋಜನೆಯನ್ನು ಒಂದು ವಿಶಿಷ್ಟ ರೀತಿಯಲ್ಲಿ ಅನುಷ್ಠಾನ ಮಾಡುವ ಜವಾಬ್ದಾರಿ ಹೊತ್ತುಕೊಂಡು ಬಂದ ಬಿಆರ್​ಟಿಎಸ್ ಕಂಪನಿ ಇದೀಗ ಎಲ್ಲ ಅಧ್ವಾನ ಹಿಡಿಸಿ ಹೊರಟಿರುವುದು ಅವಳಿ ನಗರದ ಜನರನ್ನು ಕಂಗೆಡಿಸಿದೆ.

2013-14ರಿಂದ ಆರಂಭವಾಗಿರುವ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಇದುವರೆಗೂ ಮುಗಿಯುತ್ತಿಲ್ಲ ಎಂದರೆ ಏನರ್ಥ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಮಾದರಿ ಯೋಜನೆ ಎಂದು ಅಧಿಕಾರಿಗಳು ಬರೀ ಬಾಯಿ ಮಾತಿನಿಂದ ಹೇಳುತ್ತಿದ್ದಾರೆ. ವಾಸ್ತವದಲ್ಲಿ ನೋಡಿದರೆ ಎಲ್ಲೆಂದರಲ್ಲಿ ರಸ್ತೆ ಕಿರಿದು ಮಾಡಿದ್ದಾರೆ. ಎಲ್ಲಿ ಭೂಸ್ವಾಧೀನಕ್ಕೆ ಅಡ್ಡಿ ಎದುರಾಗಿದೆಯೋ ಅಲ್ಲಿ ಹಾಗೇ ಬಿಟ್ಟಿದ್ದಾರೆ. ಅಧಿಕಾರಿಗಳು ಕಾನೂನು ರೀತಿಯಲ್ಲಿ ನಡೆದುಕೊಂಡಿಲ್ಲ. ಮನಸೋ ಇಚ್ಛೆ ಕೆಲಸ ಮಾಡಿದ್ದಾರೆ ಎಂಬುದು ಹುಬ್ಬಳ್ಳಿ-ಧಾರವಾಡ ಜನರ ದೂರು.

ಕೆಲವೆಡೆ ಫುಟ್​ಪಾತ್ ಇಕ್ಕಟ್ಟಾದರೆ, ಇನ್ನೂ ಕೆಲವೆಡೆ ರಸ್ತೆಯನ್ನೇ ಕಿರಿದು ಮಾಡಿ, ಅಪಘಾತ ವಲಯಗಳನ್ನು ಅಲ್ಲಲ್ಲಿ ಸೃಷ್ಟಿ ಮಾಡುತ್ತಿದ್ದಾರೆ. ಎಂಟು ಪಥದ ರಸ್ತೆ ಧಾರ್ವಿುಕ ಕೇಂದ್ರಗಳಿರುವ ಕೆಲವೆಡೆ ಅತ್ಯಂತ ಸಣ್ಣದಾಗಿದೆ. ವಿಶೇಷವಾಗಿ ಭೈರಿದೇವರಕೊಪ್ಪ ದರ್ಗಾ ಬಳಿ ರಸ್ತೆಯನ್ನು ಇಕ್ಕಟ್ಟುಗೊಳಿಸಲಾಗಿದೆ. ಅಲ್ಲಿ ಯಾವಾಗ ಡಿಪಿಆರ್​ನಲ್ಲಿ ಹೇಳಿರುವಂತೆ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಜನ ಕೇಳುತ್ತಿದ್ದಾರೆ.

ಜಗದೀಶ ಶೆಟ್ಟರ್ ಎಚ್ಚರಿಕೆ

ಅವಳಿನಗರದಲ್ಲಿ ಸಿಆರ್​ಎಫ್ ಸೇರಿ ವಿವಿಧ ಅನುದಾನದಡಿ ನಡೆದಿರುವ ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ದರ್ಗಾ, ಇತರ ಪ್ರಾರ್ಥನಾ ಸ್ಥಳಗಳನ್ನು ತೆರವು ಮಾಡಬೇಕೆಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಾರದ ಹಿಂದೆ ಒತ್ತಾಯ ಮಾಡಿದ್ದಾರೆ.

ಎಂಟತ್ತು ದಿನದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಕಟ್ಟಡಗಳನ್ನು ತೆರವು ಮಾಡದಿದ್ದರೆ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಎಚ್ಚರಿಕೆ ನೀಡಿ ಆಗಲೇ ವಾರ ಕಳೆದಿದೆ. ಆದರೆ, ಬಿಆರ್​ಟಿಎಸ್ ಅಧಿಕಾರಿಗಳಿಂದ ತೆರವು ಕುರಿತು ಯಾವುದೇ ಪ್ರಕ್ರಿಯೆ ನಡೆದಂತಿಲ್ಲ. ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ.

ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಇಂತಹ ಸ್ಥಳಗಳನ್ನು ಸ್ಥಳಾಂತರ ಮಾಡದಿದ್ದರೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಲಿದೆ. ಈ ದಿಸೆಯಲ್ಲಿ ಬಿಜೆಪಿ ಚುನಾವಣೆ ಅಸ್ತ್ರವಾಗಿ ಮಾತ್ರ ಇಂತಹ ವಿಷಯಗಳನ್ನು ಪ್ರಸ್ತಾಪಿಸುವುದೋ ಅಥವಾ ಅವಳಿನಗರದ ವ್ಯವಸ್ಥಿತ ಅಭಿವೃದ್ಧಿ ದೃಷ್ಟಿಯಿಂದ ತಾತ್ವಿಕ ಹೋರಾಟ ಕೈಗೊಳ್ಳುವುದೋ ಎಂಬುದೂ ಜನರ ಪ್ರಶ್ನೆ.